
ನವದೆಹಲಿ, ಅಕ್ಟೋಬರ್ 6: ಹಾರ್ಮುಜ್ ಜಲಸಂಧಿಯ ಬಳಿ ಪನಾಮ ಧ್ವಜ ಹೊಂದಿದ್ದ ವಾಣಿಜ್ಯ ನೌಕೆಯ ಮೇಲೆ ನಡೆದ ದಾಳಿಯನ್ನು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಂದು ತೀವ್ರವಾಗಿ ಖಂಡಿಸಿದೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಭಾರತ ಕರೆ ನೀಡಿದೆ. ಈ ಹಡಗಿನಲ್ಲಿ 17 ಭಾರತೀಯರು ಸೇರಿದಂತೆ ಒಟ್ಟು 19 ಸಿಬ್ಬಂದಿ ಇದ್ದರು. ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಕುರಿತು ಕಳವಳ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವಾಲಯವು ಇದು “ಭಾರತಕ್ಕೆ ತೀವ್ರ ಆತಂಕದ ವಿಷಯವಾಗಿದೆ” ಎಂದು ಹೇಳಿದೆ.
ಹಾರ್ಮುಜ್ ಹಡಗು ದಾಳಿ:
ಒಮಾನ್ ಕರಾವಳಿಯ ಬಳಿ ಹಾರ್ಮುಜ್ ಜಲಸಂಧಿಯನ್ನು ಹಾದುಹೋಗುತ್ತಿದ್ದ ‘ಎಂಟಿ ಆನ್ ಪೀಸ್’ ಎಂಬ ವಾಣಿಜ್ಯ ನೌಕೆಯ ಮೇಲೆ ಇಂದು ಬೆಳಿಗ್ಗೆ ಪ್ರೊಜೆಕ್ಟಿಲ್ ಅಪ್ಪಳಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಘಟನೆಯಲ್ಲಿ 11 ಭಾರತೀಯ ರಾಷ್ಟ್ರೀಯರು ಸೇರಿದಂತೆ ಒಟ್ಟು 12 ಸಿಬ್ಬಂದಿ ಗಾಯಗೊಂಡಿದ್ದಾರೆ.
“ಒಮಾನ್ ಕರಾವಳಿಯ ಬಳಿ ಹಾರ್ಮುಜ್ ಜಲಸಂಧಿಯನ್ನು ಹಾದುಹೋಗುತ್ತಿದ್ದ ಪನಾಮ ಧ್ವಜ ಹೊಂದಿದ ವಾಣಿಜ್ಯ ನೌಕೆ ಎಂಟಿ ಆನ್ ಪೀಸ್ ಮೇಲೆ ಇಂದು ನಡೆದ ದಾಳಿಯನ್ನು ನಾವು ಖಂಡಿಸುತ್ತೇವೆ. ಹಡಗಿನಲ್ಲಿದ್ದ ಒಟ್ಟು 19 ಸಿಬ್ಬಂದಿಯ ಪೈಕಿ 17 ಮಂದಿ ಭಾರತೀಯರಾಗಿದ್ದಾರೆ. ಗಾಯಗೊಂಡ 12 ಸಿಬ್ಬಂದಿಗಳಲ್ಲಿ 11 ಮಂದಿ ಭಾರತೀಯ ನಾವಿಕರಿದ್ದಾರೆ ಎಂಬ ಮಾಹಿತಿ ದೊರೆತಿದೆ” ಎಂದು ವಿದೇಶಾಂಗ ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 7 ದಿನಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಆಫರ್; ಅಮೆರಿಕಕ್ಕೆ ವಿಧಿಸಿದ ಷರತ್ತುಗಳೇನು?
ಈ ದಾಳಿಯ ನಂತರ, ಒಮಾನ್ ಅಧಿಕಾರಿಗಳ ನೆರವಿನೊಂದಿಗೆ ಗಾಯಗೊಂಡ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ಸ್ಥಳಾಂತರಿಸಲಾಗಿದ್ದು, ಅವರಿಗೆ ಒಮಾನ್ನ ಖಾಸಾಬ್ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಬೆಂಬಲ ನೀಡಿದ ಮತ್ತು ಬಾಧಿತ ನಾವಿಕರಿಗೆ ತುರ್ತು ನೆರವು ಒದಗಿಸಿದ ಒಮಾನ್ ಸರ್ಕಾರಕ್ಕೆ ಭಾರತ ಧನ್ಯವಾದ ಅರ್ಪಿಸಿದೆ.
