ಪುದುಚೇರಿ: ಪುದುಚೇರಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ಸಂಜೆ 4 ಗಂಟೆವರೆಗೆ ಶೇಕಡಾ 66.58 ಮತದಾನ ದಾಖಲಾಗಿದೆ. ಎಐಎನ್ಆರ್ಸಿ ನಾಯಕ ರಂಗಸ್ವಾಮಿ ಸ್ಪರ್ಧಿಸುತ್ತಿರುವ ಯಾನಂ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ ಅಂದರೆ ಶೇ 72.34 ಮತದಾನವಾಗಿದೆ. ಅದೇ ವೇಳೆ ಮಾಹೆಯಲ್ಲಿ ಅತೀ ಕಡಿಮೆ ಶೇ 57.52 ಮತದಾನವಾಗಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು 10,04, 507 ಮತದಾರರು ಇಲ್ಲಿದ್ದಾರೆ. 324 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಾಂಗ್ರೆಸ್- ಡಿಎಂಕೆ ಮೈತ್ರಿಕೂಟದ ವಿರುದ್ಧ ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್, ಆಲ್ ಇಂಜಿಯಾ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ(AIADMK) ಮತ್ತು ಬಿಜೆಪಿ ಪಕ್ಷದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA) ಮೈತ್ರಿಕೂಟ ಸ್ಪರ್ಧಿಸುತ್ತಿದೆ.
ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್ 15, ಡಿಎಂಕೆ-13, ಸಿಪಿಐ , ವಿಕೆಸಿ ಪಕ್ಷ ತಲಾ ಒಂದು ಸೀಟಿನಲ್ಲಿ ಸ್ಪರ್ಧಿಸುತ್ತಿದೆ
30 ಸೀಟುಗಳ ಪೈಕಿ ಎನ್ ಆರ್ ಕಾಂಗ್ರೆಸ್ (AINRC) 16 ಸೀಟಗಳಲ್ಲಿ ಬಿಜೆಪಿ 9 ಸೀಟುಗಳಲ್ಲಿ ಮತ್ತು ಎಐಎಡಿಎಂಕೆ 5 ಸೀಟುಗಳಲ್ಲಿ ಸ್ಪರ್ಧಿಸುತ್ತಿದೆ.
ಕಣದಲ್ಲಿಲ್ಲ ವಿ.ನಾರಾಯಣಸ್ವಾಮಿ
ಈ ಬಗ್ಗೆ ಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ಪ್ರದೇಶ ಕಾಂಗ್ರೆಸ್ ಸಮಿತಿ ಎ.ವಿ.ಸುಬ್ರಣಿಯನ್ ಅವರು ಕರೈಕಲ್ (ಉತ್ತರ) ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ನಾನು ಮತ್ತು ಕಾಂಗ್ರೆಸ್ ಸಂಸದೀಯ ಸದಸ್ಯ ವಿ.ವೈಥಿಲಿಂಗಂ ಚುನಾವಣೆ ಸಂಬಂಧಿತ ಪಕ್ಷದ ಕಾರ್ಯ ಚಟುವಟಿಕೆಗಳ ಜವಾಬ್ದಾರಿ ವಹಿಸಲಿದ್ದೇವೆ. ಇದೇ ಕಾರಣದಿಂದ ನಾನು ಚುನಾವಣೆ ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಸೆಕ್ಯುಲರ್ ಡೆಮಾಕ್ರಟಿಕ್ ಮೈತ್ರಿಕೂಟದ (SDA) ನೇತೃತ್ವ ವಹಿಸಿದ್ದು 15 ಚುನಾವಣಾ ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 14 ಸೀಟುಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದ್ದು ಯಾನಂನಲ್ಲಿ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆರೋಗ್ಯ ಸಚಿವರಾಗಿದ್ದ ಕಾಂಗ್ರೆಸ್ ಪಕ್ಷದ ಮಲ್ಲಡಿ ಕೃಷ್ಣ ರಾವ್, ಎಐಎನ್ಆರ್ಸಿ ನಾಮನಿರ್ದೇಶಿತ ಎನ್. ರಂಗಸ್ವಾಮಿ ಅವರಿಗೆ ಯಾನಂನಲ್ಲಿ ಬೆಂಬಲ ನೀಡುವುದಾಗಿ ಹೇಳಿದ್ದರು. ರಾವ್ ಅವರು ಆರೋಗ್ಯ ಸಚಿವ ಸ್ಥಾನಕ್ಕೆ ಮತ್ತು ಶಾಸಕ ಸ್ಥಾನವನ್ನು ತೊರೆದಿದ್ದರು.
ಯಾನಂ ಚುನಾವಣೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವಿಳಂಬವಾಯಿತು. ಸ್ವತಂತ್ರ ಅಭ್ಯರ್ಥಿ ಕೊಲಪಳ್ಳಿ ಅಶೋಕ್ ಅವರು ಯಾನಂನಲ್ಲಿ ಕಾಂಗ್ರೆಸ್ ಬೆಂಬಲ ಬಯಸುತ್ತಿದ್ದಾರೆ. ಅವರ ಮನವಿ ಸ್ವೀಕರಿಸಿ ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ನಿರ್ದಿಷ್ಟ ಸಂಸ್ಥೆಗಳು ವಿಪಕ್ಷ ನೇತಾರರನ್ನು ಗುರಿ ಮಾಡುತ್ತಿದ್ದು, ಪುದುಚೇರಿಯಲ್ಲಿ ನಮ್ಮ ನಾಯಕರ ವಿರುದ್ಧ ಕೈಗೊಳ್ಳುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಆದಾಗ್ಯೂ ಯಾವ ಸಂಸ್ಥೆ ಎಂಬುದನ್ನು ಅವರು ವಿವರಿಸಿಲ್ಲ.
ಚುನಾವಣಾ ಅಧಿಕಾರಿಗಳು ಪಕ್ಷಬೇಧವಿಲ್ಲದೆ ವರ್ತಿಸಬೇಕು, ಇದು ನಮ್ಮ ಮನವಿ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ವಿರುದ್ಧ ಆರೋಪ ಮಾಡಿದ್ದಕ್ಕೆ ಏನು ಸಾಕ್ಷ್ಯವಿದೆ? ಎಂದು ಪ್ರಶ್ನಿಸಿದ್ದಾರೆ. ಫೆಬ್ರವರಿ 28ರಂದು ಕರೈಕಲ್ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಪುದುಚೇರಿಗೆ 15,000 ಕೋಟಿ ಕೇಂದ್ರ ಅನುದಾನ ನೀಡಿದ್ದರು. ಇದರಲ್ಲಿ ನಾನು ಗಾಂಧಿ ಕುಟುಂಬಕ್ಕೆ ಕಟ್ ಮನಿ ನೀಡಿದ್ದೆ ಎಂದಿದ್ದರು. ಆರೋಪವನ್ನು ತಿರಸ್ಕರಿಸಿದ ನಾರಾಯಣಸ್ವಾಮಿ, ಆರೋಪವನ್ನು ಸಾಕ್ಷ್ಯ ಸಮೇತ ಅಮಿತ್ ಶಾ ಸಾಬೀತು ಪಡಿಸಲಿ. ಇಲ್ಲವೇ ಸಾರ್ವಜನಿಕವಾಗಿ ಕ್ಷಮೆ ಕೇಳಲಿ. ಈ ಆರೋಪ ನಿಜವಾಗಿದ್ದರೆ ನಾನು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.