ಗೋಶಾಲೆಯಲ್ಲಿಯೇ ಕೊವಿಡ್​ ಐಸೋಲೇಶನ್ ಕೇಂದ್ರ ಸ್ಥಾಪನೆ; ಗೋಮೂತ್ರ, ಹಾಲು, ತುಪ್ಪದ ಔಷಧಗಳಿಂದಲೇ ಚಿಕಿತ್ಸೆ

ಹಳ್ಳಿಗಳಲ್ಲಿ ಕೊವಿಡ್​ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲು ಇತ್ತೀಚೆಗಷ್ಟೇ ಗುಜರಾತ್ ಸರ್ಕಾರ ಅನುಮತಿ ನೀಡಿದೆ.

ಗೋಶಾಲೆಯಲ್ಲಿಯೇ ಕೊವಿಡ್​ ಐಸೋಲೇಶನ್ ಕೇಂದ್ರ ಸ್ಥಾಪನೆ; ಗೋಮೂತ್ರ, ಹಾಲು, ತುಪ್ಪದ ಔಷಧಗಳಿಂದಲೇ ಚಿಕಿತ್ಸೆ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: May 09, 2021 | 11:19 AM

ಗೋಮೂತ್ರ ಸೇವನೆಯಿಂದ ಕೊರೊನಾದಿಂದ ಪಾರಾಗಬಹುದು ಎಂದು ಇತ್ತೀಚೆಗಷ್ಟೇ ಬಿಜೆಪಿ ಶಾಸಕರೊಬ್ಬರು ಹೇಳಿದ್ದರು. ಇದೊಂದು ಅಭಿಪ್ರಾಯ ಕೊರೊನಾ ಕಾಲಿಟ್ಟಾಗಿನಿಂದಲೂ ಆಗಾಗ ವ್ಯಕ್ತವಾಗುತ್ತಲೇ ಇದೆ. ಆದರೆ ಗುಜರಾತ್​ನ ಬನಸ್ಕಾಂತ ಜಿಲ್ಲೆಯ ಟೆಟೋಡಾ ಗ್ರಾಮದಲ್ಲಿರುವ ರಾಜಾರಾಮ ಗೋಶಾಲಾ ಆಶ್ರಮದಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗಿದೆ. ಇಲ್ಲಿ ಗೋ ಶಾಲೆಯಲ್ಲಿಯೇ ಕೊವಿಡ್ 19 ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, ರೋಗಿಗಳಿಗೆ ಗೋಮೂತ್ರ, ಗೋವಿನ ಹಾಲನ್ನು ಬಳಸಿ ತಯಾರಿಸಿದ ಮಾತ್ರೆಗಳನ್ನೇ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿನ ರೋಗಿಗಳು ಅಲೋಪಥಿಕ್​ ಔಷಧಗಳನ್ನು ಬಳಸುತ್ತಿಲ್ಲ. ಈ ರಾಜಾರಾಮ ಗೋಶಾಲಾ ಆಶ್ರಮ, ಗುಜರಾತ್​ನ ಗೋಧಾಮ ಮಹಾತೀರ್ಥ ಪಾತ್ಮೇಡಾದ ಒಂದು ಶಾಖೆಯಾಗಿದೆ.

ಈ ಕೊವಿಡ್​ ಕಾಳಜಿ ಕೇಂದ್ರದ ಹೆಸರು ವೇದಲಕ್ಷಣ ಪಂಚಗವ್ಯ ಆಯುರ್ವೇದ ಕೊವಿಡ್ ಐಸೋಲೇಶನ್ ಕೇಂದ್ರ. ಮೇ 5ರಂದು ನಿರ್ಮಾಣವಾದ ಈ ಕೊವಿಡ್​ ಕೇಂದ್ರದಲ್ಲಿ ಸದ್ಯ 7 ಕೊವಿಡ್​ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವಿಲ್ಲಿ ಕೊವಿಡ್ 19 ರೋಗಿಗಳಿಗೆ ಹಸುವಿನ ಹಾಲು, ತುಪ್ಪ, ಮೂತ್ರದಿಂದ ತಯಾರಿಸಲಾದ ಎಂಟು ರೀತಿಯ ಆಯುರ್ವೇದಿಕ್ ಮಾತ್ರೆಗಳನ್ನು ನೀಡುತ್ತಿದ್ದೇವೆ ಎಂದು ಗೋಧಾಮ ಮಹಾತೀರ್ಥ ಪಾತ್ಮೇಡಾದ ಬನಸ್ಕಾಂತ ಜಿಲ್ಲೆ ಶಾಖೆಯ ಟ್ರಸ್ಟೀ ಮೋಹನ್​ ಜಾಧವ್ ತಿಳಿಸಿದ್ದಾರೆ.