“ಒಮಾನ್ ಅಧಿಕಾರಿಗಳ ಮೌಲ್ಯಯುತ ನೆರವಿನೊಂದಿಗೆ ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದ್ದು, ಖಾಸಾಬ್ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಮಾನ್ ಸರ್ಕಾರ ನೀಡಿದ ಬೆಂಬಲಕ್ಕೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಪದೇ ಪದೇ ನಡೆಯುತ್ತಿರುವ ದಾಳಿಗಳನ್ನು ಗಂಭೀರ ವಿಷಯ ಎಂದು ಬಣ್ಣಿಸಿರುವ ವಿದೇಶಾಂಗ ಸಚಿವಾಲಯವು, ವಾಣಿಜ್ಯ ನೌಕೆಗಳು, ನಾವಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಡೆಸುವ ದಾಳಿಗಳಿಗೆ ತಕ್ಷಣವೇ ತೆರೆಬೀಳಬೇಕು ಎಂದು ಆಗ್ರಹಿಸಿದೆ.
“ವಾಣಿಜ್ಯ ನೌಕಾಯಾನ, ನಾವಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದನ್ನು ತಕ್ಷಣವೇ ಕೊನೆಗೊಳಿಸಬೇಕು” ಎಂದು ಭಾರತದ ವಿದೇಶಾಂಗ ಸಚಿವಾಲಯ ಪ್ರತಿಪಾದಿಸಿದೆ. ಇದರೊಂದಿಗೆ, ಅಂತಾರಾಷ್ಟ್ರೀಯ ಜಲಮಾರ್ಗಗಳ ಮೂಲಕ ನೌಕಾಯಾನ ಮತ್ತು ವಾಣಿಜ್ಯ ಸಂಚಾರವನ್ನು ಶೀಘ್ರದಲ್ಲೇ ಮರುಸ್ಥಾಪಿಸುವಂತೆ ಭಾರತ ಆಗ್ರಹಿಸಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ದಾಳಿ; 11 ಭಾರತೀಯ ನಾವಿಕರಿಗೆ ಗಾಯ, ಒಮಾನ್ಗೆ ಸ್ಥಳಾಂತರ
ಇದಕ್ಕೂ ಮುನ್ನ ಸೆಪ್ಟೆಂಬರ್ 13ರಂದು ಒಮಾನ್ ಕರಾವಳಿಯಲ್ಲಿ ಸರಕು ಹಡಗೊಂದರ ಮೇಲೆ ನಡೆದ ದಾಳಿಯನ್ನೂ ಭಾರತ ಖಂಡಿಸಿತ್ತು, ಆ ಹಡಗಿನಲ್ಲಿ 14 ಮಂದಿ ಭಾರತೀಯರಿದ್ದರು. ಒಮಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಹತ್ತಿರದಿಂದ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು ರಕ್ಷಣಾ ಕಾರ್ಯಾಚರಣೆಗೆ ಸಮನ್ವಯಗೊಳಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. “ಪ್ರದೇಶದಲ್ಲಿ ಶಾಂತಿ ನೆಲೆಸಲು ಉದ್ವಿಗ್ನತೆಯನ್ನು ತಕ್ಷಣವೇ ಶಮನಗೊಳಿಸಬೇಕು ಹಾಗೂ ರಾಜತಾಂತ್ರಿಕ ಮಾತುಕತೆಗಳನ್ನು ಮುಂದುವರಿಸಬೇಕು” ಎಂದು ಭಾರತ ಮನವಿ ಮಾಡಿದೆ.
‘ನಾವಿಕರ ತುರ್ತು ಬೆಂಬಲ ಜಾಲ’ಕ್ಕೆ ಪ್ರಧಾನಿ ಮೋದಿ ಕರೆ:
ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಜಾಗತಿಕ ಮತ್ತು ಪ್ರಾದೇಶಿಕ ಬಿಕ್ಕಟ್ಟುಗಳಿಂದಾಗಿ ಭಾರಿ ಅಪಾಯ ಎದುರಿಸುತ್ತಿರುವ ನಾವಿಕರ ಸುರಕ್ಷತೆಗಾಗಿ ‘ನಾವಿಕರ ತುರ್ತು ಬೆಂಬಲ ಜಾಲ’ವನ್ನು ಸ್ಥಾಪಿಸಲು ಕರೆ ನೀಡಿದ್ದರು. ಜಾಗತಿಕ ವ್ಯಾಪಾರದ ಹರಿವಿನಲ್ಲಿ ನಾವಿಕರು ಪ್ರಮುಖ ಪಾತ್ರ ವಹಿಸುವುದರಿಂದ ಅವರ ಭದ್ರತೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದರು.
“ಜಾಗತಿಕ ವ್ಯಾಪಾರಕ್ಕೆ ನಾವಿಕರು ಅಪಾರ ಕೊಡುಗೆ ನೀಡುತ್ತಾರೆ, ಆದರೂ ಕಷ್ಟದ ಸಮಯದಲ್ಲಿ ಅವರಿಗೆ ಸೂಕ್ತ ಬೆಂಬಲ ಸಿಗುವುದಿಲ್ಲ. ನಾವು ‘ನಾವಿಕರ ತುರ್ತು ಬೆಂಬಲ ಜಾಲ’ವನ್ನು ಸ್ಥಾಪಿಸಬೇಕೆಂದು ನಾನು ಪ್ರಸ್ತಾಪಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