ಬಂಗಾಳ ಚುನಾವಣಾ ಕಣದಲ್ಲಿ ಮೋದಿ ‘ಝಲ್​ಮುರಿ’ ಸವಿ; ಝಾರ್​ಗ್ರಾಮ್​ನಲ್ಲಿ ಜನಸಾಮಾನ್ಯರಂತೆ ಮಿಂಚಿದ ಪ್ರಧಾನಿ

PM Narendra Modi tastes Jhalmuri at Jhargram, West Bengal: ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಝಾರ್​ಗ್ರಾಮ್​ನಲ್ಲಿ ಸ್ಥಳೀಯ ಖಾದ್ಯ 'ಝಲ್ ಮುರಿ' ಸವಿದರು. ಸಮಾವೇಶ ಮುಗಿಸಿ ಹೆಲಿಪ್ಯಾಡ್ ಕಡೆಗೆ ಸಾಗುವಾಗ ಮಾರ್ಗಮಧ್ಯೆ ಪ್ರಧಾನಿ ಅವರು ವಾಹನದಿಂದ ಇಳಿದು ಸ್ಥಳೀಯ ಅಂಗಡಿಯೊಂದಕ್ಕೆ ಧಾವಿಸಿ ಝಲ್​ಮುರಿ ಸವಿದರು.

ಬಂಗಾಳ ಚುನಾವಣಾ ಕಣದಲ್ಲಿ ಮೋದಿ ‘ಝಲ್​ಮುರಿ’ ಸವಿ; ಝಾರ್​ಗ್ರಾಮ್​ನಲ್ಲಿ ಜನಸಾಮಾನ್ಯರಂತೆ ಮಿಂಚಿದ ಪ್ರಧಾನಿ
ಪಶ್ಚಿಮ ಬಂಗಾಳದಲ್ಲಿ ಝರ್ಮುರಿ ಅಂಗಡಿಯಲ್ಲಿ ನರೇಂದ್ರ ಮೋದಿ
Image Credit source: Narendra Modi's X account

Updated on: Apr 19, 2026 | 6:56 PM

ಝಾರ್​ಗ್ರಾಮ್, (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಭಾನುವಾರ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಝಾರ್​ಗ್ರಾಮ್​ನಲ್ಲಿ (Jhargram) ಜನಸಾಮಾನ್ಯರ ಜೊತೆ ಬೆರೆತು ಸ್ಥಳೀಯ ಸಂಸ್ಕೃತಿಯ ಭಾಗವಾದರು. ಬೆಳಿಗ್ಗೆಯಿಂದಲೇ ಬರ್ಜೋರಾ ಮತ್ತು ಬಲರಾಮ್‌ಪುರಗಳಲ್ಲಿ ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ, ಮಧ್ಯಾಹ್ನದ ವೇಳೆಗೆ ಬುಡಕಟ್ಟು ಪ್ರಾಬಲ್ಯದ ಜಾರ್ಗ್ರಾಮ್ ತಲುಪಿದರು. ಅಲ್ಲಿನ ಸಮಾವೇಶದ ನಂತರ, ಹೆಲಿಪ್ಯಾಡ್ ಕಡೆಗೆ ಸಾಗುವ ದಾರಿಯಲ್ಲಿ ಪ್ರಧಾನಿಯವರು ಹಠಾತ್ ಆಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಲು ಸೂಚಿಸಿದರು.

ಬಂಗಾಳಿ ರುಚಿಗೆ ಮನಸೋತ ಮೋದಿ

ರಸ್ತೆಯ ಬದಿಯಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬರು ಸಿದ್ಧಪಡಿಸುತ್ತಿದ್ದ ಬಂಗಾಳದ ಪ್ರಸಿದ್ಧ ತಿಂಡಿ ‘ಝಲ್ ಮುರಿ’ (Jhalmuri) ಪ್ರಧಾನಿಯವರ ಗಮನ ಸೆಳೆಯಿತು. ಕಾರಿನಿಂದ ಇಳಿದ ಮೋದಿ ಅವರು ನೇರವಾಗಿ ವ್ಯಾಪಾರಿಯ ಬಳಿಗೆ ತೆರಳಿ, ಅಲ್ಲಿಯೇ ತಯಾರಾದ ಬಿಸಿಬಿಸಿ ಮತ್ತು ಖಾರವಾದ ಝಲ್ ಮುರಿಯನ್ನು ಸವಿದರು.

ಇದನ್ನೂ ಓದಿ: ವಿಪಕ್ಷಗಳು ಮಹಿಳೆಯರ ಹಕ್ಕು ಕಸಿದುಕೊಂಡು ಸಂಭ್ರಮಿಸಿದ್ದು ವಿಪರ್ಯಾಸ; ಪ್ರಧಾನಿ ಮೋದಿ ವಾಗ್ದಾಳಿ

ಕಡಲೆಕಾಯಿ, ಸಾಸಿವೆ ಎಣ್ಣೆ, ಈರುಳ್ಳಿ ಮತ್ತು ವಿಶೇಷ ಮಸಾಲೆಯಿಂದ ಕೂಡಿದ ಈ ತಿಂಡಿಯನ್ನು ಸವಿಯುತ್ತಾ, ಪ್ರಧಾನಿಯವರು ಸ್ಥಳೀಯ ಜನರೊಂದಿಗೆ ಕೆಲ ಕಾಲ ಮಾತನಾಡಿದರು.

ದೇಶದ ಪ್ರಧಾನಿಯೇ ರಸ್ತೆ ಬದಿಯ ತಿಂಡಿಯನ್ನು ಸವಿಯುತ್ತಿರುವುದನ್ನು ಕಂಡ ಸ್ಥಳೀಯರು ಆಶ್ಚರ್ಯ ಮತ್ತು ಸಂತೋಷ ವ್ಯಕ್ತಪಡಿಸಿದರು. ಅನೇಕರು ಈ ಕ್ಷಣವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು.

ಈ ಕುರಿತು ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ, “ಬಂಗಾಳದ ರುಚಿ ಯಾವಾಗಲೂ ವಿಶಿಷ್ಟವಾದುದು. ಜಾರ್ಗ್ರಾಮ್‌ನ ಝಲ್ ಮುರಿ ಅತ್ಯಂತ ಸ್ವಾದಿಷ್ಟವಾಗಿತ್ತು ಮತ್ತು ಇದು ನನ್ನ ಸುದೀರ್ಘ ದಿನದ ಪ್ರಚಾರಕ್ಕೆ ಹೊಸ ಚೈತನ್ಯ ನೀಡಿತು,” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿಗೆ ವಿರೋಧಿಸಿದ್ದಕ್ಕೆ ವಿಪಕ್ಷ ಬೆಲೆ ತೆರಬೇಕಾಗುತ್ತದೆ; ಪಿಎಂ ಮೋದಿ ವಾಗ್ದಾಳಿ

ಝಾರ್​ಗ್ರಾಮ್ ಮತ್ತು ಸುತ್ತಮುತ್ತಲಿನ ಬುಡಕಟ್ಟು ಪ್ರದೇಶಗಳಲ್ಲಿ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಲು ಪ್ರಧಾನಿಯವರ ಈ ಸರಳ ನಡವಳಿಕೆ ಸಹಾಯ ಮಾಡಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಬಂಗಾಳದ ರಾಜಕೀಯ ಸಮರದಲ್ಲಿ ಮೋದಿ ಸವಿದ ‘ಝಲ್ ಮುರಿ’ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಪ್ರಧಾನಿಗಳ ಎಕ್ಸ್  ಪೋಸ್ಟ್

ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us