ಸೋಂಕಿತ ತಾಯಿ ಸತ್ತಳೆಂದು ನಂಬಿಸಿ.. Free ಆಟೋ ಸವಾರಿ ಜೊತೆಗೆ ಹಣ ಸಹ ದೋಚಿದ ಐನಾತಿ ಭೂಪ!

| Updated By: KUSHAL V

Updated on: Aug 24, 2020 | 7:22 PM

ತಿರುವನಂತಪುರಂ: ತನ್ನ ತಾಯಿ ಕೊರೊನಾದಿಂದ ಮೃತಪಟ್ಟಿದ್ದಾಳೆ ಎಂದು ಚಾಲಕನನ್ನು ನಂಬಿಸಿ, ಆತನ ಆಟೋದಲ್ಲಿ ಸುಮಾರು 300 ಕಿಲೋಮೀಟರ್ ಪ್ರಯಾಣ ಮಾಡಿ, ಕೊನೆಗೆ ಚಾಲಕನಿಗೇ ಯಾಮಾರಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೋಸ ಹೋದ ಆಟೋ ಚಾಲಕ ರೇವಾಧ್ ಎಂದು ತಿಳಿದುಬಂದಿದ್ದು ಮೋಸ ಮಾಡಿದ ವ್ಯಕ್ತಿ ನಿಶಾಂತ್ ಎಂದು ಗುರುತಿಸಲಾಗಿದೆ. ತನ್ನ ದಿನದ ಕೆಲಸ ಮುಗಿಸಿ ಮನೆಗೆ ಹೊರಡಲು ಸಿದ್ಧನಾಗಿದ್ದ ರೇವಾಧ್​ನ ಬಳಿಗೆ ಬಂದ ನಿಶಾಂತ್, ತಿರುವನಂತಪುರಂಗೆ ಯಾವ ಬಸ್​ಗಳಿವೆ ಎಂದು ಕೇಳಿದ್ದಾನೆ. ಆದರೆ ಕೊನೆಯ ಬಸ್​ ಹೋಗಿದ್ದರಿಂದ, ರೇವಾಧ್ ಯಾವ […]

ಸೋಂಕಿತ ತಾಯಿ ಸತ್ತಳೆಂದು ನಂಬಿಸಿ.. Free ಆಟೋ ಸವಾರಿ ಜೊತೆಗೆ ಹಣ ಸಹ ದೋಚಿದ ಐನಾತಿ ಭೂಪ!
Follow us on

ತಿರುವನಂತಪುರಂ: ತನ್ನ ತಾಯಿ ಕೊರೊನಾದಿಂದ ಮೃತಪಟ್ಟಿದ್ದಾಳೆ ಎಂದು ಚಾಲಕನನ್ನು ನಂಬಿಸಿ, ಆತನ ಆಟೋದಲ್ಲಿ ಸುಮಾರು 300 ಕಿಲೋಮೀಟರ್ ಪ್ರಯಾಣ ಮಾಡಿ, ಕೊನೆಗೆ ಚಾಲಕನಿಗೇ ಯಾಮಾರಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೋಸ ಹೋದ ಆಟೋ ಚಾಲಕ ರೇವಾಧ್ ಎಂದು ತಿಳಿದುಬಂದಿದ್ದು ಮೋಸ ಮಾಡಿದ ವ್ಯಕ್ತಿ ನಿಶಾಂತ್ ಎಂದು ಗುರುತಿಸಲಾಗಿದೆ.

ತನ್ನ ದಿನದ ಕೆಲಸ ಮುಗಿಸಿ ಮನೆಗೆ ಹೊರಡಲು ಸಿದ್ಧನಾಗಿದ್ದ ರೇವಾಧ್​ನ ಬಳಿಗೆ ಬಂದ ನಿಶಾಂತ್, ತಿರುವನಂತಪುರಂಗೆ ಯಾವ ಬಸ್​ಗಳಿವೆ ಎಂದು ಕೇಳಿದ್ದಾನೆ. ಆದರೆ ಕೊನೆಯ ಬಸ್​ ಹೋಗಿದ್ದರಿಂದ, ರೇವಾಧ್ ಯಾವ ಬಸ್ಸ್​ಗಳಿಲ್ಲ ಎಂದು ತಿಳಿಸಿದ್ದಾನೆ.

