ಸರ್ಬಾನಂದ ಸೋನೊವಾಲ್ ಅಥವಾ ಹಿಮಾಂತ ಬಿಸ್ವ ಶರ್ಮಾ: ಅಸ್ಸಾಂ ಮುಖ್ಯಮಂತ್ರಿ ಸ್ಥಾನ ಯಾರಿಗೆ?
Assam Election 2021: 126 ಸೀಟುಗಳಿರುವ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 75ಸೀಟುಗಳನ್ನು ಗೆದ್ದು ಕೊಂಡಿದೆ. ಚುನಾವಣಾ ಫಲಿತಾಂಶ ಘೋಷಣೆಯಾಗಿ ಎರಡು ದಿನಗಳಾಗಿದ್ದರೂ ಅಸ್ಸಾಂನ ಮುಖ್ಯಮಂತ್ರಿ ಯಾರಾಗಾಲಿದ್ದಾರೆ ಎಂಬ ತೀರ್ಮಾನವನ್ನು ಬಿಜೆಪಿ ಈವರೆಗೆ ಪ್ರಕಟಿಸಿಲ್ಲ.
ಗುವಾಹಟಿ: ಅಸ್ಸಾಂನಲ್ಲಿ ಸರ್ಬಾನಂದ ಸೋನೊವಾಲ್ ಎರಡನೇ ಬಾರಿ ಅಧಿಕಾರಕ್ಕೇರಲಿದ್ದಾರಾ? ಅಥವಾ ಹಿಮಂತ ಬಿಸ್ವ ಶರ್ಮಾ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿಯಲಿದೆಯೇ? ಎಂಬ ಪ್ರಶ್ನೆಗೆ ಉತ್ತರ ಸಿಗಲು ಅಸ್ಸಾಂ ಜನರು ಕಾಯುತ್ತಿದ್ದಾರೆ. ಚುನಾವಣಾ ಫಲಿತಾಂಶ ಘೋಷಣೆಯಾಗಿ ಎರಡು ದಿನಗಳಾಗಿದ್ದರೂ ಅಸ್ಸಾಂನ ಮುಖ್ಯಮಂತ್ರಿ ಯಾರಾಗಾಲಿದ್ದಾರೆ ಎಂಬ ತೀರ್ಮಾನವನ್ನು ಬಿಜೆಪಿ ಈವರೆಗೆ ಪ್ರಕಟಿಸಿಲ್ಲ.
126 ಸೀಟುಗಳಿರುವ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 75 ಸೀಟುಗಳನ್ನು ಗೆದ್ದು ಕೊಂಡಿದೆ. ಅದೇ ವೇಳೆ ಕಾಂಗ್ರೆಸ್ ನೇತೃತ್ವದ ಮಾಹಾಜೋತ್ ಮೈತ್ರಿಕೂಟ 50 ಸೀಟುಗಳನ್ನು ಗೆದ್ದಿದೆ. ಜೈಲಿನಲ್ಲಿರುವ ಅಖಿಲ್ ಗೊಗೊಯಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.
ಮಂಗಳವಾರ ಗುವಾಹಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶರ್ಮಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸದ್ಯ ಕೊಲ್ಕತ್ತಾದಲ್ಲಿದ್ದಾರೆ. ಹಾಗಾಗಿ ಈ ಬಗ್ಗೆ ಇವತ್ತು ಯಾವುದೇ ಸಭೆ ನಡೆಯುವ ಸಾಧ್ಯತೆ ಇಲ್ಲ. ನಾಳೆ ಅಥವಾ ನಾಡಿದ್ದು ಈ ಬಗ್ಗೆ ಸಭೆ ನಡೆಯಬಹುದು ಎಂದಿದ್ದಾರೆ.
