
ನವದೆಹಲಿ, ನವೆಂಬರ್ 12: ಭಾರತೀಯ ರಾಜಕೀಯದಲ್ಲಿ ಹಲವು ದಶಕಗಳಿಂದ ಪ್ರಮುಖ ಪಾತ್ರವಹಿಸಿರುವ ಸೋನಿಯಾ ಗಾಂಧಿ ಈಗ ತಮ್ಮ ಬದುಕಿನ ನೆನಪುಗಳನ್ನು ಪುಸ್ತಕದ ಮೂಲಕ ಹೊರತಂದಿದ್ದಾರೆ. ಅದನ್ನು ನೆನಪಿನ ಚರಿತ್ರೆ ಎಂದು ಕರೆದಿದ್ದಾರೆ. ಹಾಗಾದರೆ ಆತ್ಮ ಚರಿತ್ರೆಗೂ ನೆನಪಿನ ಚರಿತ್ರೆಗೂ ಇರುವ ವ್ಯತ್ಯಾಸವೇನು ಎಂಬುದು ಎಲ್ಲರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯಾಗಿದೆ. ನಿಮ್ಮ ಈ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ಸೋನಿಯಾ ಗಾಂಧಿ ಇಟಲಿಯಲ್ಲಿ ಬಾಲ್ಯ ಕಳೆದು ರಾಜೀವ ಗಾಂಧಿಯವರನ್ನು ವಿವಾಹವಾಗಿ ಭಾರತಕ್ಕೆ ಬಂದರು.
ಬಳಿಕ ನೆಹರು-ಗಾಂಧಿ ಕುಟುಂಬದ ಭಾಗವಾಗಿ, ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ಮತ್ತು ಯುಪಿಎ ಅಧ್ಯಕ್ಷೆಯಾಗಿ ದೇಶದ ರಾಜಕೀಯದಲ್ಲಿ ಮಹತ್ವದ ಸ್ಥಾನ ಪಡೆದರು. ಈಗ ಅವರ ಜೀವನದ ಅನುಭವಗಳು, ನೆನಪುಗಳು ಮತ್ತು ಭಾವನಾತ್ಮಕ ಪಯಣ ‘‘ಬಿಲಾಂಗಿಂಗ್ ಎ ಜರ್ನಿ ಆಫ್ ಲವ್’’ ಎಂಬ ಪುಸ್ತಕದ ಮೂಲದ ಓದುಗರ ಮುಂದೆ ಬಂದಿವೆ.
ಈ ನೆನಪಿನ ಚರಿತ್ರೆ ನವೆಂಬರ್ 10ರಂದು ಬಿಡುಗಡೆಯಾಗಿದೆ. ಇದನ್ನು ಸೋನಿಯಾ ಗಾಂಧಿ ತಮ್ಮ ಬದುಕಿನ ಪ್ರತಿಯೊಂದು ವರ್ಷವನ್ನೂ ವಿವರಿಸುವ ಪೂರ್ಣ ಆತ್ಮಚರಿತ್ರೆಯಲ್ಲ, ತಮ್ಮ ಮನಸ್ಸಿನಲ್ಲಿ ಉಳಿದಿರುವ ಕೆಲವು ಪ್ರಮುಖ ವ್ಯಕ್ತಿಗಳು, ಘಟನೆಗಳು, ಸಂಬಂಧಗಳು ಮತ್ತು ಅನುಭವಗಳ ನೆನಪಿನ ಬರಹವಾಗಿ ರೂಪಿಸಿದ್ದಾರೆ. ಹಾಗಾದರೆ ಆತ್ಮಚರಿತ್ರೆಗೂ ನೆನಪಿನ ಚರಿತ್ರೆಗೂ ಏನು ವ್ಯತ್ಯಾಸ, ಸೋನಿಯಾ ಪುಸ್ತಕದಲ್ಲಿ ಯಾವ ರೀತಿಯ ವಿಚಾರಳಿಗವೆ ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸೋನಿಯಾ ಆತ್ಮಕತೆ ಬಿಡುಗಡೆ ವೇಳೆಯೇ ಇಂದಿರಾ ಗಾಂಧಿ ಕುಟುಂಬದ 1981ರ ವಿಡಿಯೋ ವೈರಲ್
