‘ಕೊರೊನಾ ಲಸಿಕೆಯ 2ಡೋಸ್ ತೆಗೆದುಕೊಂಡಿದ್ದೇನೆ..ಖಂಡಿತ ಬದುಕುತ್ತೇನೆ..’-ಖ್ಯಾತ ಸರ್ಜನ್ ಆಡಿದ್ದ ಕೊನೇ ಮಾತುಗಳು
ದೇಶದಲ್ಲಿ ಕೊರೊನಾ ಲಸಿಕೆಯನ್ನು ಮೊದಲ ಹಂತದಲ್ಲಿ ನೀಡಿದ್ದು ಕೊರೊನಾ ವಾರಿಯರ್ಸ್ ಎನಿಸಿಕೊಂಡ ಆರೋಗ್ಯ ಸಿಬ್ಬಂದಿಗೆ. ಹಾಗೇ ಡಾ. ರಾವತ್ ಕೂಡ ಮಾರ್ಚ್ ಪ್ರಾರಂಭದಲ್ಲಿ ಕೊವಿಶೀಲ್ಡ್ ಲಸಿಕೆಯ 2ನೇ ಡೋಸ್ ಕೂಡ ಪಡೆದಿದ್ದರು.
ನಾನೂ ಎರಡೂ ಡೋಸ್ ಲಸಿಕೆ ಪಡೆದಿದ್ದೇನೆ..ಖಂಡಿತ ಕೊರೊನಾ ಸೋಂಕಿನಿಂದ ಗುಣಮುಖನಾಗಿ ಬರುತ್ತೇನೆ..ದೆಹಲಿಯ ಸರೋಜ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ನಲ್ಲಿ ಮಲಗುವುದಕ್ಕೂ ಮೊದಲು ಖ್ಯಾತ ಸರ್ಜನ್ ಡಾ. ಅನಿಲ್ ಕುಮಾರ್ ರಾವತ್ ತಮ್ಮ ಸಹೋದ್ಯೋಗಿಗಳಿಗೆ ಹೇಳಿದ್ದ ಮಾತುಗಳಿವು. ಇವರಿಗೆ 58 ವರ್ಷ. ಎರಡೂ ಡೋಸ್ ಲಸಿಕೆ ಪಡೆದರೂ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆದರೆ ಅವರಿಗೇನೋ ನಂಬಿಕೆ, ನಾನು ಲಸಿಕೆ ಪಡೆದಿದ್ದೇನೆ.. ಜೀವ ಹೋಗುವುದಿಲ್ಲವೆಂದು. ಆದರೆ ಆ ನಂಬಿಕೆ ಸುಳ್ಳಾಯಿತು. ಶನಿವಾರ ಮುಂಜಾನೆ ಕೊವಿಡ್ ಸೋಂಕಿನಿಂದ ಮೃತರಾಗಿದ್ದಾರೆ.
ಅನಿಲ್ ಕುಮಾರ್ ರಾವತ್ 1996ರಿಂದ ಅಂದರೆ ಕಳೆದ 25ವರ್ಷಗಳಿಂದಲೂ ದೆಹಲಿಯ ಸರೋಜ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಯ ಪ್ರಾರಂಭದ ದಿನಗಳಿಂದಲೂ ಇದ್ದ ಅನಿಲ್ ಕುಮಾರ್ ರಾವತ್ ತಮ್ಮ ಕೊನೆಯುಸಿರನ್ನೂ ಅಲ್ಲಿಯೇ ಚೆಲ್ಲಿದ್ದಾರೆ. ಇವರೊಬ್ಬ ರಿಯಲ್ ಜಂಟ್ಲ್ಮೆನ್, ಸದಾ ಖುಷಿಯಾಗುತ್ತಿದ್ದ ತಜ್ಞ ವೈದ್ಯ ಎನ್ನುತ್ತಾರೆ ಅವರ ಸಹೋದ್ಯೋಗಿಗಳು.
ದೇಶದಲ್ಲಿ ಕೊರೊನಾ ಲಸಿಕೆಯನ್ನು ಮೊದಲ ಹಂತದಲ್ಲಿ ನೀಡಿದ್ದು ಕೊರೊನಾ ವಾರಿಯರ್ಸ್ ಎನಿಸಿಕೊಂಡ ಆರೋಗ್ಯ ಸಿಬ್ಬಂದಿಗೆ. ಹಾಗೇ ಡಾ. ರಾವತ್ ಕೂಡ ಮಾರ್ಚ್ ಪ್ರಾರಂಭದಲ್ಲಿ ಕೊವಿಶೀಲ್ಡ್ ಲಸಿಕೆಯ 2ನೇ ಡೋಸ್ ಕೂಡ ಪಡೆದಿದ್ದರು. ಇವರು ಲಸಿಕೆಯ ಎರಡೂ ಡೋಸ್ ಪಡೆದಿದ್ದನ್ನು ಸರೋಜ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪಿ.ಕೆ.ಭಾರದ್ವಾಜ್ ಖಚಿತಪಡಿಸಿದ್ದಾರೆ.