ದೆಹಲಿಯಿಂದಲೇ ಎಲ್ಲವೂ ನಿರ್ಧಾರವಾಗುವ ಕಾರಣ ನಾವು ಕಾಯಬೇಕಿದೆ. ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರು ದೆಹಲಿಯಲ್ಲಿ ಸಭೆ ನಡೆಸುತ್ತಾರೆ. ಇಲ್ಲಿ ಯಾರಾದಾರೂ ಬಂದು ಕೆಲವು ಜನರ ಅಭಿಪ್ರಾಯಗಳನ್ನು ಪಡೆಯುತ್ತಾರೆ ಎಂದಿದ್ದಾರೆ.
ಈ ಬಗ್ಗೆ ದಿ ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತನಾಡಿದ ಬಿಜೆಪಿ ಅಧ್ಯಕ್ಷ ರಂಜೀತ್ ದಾಸ್, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬಿಜೆಪಿಯ ಸಂಸದೀಯ ಮಂಡಳಿಯ ವೀಕ್ಷಕರಾಗಿ ಬುಧವಾರ ಇಲ್ಲವೇ ಗುರುವಾರ ಗುವಾಹಟಿಗೆ ಬರಲಿದ್ದಾರೆ ಎಂದಿದ್ದಾರೆ.
ನಾವು ನಮ್ಮ ಆಂತರಿಕ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಸಂಸದರು ಮತ್ತು ಶಾಸಕರ ಅಭಿಪ್ರಾಯ ತೆಗೆದುಕೊಳ್ಳಲಾಗುವುದು. ಪಕ್ಷವು ಏನೇ ನಿರ್ಧರಿಸಿದರೂ ನಾವು ಅನುಸರಿಸುತ್ತೇವೆ . ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅವರು ಹೇಳಿದ್ದಾರೆ.
2016 ರಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟ ಸೋನೊವಾಲ್ ಅವರನ್ನು ಬಿಜೆಪಿ ಮುಖ್ಯಮಂತ್ರಿಯಾಗಿ ಘೋಷಿಸಿಲ್ಲ. ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಸಿದ್ಧತೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದಂತಹ ವಿವಾದಾತ್ಮಕ ವಿಷಯಗಳು ಇದ್ದರೂ ಸೊನೊವಾಲ್ ಎಲ್ಲವನ್ನೂ ನಿಭಾಯಿಸಿದ್ದರು.
A mandate for Sabhyata, Suraksha & Vikas.
People have rewarded BJP+ for pro-people, development oriented policies that our Govt has undertaken under PM @narendramodi ji’s leadership.
I bow to the people of Assam for the huge mandate & promise to continue the development journey pic.twitter.com/GpHeNWjwpn
— Sarbananda Sonowal (@sarbanandsonwal) May 2, 2021
ಅದೇ ವೇಳೆ ಈಶಾನ್ಯ ರಾಜ್ಯದ ಅತ್ಯಂತ ಪ್ರಭಾವಶಾಲಿ ರಾಜಕಾರಣಿಯಾಗಿದ್ದಾರೆ ಶರ್ಮಾ. ಬಿಜೆಪಿಯ ಪ್ರಮುಖ ನಾಯಕರಾಗಿರುವ ಶರ್ಮಾ ರಾಜ್ಯದ ಟ್ರಬಲ್ ಶೂಟರ್ ಆಗಿದ್ದಾರೆ. ಬಿಜೆಪಿ ನೇತೃತ್ವದ ಈಶಾನ್ಯದ ಪ್ರಾದೇಶಿಕ ಪಕ್ಷ ಮತ್ತು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಚಾಲಕರೂ ಆಗಿದ್ದಾರೆ ಇವರು .
ಅಸ್ಸಾಂನ ಆರೋಗ್ಯ ಸಚಿವರಾಗಿ ಕೊವಿಡ್ ಬಿಕ್ಕಟ್ಟನ್ನು ಶರ್ಮಾ ನಿರ್ವಹಿಸಿದ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ . ಅಷ್ಟೇ ಅಲ್ಲದೆ ರಾಜ್ಯದ ಹಣಕಾಸು ಸಚಿವರಾಗಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪ ಗೆಲುವು ಸಾಧಿಸಲು ಸಹಾಯ ಮಾಡಿದ ಕೆಲವು ಪ್ರಮುಖ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.