ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ಹೆಸರು ಬಹುತೇಕ ಖಚಿತ; ಇಂದು ಮಧ್ಯಾಹ್ನ ಘೋಷಣೆ ಸಾಧ್ಯತೆ

Himanta Biswa Sarma: ಶನಿವಾರ ಹಾಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮತ್ತು ಹಿಮಂತ ಬಿಸ್ವ ಶರ್ಮಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದರು.

ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ಹೆಸರು ಬಹುತೇಕ ಖಚಿತ; ಇಂದು ಮಧ್ಯಾಹ್ನ ಘೋಷಣೆ ಸಾಧ್ಯತೆ
ಹಿಮಂತ ಬಿಸ್ವ ಶರ್ಮಾ
Follow us
ರಶ್ಮಿ ಕಲ್ಲಕಟ್ಟ
|

Updated on:May 09, 2021 | 10:58 AM

ಗುವಾಹಟಿ: ಅಸ್ಸಾಂನಲ್ಲಿ ಹಿಮಂತ ಬಿಸ್ವ ಶರ್ಮಾ ಅವರು ಮುಖ್ಯಮಂತ್ರಿ ಸ್ಥಾನಕ್ಕೇರುವ ಸಾಧ್ಯತೆ ದಟ್ಟವಾಗಿದೆ. ಶನಿವಾರ ರಾತ್ರಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂದು ಮೂಲಗಳು ವರದಿ ಮಾಡಿವೆ. ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಾರ್ಯಾಲಯದಿಂದ ಅನುಮತಿ ಸಿಕ್ಕಿದರೆ ಭಾನುವಾರ ಮಧ್ಯಾಹ್ನ ವೇಳೆ ಶರ್ಮಾ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಶನಿವಾರ ಹಾಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮತ್ತು ಹಿಮಂತ ಬಿಸ್ವ ಶರ್ಮಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದರು. ನಡ್ಡಾ ಅವರ ಮನೆಯಲ್ಲಿ ಎರಡು ಸುತ್ತಿನ ಸಭೆ ನಡೆದಿದೆ. ಸಭೆ ಮುಗಿದ ನಂತರ ಸೋನೊವಾಲ್ ಮತ್ತು ಶರ್ಮಾ ವಿಶೇಷ ವಿಮಾನ ಮೂಲಕ ರಾತ್ರಿ ಗುವಾಹಟಿಗೆ ತಲುಪಿದ್ದಾರೆ.

ಶಾಸಕಾಂಗ ಪಕ್ಷವು ಈ ವಿಷಯದ ಬಗ್ಗೆ ಇನ್ನೂ ಸಭೆ ನಡೆಸಿಲ್ಲ . ಇದು ಈಗ ಕೇವಲ ಒಂದು ಔಪಚಾರಿಕ ಎಂದು ಶರ್ಮಾ ಅವರ ಬೆಂಬಲಿಗರು ಹೇಳಿದ್ದು ಸಾಮಾಜಿಕ ಮಾಧ್ಯಮದಲ್ಲಿ ಶರ್ಮಾ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲಾಗಿದೆ . ಕೇಂದ್ರ ಸಚಿವ ಎನ್.ಎಸ್.ತೋಮರ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಸಭೆಗೆ ಕೇಂದ್ರ ವೀಕ್ಷಕರಾಗಿರುವ ಸಾಧ್ಯತೆ ಇದೆ ಎಂದು ಬಿಜೆಪಿಯ ನಾಯಕರೊಬ್ಬರು ಹೇಳಿದ್ದಾರೆ.

126 ಸದಸ್ಯರ ಅಸ್ಸಾಂ ವಿಧಾನಸಭೆಗೆ ಚುನಾವಣೆಯಲ್ಲಿ ಬಿಜೆಪಿ 60 ಸ್ಥಾನಗಳನ್ನು ಗೆದ್ದರೆ, ಅದರ ಮೈತ್ರಿ ಪಾಲುದಾರರಾದ ಅಸೋಮ್ ಗಣ ಪರಿಷತ್ (ಎಜಿಪಿ) ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಕ್ರಮವಾಗಿ 9 ಮತ್ತು 6 ಸ್ಥಾನಗಳನ್ನು ಗೆದ್ದಿವೆ .