ಅನಿಲ್ ಕುಮಾರ್ ರಾವತ್ ನನ್ನ ಹಿರಿಯ ಮಗನಂತೆ ಇದ್ದರು. ದೆಹಲಿಯ ಮೌಲಾನಾ ಅಜಾದ್ ಮೆಡಿಕಲ್ ಕಾಲೇಜಿನಲ್ಲಿ ಎಂಎಸ್ ಮಾಡಿದ್ದರು. 1994ರಲ್ಲಿ ಆರ್ಬಿ ಜೈನ್ ಆಸ್ಪತ್ರೆಯಲ್ಲಿ ವೃತ್ತಿ ಶುರು ಮಾಡಿದ್ದರು. ಇದೀಗ ನನ್ನ ಕಣ್ಣೆದುರೇ ಜೀವ ಬಿಟ್ಟಿದ್ದಾರೆ. ಕೊನೆ ಉಸಿರು ಇರುವವರೆಗೂ ನನ್ನ ಜೊತೆಯೇ ಇದ್ದರು ಎಂದು ಡಾ. ಪಿ.ಕೆ.ಭಾರದ್ವಾಜ್ ಭಾವುಕರಾದರು.
ಅನಿಲ್ ರಾವತ್ ಅವರು 10-12ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಮೊದಲು ಮನೆಯಲ್ಲೇ ಐಸೋಲೇಶನ್ನಲ್ಲಿ ಇದ್ದ ಅವರಲ್ಲಿ ಕ್ರಮೇಣ ಆಕ್ಸಿಜನ್ ಮಟ್ಟ ಕಡಿಮೆಯಾಗುತ್ತ ಬಂದಿತ್ತು. ಹಾಗಾಗಿ ಅವರು ಕೆಲಸ ಮಾಡುತ್ತಿದ್ದ ಸರೋಜ್ ಆಸ್ಪತ್ರೆಗೇ ದಾಖಲು ಮಾಡಲಾಗಿತ್ತು. ಈಗೆರಡು ದಿನಗಳ ಹಿಂದೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಗಂಭೀರಸ್ವರೂಪದ ನ್ಯುಮೋನಿಯಾಕ್ಕೆ ತುತ್ತಾಗಿದ್ದ ಅವರನ್ನು ಉಳಿಸಿಕೊಳ್ಳಲು ಆಸ್ಪತ್ರೆ ವೈದ್ಯರ ತಂಡ ಇನ್ನಿಲ್ಲದಂತೆ ಶ್ರಮಿಸಿದೆ. ಶ್ವಾಸಕೋಶದ ಕಸಿ ಮಾಡಲು ಸಿದ್ಧತೆ ನಡೆಸಿದ್ದೆವು ಎಂದು ಭಾರದ್ವಾಜ್ ಹೇಳಿದ್ದಾರೆ. ಇದು ನಮಗೆ ಅತಿದೊಡ್ಡ ನಷ್ಟ. ನೋವು ಕೊಡುವ ಸಂಗತಿ ಎಂದಿದ್ದಾರೆ.
ರಾವತ್ ಅವರ ಪತ್ನಿಯೂ ವೈದ್ಯೆಯೇ ಆಗಿದ್ದಾರೆ. ಇವರೂ ಸಹ ಸರೋಜ್ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು. ಇವರಿಗೆ ಒಬ್ಬ ಪುತ್ರಿಯಿದ್ದಾಳೆ. ರಾವತ್ ನಿಧನಕ್ಕೆ ಇಡೀ ಆಸ್ಪತ್ರೆಯ ವೈದ್ಯರ ತಂಡ ಕಂಬನಿ ಮಿಡಿದಿದೆ.
ಇದನ್ನೂ ಓದಿ: Sri Murali: ಕೊವಿಡ್ ಸಂಕಷ್ಟದಲ್ಲಿ 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಊಟ ನೀಡುತ್ತಿರುವ ನಟ ಶ್ರೀಮುರಳಿ
ನಾಳೆ ಬೆಳಗ್ಗೆಯಿಂದಲೇ ಇಡೀ ರಾಜ್ಯ ಲಾಕ್ಡೌನ್.. 10 ಗಂಟೆ ಬಳಿಕ ಹೊರಗೆ ಕಾಣಿಸಿಕೊಂಡ್ರೆ ಬೀಳುತ್ತೆ ಕೇಸ್, ಫೈನ್
Published On - 9:58 am, Sun, 9 May 21