ಒಬ್ಬ ವ್ಯಕ್ತಿ ತನ್ನ ಹುಟ್ಟಿನಿಂದ ಹಿಡಿದು ಜೀವನದ ವಿವಿಧ ಹಂತಗಳು, ಶಿಕ್ಷಣ, ಕುಟುಂಬ, ವೃತ್ತಿ, ಸಾಧನೆಗಳು, ಸೋಲುಗಳು, ಅನುಭವಗಳು ಹೀಗೆ ತನ್ನ ಬದುಕಿನ ಸಂಪೂರ್ಣ ಪಯಣವನ್ನು ತಾನೇ ಬರೆದುಕೊಂಡರೆ ಅದನ್ನು ಆತ್ಮಚರಿತ್ರೆ ಎನ್ನುತ್ತಾರೆ. ಅಂದರೆ, ನಾನು ಯಾರು? ನನ್ನ ಜೀವನ ಹೇಗಿತ್ತು? ನಾನು ಏನೆಲ್ಲ ಮಾಡಿದೆ? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಬರಹ. ಉದಾಹರಣೆ: ಒಬ್ಬ ರಾಜಕಾರಣಿ ತನ್ನ ಬಾಲ್ಯದಿಂದ ರಾಜಕೀಯ ಪ್ರವೇಶ, ಅಧಿಕಾರ, ಚುನಾವಣಾ ಸೋಲು, ಸಾಧನೆ, ನಿವೃತ್ತಿವರೆಗಿನ ಎಲ್ಲ ಪ್ರಮುಖ ಹಂತಗಳನ್ನು ಕ್ರಮವಾಗಿ ವಿವರಿಸಿದರೆ ಅದು ಆತ್ಮಚರಿತ್ರೆ.
ನೆನಪಿನ ಚರಿತ್ರೆಯೂ ವ್ಯಕ್ತಿಯೇ ತನ್ನ ಅನುಭವಗಳನ್ನು ಬರೆದುಕೊಳ್ಳುವ ಬರಹ. ಆದರೆ ಇಲ್ಲಿ ಜೀವನದ ಪ್ರತಿಯೊಂದು ಘಟನೆಯನ್ನೂ ವಿವರಿಸುವುದಿಲ್ಲ. ಬದಲಾಗಿ, ಬದುಕಿನಲ್ಲಿ ಆಳವಾದ ಪ್ರಭಾವ ಬೀರಿದ ಕೆಲವು ಘಟನೆಗಳು, ವ್ಯಕ್ತಿಗಳು, ಸಂಬಂಧಗಳು, ನೋವು, ಸಂತೋಷ, ರಾಜಕೀಯ ಅನುಭವಗಳು ಮತ್ತು ಮರೆಯಲಾಗದ ಕ್ಷಣಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ದರೆ, “ನನ್ನ ಬದುಕಿನಲ್ಲಿ ನನ್ನನ್ನು ಬದಲಿಸಿದ ಘಟನೆಗಳು ಯಾವುವು? ಆ ಘಟನೆಗಳನ್ನು ನಾನು ಹೇಗೆ ಅನುಭವಿಸಿದೆ?” ಎಂಬುದನ್ನು ಹೇಳುತ್ತದೆ.
ಉದಾಹರಣೆ: ಒಬ್ಬ ನಾಯಕ ತನ್ನ ಬಾಲ್ಯದ ನೆನಪುಗಳು, ಕುಟುಂಬದ ಸಂಬಂಧಗಳು, ರಾಜಕೀಯ ಜೀವನದ ಪ್ರಮುಖ ಘಟನೆಗಳು ಮತ್ತು ಎದುರಿಸಿದ ವೈಯಕ್ತಿಕ ಸಂಕಷ್ಟಗಳ ಬಗ್ಗೆ ಮಾತ್ರ ಬರೆದರೆ ಅದು ನೆನಪಿನ ಚರಿತ್ರೆ.
ಆತ್ಮಚರಿತ್ರೆ ಮತ್ತು ನೆನಪಿನ ಚರಿತ್ರೆ ನಡುವಿನ ವ್ಯತ್ಯಾಸವೇನು?