ಕೊವಿಡ್ 19 ಲಕ್ಷಣ ಇರುವವರಿಗೆ ನಾವು ಪ್ರಾರಂಭದಲ್ಲಿ ಪಂಚಗವ್ಯ ಥೆರಪಿ ನೀಡುತ್ತೇವೆ. ಗೋಮೂತ್ರದಿಂದ ಮಾಡಲಾದ ಗೋ ತೀರ್ಥವನ್ನು ಕೊಡುತ್ತೇವೆ. ಕೆಮ್ಮಿಗೆ ಗೋ ಮೂತ್ರದಿಂದ ತಯಾರಿಸಲಾದ ಮಾತ್ರೆಯಿಂದ ಚಿಕಿತ್ಸೆ ನೀಡಲಾಗುತ್ತದೆ. ಹಸುವಿನ ಹಾಲಿನಿಂದ ತಯಾರಿತವಾಗುವ ಚ್ಯವನಪ್ರಾಶ ನೀಡುವ ಮೂಲಕ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲಾಗುವುದು ಎಂದು ವಿವರಿಸಿದ್ದಾರೆ.

ಈ ಐಸೋಲೇಶನ್​ ಕೇಂದ್ರದಲ್ಲಿ ಇಬ್ಬರು ಆಯುರ್ವೇದಿಕ್​ ವೈದ್ಯರಿದ್ದು, ಅವರು ಔಷಧಗಳನ್ನು ಸೂಚಿಸುತ್ತಾರೆ. ಕೊರೊನಾ ಸೋಂಕಿನ ತೀವ್ರತೆ ನೋಡಿಕೊಂಡು ಕೆಲವರಿಗೆ ಅಲೋಪಥಿಕ್​ ಔಷಧವನ್ನೂ ನೀಡಲಾಗುವುದು. ಇದಕ್ಕಾಗಿ ಇಬ್ಬರು ಅದೇ ಕ್ಷೇತ್ರದ ವೈದ್ಯರನ್ನೂ ನೇಮಕ ಮಾಡಿಕೊಂಡಿದ್ದೇವೆ ಎಂದೂ ಜಾಧವ್​ ತಿಳಿಸಿದ್ದಾರೆ. ಹಾಗೇ, ಕೊವಿಡ್ ರೋಗಿಗಳಿಗೆ ಎಲ್ಲ ರೀತಿಯ ಚಿಕಿತ್ಸೆಯನ್ನೂ ಉಚಿತವಾಗಿಯೇ ನೀಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಹಳ್ಳಿಗಳಲ್ಲಿ ಕೊವಿಡ್​ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲು ಇತ್ತೀಚೆಗಷ್ಟೇ ಗುಜರಾತ್ ಸರ್ಕಾರ ಅನುಮತಿ ನೀಡಿದೆ. ಅದನ್ನು ಈ ಆಯುರ್ವೇದಿಕ್​ ಕೇಂದ್ರ ಸದುಪಯೋಗಪಡಿಸಿಕೊಂಡು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ.

ಇದನ್ನೂ ಓದಿ:  ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ಹೆಸರು ಬಹುತೇಕ ಖಚಿತ; ಇಂದು ಮಧ್ಯಾಹ್ನ ಘೋಷಣೆ ಸಾಧ್ಯತೆ

ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಬೀದರ್​ ಜಿಲ್ಲಾಸ್ಪತ್ರೆಯ ವೈದ್ಯರು