ಅಸ್ಸಾಂನ ಸ್ಥಳೀಯರಾಗಿರುವ ಸೊನೊವಾಲ್-ಕಾಚಾರಿ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ ಸರ್ಬಾನಂದ ಸೋನೊವಾಲ್. ಈಶಾನ್ಯ ಪ್ರಜಾಪ್ರಭುತ್ವ ಒಕ್ಕೂಟದ ಸಂಚಾಲಕರು ಆಗಿರುವ ಅಸ್ಸಾಮೀಸ್ ಬ್ರಾಹ್ಮಣರಾಗಿದ್ದಾರೆ ಶರ್ಮಾ. ಇವರಿಬ್ಬರೂ ಅಸ್ಸಾಂ ಸರ್ಕಾರದಲ್ಲಿ ಉನ್ನತ ಹುದ್ದೆಗೆ ಸ್ಪರ್ಧಿಗಳಾಗಿದ್ದರು.

2014 ರ ಚುನಾನಣೆಗೆ ಮುನ್ನ ಬಿಜೆಪಿ ಸೇರಿದವರಾಗಿದ್ದಾರೆ ಶರ್ಮಾ. ಈಶಾನ್ಯ ಪ್ರದೇಶಗಳಲ್ಲಿ ಪಕ್ಷದ ಮುಖ್ಯ ಟ್ರಬಲ್ ಶೂಟರ್ ಆಗಿದ್ದಾರೆ ಇವರು. ಕಳೆದ ತಿಂಗಳು ಹಿಂದೂಸ್ತಾನ್ ಟೈಮ್ಸ್ ನಡೆಸಿದ ಸಂದರ್ಶನದಲ್ಲಿ ನೀವು ಮುಖ್ಯಮಂತ್ರಿಯಾಗುತ್ತಿದ್ದೀರಾ ಎಂದು ಕೇಳಿದಾಗ ಅಂತಿಮ ನಿರ್ಧಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರದ್ದಾಗಿರುತ್ತದೆ ಎಂದು ಹೇಳಿದ್ದರು.

ಇವರಲ್ಲಿ ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡಿದರೆ , ಇನ್ನೊಬ್ಬರು ಅಸ್ಸಾಂನಲ್ಲಿ ಉಳಿಯಲು ಸಾಧ್ಯವಿಲ್ಲ. ಎರಡನೆಯದಾಗಿ, ಇಂದಿನಿಂದ ಮೂರು ವರ್ಷಗಳ ನಂತರ ಸಾರ್ವತ್ರಿಕ ಚುನಾವಣೆಗೆ ನೇತೃತ್ವ ವಹಿಸಲು ಯಾರು ಹೆಚ್ಚು ಸೂಕ್ತರು ಎಂದು ಪಕ್ಷ ನಿರ್ಧರಿಸಬೇಕಾಗಿತ್ತು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಇದನ್ನೂ ಓದಿ: ಸರ್ಬಾನಂದ ಸೋನೊವಾಲ್ ಅಥವಾ ಹಿಮಾಂತ ಬಿಸ್ವ ಶರ್ಮಾ: ಅಸ್ಸಾಂ ಮುಖ್ಯಮಂತ್ರಿ ಸ್ಥಾನ ಯಾರಿಗೆ?

Assam Elections 2021: ಅಸ್ಸಾಂನ 8 ಪತ್ರಿಕೆಗಳಲ್ಲಿ ಬಿಜೆಪಿ ಜಾಹೀರಾತು; ಸರ್ಬಾನಂದ ಸೋನೊವಾಲ್, ಜೆಪಿ ನಡ್ಡಾ ವಿರುದ್ಧ ಎಫ್ಐಆರ್

(Himanta Biswa Sarma is likely to be named Assams next chief minister)

Published On - 10:52 am, Sun, 9 May 21