ಆತ್ಮಚರಿತ್ರೆ
– ಇಡೀ ಜೀವನದ ಕಥೆ
– ಬಾಲ್ಯದಿಂದ ವೃದ್ಧಾಪ್ಯದವರೆಗೆ
– ಘಟನೆಗಳ ಕಾಲಾನುಕ್ರಮ
– ಸಾಧನೆ, ಸೋಲು, ಅನುಭವಗಳ ವಿವರ
ನೆನಪಿನ ಚರಿತ್ರೆ
– ಬದುಕಿನ ಆಯ್ದ ನೆನಪುಗಳು
– ಪ್ರಮುಖ ವ್ಯಕ್ತಿಗಳು ಮತ್ತು ಘಟನೆಗಳು
– ಭಾವನೆ ಮತ್ತು ವೈಯಕ್ತಿಕ ಅನುಭವ
– ಜೀವನದ ಕೆಲವು ನಿರ್ದಿಷ್ಟ ಘಟ್ಟಗಳಿಗೆ ಒತ್ತು
ಈ ಎರಡರ ನಡುವೆ ಕಟ್ಟುನಿಟ್ಟಾದ ಗಡಿ ಇಲ್ಲ. ನೆನಪಿನ ಚರಿತ್ರೆಯೂ ಆತ್ಮಚರಿತ್ರೆಯ ಒಂದು ರೂಪವೇ. ಆದರೆ ಎರಡರ ಬರವಣಿಗೆಯ ದೃಷ್ಟಿಕೋನ ಮತ್ತು ಒತ್ತು ಬೇರೆಬೇರೆ.
ಈ ಪುಸ್ತಕದಲ್ಲಿ ಸೋನಿಯಾ ಗಾಂಧಿ ತಮ್ಮ ಜೀವನದ ಹಲವು ವೈಯಕ್ತಿಕ ಹಾಗೂ ರಾಜಕೀಯ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ. ಇಟಲಿಯ ಬಾಲ್ಯದಿಂದ ಭಾರತದಲ್ಲಿ ರಾಜಕೀಯ ಜೀವನದವರೆಗೆ ಅವರ ಪಯಣವನ್ನು ವಿವರಿಸಿದ್ದಾರೆ.
ಸೋನಿಯಾ ಗಾಂಧಿ 1946ರಲ್ಲಿ ಇಟಲಿಯಲ್ಲಿ ಜನಿಸಿದರು. ಕೇಂಬ್ರಿಡ್ಜ್ನಲ್ಲಿ ಓದುತ್ತಿದ್ದಾಗ 1965ರಲ್ಲಿ ರಾಜೀವ್ ಗಾಂಧಿ ಅವರನ್ನು ಭೇಟಿಯಾದರು. ಇಬ್ಬರ ನಡುವೆ ಪ್ರೀತಿ ಬೆಳೆದು 1968ರ ಫೆಬ್ರವರಿ 25ರಂದು ವಿವಾಹವಾದರು. ಮದುವೆಯ ನಂತರ ಭಾರತಕ್ಕೆ ಬಂದ ಸೋನಿಯಾ, ನೆಹರು-ಗಾಂಧಿ ಕುಟುಂಬದ ಸೊಸೆಯಾಗಿ ಹೊಸ ಜೀವನ ಆರಂಭಿಸಿದರು.
ಈ ಪುಸ್ತಕದಲ್ಲಿನ ಅತ್ಯಂತ ಭಾವನಾತ್ಮಕ ಸಂಗತಿಗಳಲ್ಲಿ ಒಂದು ಅವರ ಮೊದಲ ಮಗುವಿನ ಸಾವು. 1969ರ ಜನವರಿ 18ರಂದು ಸೋನಿಯಾ ಗಾಂಧಿ ಅವಧಿಗೂ ಮುನ್ನ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಕೇವಲ ಒಂದು ದಿನದ ಬಳಿಕ ಮೃತಪಟ್ಟಿತ್ತು. ಈ ನೋವು ತಮ್ಮ ಮತ್ತು ರಾಜೀವ್ ಜೀವನದ ಮೇಲೆ ಬೀರಿದ ಪರಿಣಾಮವನ್ನು ಅವರು ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ 1970ರ ಜೂನ್ 19ರಂದು ರಾಹುಲ್ ಗಾಂಧಿ ಜನಿಸಿದರು.