ಆಗ ನಿಶಾಂತ್ ತಿರುವನಂತಪುರಂ ಆಸ್ಪತ್ರೆಯಲ್ಲಿ ನನ್ನ ತಾಯಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾಳೆ. ಹಾಗಾಗಿ ನಾನು ಅಲ್ಲಿಗೆ ಹೋಗಬೇಕಿದೆ, ಆದರೆ ಟ್ಯಾಕ್ಸಿ ಮಾಡಿಕೊಂಡು ಹೋಗುವಷ್ಟು ಹಣ ನನ್ನಲ್ಲಿ ಇಲ್ಲ. ದಯಾಮಾಡಿ ನಿಮ್ಮ ಆಟೋದಲ್ಲಿ ನನ್ನನ್ನು ತಿರುವನಂತಪುರಂಗೆ ತಲುಪಿಸಿ ಎಂದು ಕೇಳಿಕೊಂಡಿದ್ದಾನೆ. ಅಲ್ಲದೆ, ಸದ್ಯಕ್ಕೆ ನನ್ನ ಬಳಿ ಹಣವಿಲ್ಲ. ಆಸ್ಪತ್ರೆಯನ್ನು ತಲುಪಿದ ನಂತರ ನಿಮ್ಮ ಬಾಡಿಗೆ ಹಣವನ್ನು ನೀಡುತ್ತೇನೆಂದು ನಿಶಾಂತ್ ವಿನಂತಿಸಿಕೊಂಡಿದ್ದಾನೆ.

ನಿಶಾಂತ್​ ತಾಯಿಯ ಮರಣದ ವಿಚಾರ ತಿಳಿದ ರೇವಾಧ್ 6,500 ರೂಪಾಯಿ ಎಂದು ಬಾಡಿಗೆ ನಿಗದಿ ಮಾಡಿಕೊಂಡು, ತಿರುವನಂತಪುರಂ ಕಡೆಗೆ ಹೊರಟಿದ್ದಾನೆ. ರಾತ್ರಿಯಿಡೀ ಆಟೋ ಚಲಾಯಿಸಿ ರೇವಾಧ್ ಮುಂಜಾನೆ ಆರು ಗಂಟೆಗೆ ತಿರುವನಂತಪುರಂ ತಲುಪಿದ್ದಾನೆ.

ಈ ವೇಳೆ ಆಟೋದಲ್ಲಿ ಕುಳಿತಿದ್ದ ನಿಶಾಂತ್ ನನ್ನ ತಾಯಿಯ ಅಂತ್ಯ ಸಂಸ್ಕಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಬೇಕಾಗಿದೆ. ಹಾಗಾಗಿ ಸ್ವಲ್ಪ ಹಣ ನೀಡಿ ಎಂದು ಕೇಳಿಕೊಂಡಿದ್ದಾನೆ. ಹೀಗಾಗಿ ರೇವಾಧ್ ಆತನಿಗೆ ಒಂದು ಸಾವಿರ ರೂಪಾಯಿ ನೀಡಿದ್ದಾನೆ.

ಹಣ ಪಡೆದ ಕೂಡಲೇ ನಿಶಾಂತ್ ಅಂಗಡಿಯೊಂದಕ್ಕೆ ತೆರಳಿ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಇದರಿಂದ ಗಲಿಬಿಲಿಗೊಂಡ ರೇವಾಧ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ನಿಶಾಂತ್​ನನ್ನ ಬಂಧಿಸಿದ್ದಾರೆ. ಈತನಿಂದ ಮೋಸಕ್ಕೊಳಗಾದ ರೇವಾಧ್​ಗೆ ಸ್ಥಳೀಯರು ಧನ ಸಹಾಯ ಮಾಡಿ ವಾಪಸ್ ಕಳುಹಿಸಿಕೊಟ್ಟಿದ್ದಾರೆ.