1980ರಲ್ಲಿ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಮೃತಪಟ್ಟದ್ದು, 1984ರಲ್ಲಿ ಇಂದಿರಾ ಗಾಂಧಿ ಹತ್ಯೆಗೀಡಾದದ್ದು ಮತ್ತು 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯಾದದ್ದು ಸೋನಿಯಾ ಅವರ ಜೀವನದ ದೊಡ್ಡ ಆಘಾತಗಳು. ಘಟನೆಗಳು ತಮ್ಮ ವೈಯಕ್ತಿಕ ಬದುಕನ್ನಷ್ಟೇ ಅಲ್ಲ, ಸಾರ್ವಜನಿಕ ಜೀವನದ ಕಡೆಗಿನ ತಮ್ಮ ದೃಷ್ಟಿಕೋನವನ್ನೂ ಬದಲಿಸಿದವು ಎಂದು ಅವರು ನೆನಪಿಸಿಕೊಂಡಿದ್ದಾರೆ. ರಾಜೀವ್ ಹತ್ಯೆಯ ನಂತರ ರಾಜಕೀಯದಿಂದ ದೂರ ಉಳಿಯಲು ಬಯಸಿದ್ದರೂ, ಮುಂದೆ ಕಾಂಗ್ರೆಸ್ನ ನಾಯಕತ್ವ ವಹಿಸುವ ಹಂತಕ್ಕೆ ಬಂದರು.
2004ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಗೆಲುವು ಸಾಧಿಸಿದ ಬಳಿಕ, ಸೋನಿಯಾ ಗಾಂಧಿ ಪ್ರಧಾನಿಯಾಗುವ ಸಾಧ್ಯತೆ ಇತ್ತು. ಆದರೆ ಅವರು ಪ್ರಧಾನಿ ಹುದ್ದೆಯನ್ನು ನಿರಾಕರಿಸಿ ಡಾ. ಮನಮೋಹನ್ ಸಿಂಗ್ ಅವರಿಗೆ ಆ ಅವಕಾಶ ನೀಡಿದರು. ನಿರ್ಧಾರದ ಹಿಂದಿನ ವೈಯಕ್ತಿಕ ಚಿಂತನೆಗಳು, ಕುಟುಂಬದ ಜವಾಬ್ದಾರಿಗಳು ಮತ್ತು ತಮ್ಮ ಮಕ್ಕಳ ಸುರಕ್ಷತೆಯ ಕುರಿತ ಆತಂಕಗಳನ್ನೂ ಪುಸ್ತಕದಲ್ಲಿ ನೆನಪಿಸಿಕೊಂಡಿದ್ದಾರೆ ಎಂದು ಪ್ರಕಟಣೆಯ ವಿವರಗಳು ತಿಳಿಸುತ್ತವೆ.
ಸೋನಿಯಾ ಗಾಂಧಿ ತಮ್ಮ ಜೀವನದ ಅನುಭವಗಳ ಜೊತೆಗೆ ಭಾರತದ ರಾಜಕೀಯ ಇತಿಹಾಸದ ಕೆಲವು ಮಹತ್ವದ ಘಟನೆಗಳನ್ನೂ ಉಲ್ಲೇಖಿಸಿದ್ದಾರೆ. 1975ರ ತುರ್ತು ಪರಿಸ್ಥಿತಿ, ಆಪರೇಷನ್ ಬ್ಲೂಸ್ಟಾರ್, 1992ರ ಬಾಬರಿ ಮಸೀದಿ ಧ್ವಂಸ ಮತ್ತು 2002ರ ಗುಜರಾತ್ ಗಲಭೆಗಳಂತಹ ಘಟನೆಗಳ ಕುರಿತು ತಮ್ಮ ದೃಷ್ಟಿಕೋನವನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇವು ಅವರ ವೈಯಕ್ತಿಕ ನೆನಪುಗಳು ಮತ್ತು ರಾಜಕೀಯ ವ್ಯಾಖ್ಯಾನಗಳು ಎಂಬುದನ್ನು ಗಮನಿಸಬೇಕು.
ಈ ಪುಸ್ತಕದ ಶೀರ್ಷಿಕೆ ಕೂಡ ಬಹಳ ಅರ್ಥಪೂರ್ಣವಾಗಿದೆ. ಬಿಲಾಂಗಿಂಗ್ ಎಂದರೆ ಒಂದು ಸ್ಥಳಕ್ಕೆ ಸೇರಿದವಳಾಗಿರುವ ಭಾವನೆ, ಆತ್ಮೀಯತೆ ಅಥವಾ ತನ್ನದೇ ಮನೆ ಎಂಬ ಅನುಭವ. ಸೋನಿಯಾ ಗಾಂಧಿ ಹುಟ್ಟಿದ್ದು ಇಟಲಿಯಲ್ಲಿ. ಆದರೆ ಮದುವೆಯಾಗಿ ಭಾರತಕ್ಕೆ ಬಂದ ನಂತರ ಇಲ್ಲಿನ ಕುಟುಂಬ, ಸಂಸ್ಕೃತಿ, ಜನರು ಮತ್ತು ರಾಜಕೀಯ ಜೀವನದೊಂದಿಗೆ ಬೆರೆತರು. ಹಲವು ದಶಕಗಳ ಕಾಲ ಭಾರತದಲ್ಲೇ ಬದುಕಿದರು. ಹೀಗಾಗಿ ಹುಟ್ಟಿದ ದೇಶ ಒಂದಾದರೂ, ಬದುಕು ಮತ್ತು ಭಾವನೆಗಳಿಂದ ಮತ್ತೊಂದು ದೇಶವನ್ನು ತನ್ನದೆಂದು ಒಪ್ಪಿಕೊಳ್ಳುವ ಪಯಣವನ್ನು ಈ ಶೀರ್ಷಿಕೆ ಸೂಚಿಸುತ್ತದೆ.
ಸೋನಿಯಾ ಗಾಂಧಿ ಹಲವು ದಶಕಗಳಿಂದ ಭಾರತೀಯ ರಾಜಕೀಯದ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅವರ ಬಗ್ಗೆ ಅನೇಕ ಪುಸ್ತಕಗಳು, ಲೇಖನಗಳು ಮತ್ತು ರಾಜಕೀಯ ಚರ್ಚೆಗಳು ನಡೆದಿವೆ. ಆದರೆ ಈ ಬಾರಿ ತಮ್ಮ ಬದುಕಿನ ಘಟನೆಗಳನ್ನು ಅವರೇ ತಮ್ಮ ದೃಷ್ಟಿಕೋನದಿಂದ ದಾಖಲಿಸಿದ್ದಾರೆ. ಹೀಗಾಗಿ ಈ ಪುಸ್ತಕ ಕೇವಲ ರಾಜಕೀಯ ನಾಯಕರ ಜೀವನದ ಕಥೆಯಲ್ಲ. ಪ್ರೀತಿ, ಕುಟುಂಬ, ನಷ್ಟ, ನೋವು, ಜವಾಬ್ದಾರಿ, ಗುರುತು ಮತ್ತು ಒಂದು ದೇಶವನ್ನು ತನ್ನದಾಗಿ ಸ್ವೀಕರಿಸುವ ಭಾವನೆಯ ಕುರಿತ ಬರಹವೂ ಹೌದು.
ಆತ್ಮಚರಿತ್ರೆ ಒಬ್ಬ ವ್ಯಕ್ತಿಯ ಬದುಕಿನ ಸಂಪೂರ್ಣ ಪಯಣವನ್ನು ಹೇಳಿದರೆ, ನೆನಪಿನ ಚರಿತ್ರೆ ಆ ಬದುಕಿನಲ್ಲಿ ಮರೆಯಲಾಗದ ಘಟನೆಗಳು ಮತ್ತು ಅನುಭವಗಳನ್ನು ಓದುಗರ ಮುಂದೆ ತೆರೆದಿಡುತ್ತದೆ. ಸೋನಿಯಾ ಗಾಂಧಿಯವರ ‘ಬಿಲಾಂಗಿಂಗ್’ ಕೂಡ ಅಂಥದ್ದೇ ಒಂದು ನೆನಪಿನ ಪಯಣ. ಇಟಲಿಯ ಬಾಲಕಿಯಿಂದ ಭಾರತದ ರಾಜಕೀಯದ ಪ್ರಮುಖ ನಾಯಕಿಯವರೆಗೆ ಬೆಳೆದ ಅವರ ಬದುಕಿನಲ್ಲಿ ಪ್ರೀತಿ, ಕುಟುಂಬ, ಅಗಲಿಕೆ, ನೋವು ಮತ್ತು ರಾಜಕೀಯ ಜವಾಬ್ದಾರಿ ಹೇಗೆ ಬೆರೆತಿವೆ ಎಂಬುದನ್ನು ತಿಳಿಯಲು ಈ ಪುಸ್ತಕ ಒಂದು ಅವಕಾಶ ನೀಡುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:45 am, Thu, 12 November 26