AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಿಯಾ ಗಾಂಧಿ ಏಕೆ ಪ್ರಧಾನಿಯಾಗಲಿಲ್ಲ?; ಆತ್ಮಕತೆಯಲ್ಲಿ ಕಾರಣ ಬಿಚ್ಚಿಟ್ಟ ಕಾಂಗ್ರೆಸ್ ನಾಯಕಿ

2004ರ ಸಾರ್ವತ್ರಿಕ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದಾಗ, ದೇಶದ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ಹಿಂದಿದ್ದ ಭಾವುಕ ಸನ್ನಿವೇಶ ಮತ್ತು ಕುಟುಂಬದ ಆಂತರಿಕ ಸಂಘರ್ಷದ ವಿವರಗಳನ್ನು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಆತ್ಮಕತೆಯಲ್ಲಿ ಪ್ರಥಮ ಬಾರಿಗೆ ಬಹಿರಂಗಪಡಿಸಿದ್ದಾರೆ. ತಮ್ಮ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕದಲ್ಲಿ ತಾವು ಪ್ರಧಾನಿಯಾಗುವ ವಿಚಾರದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯಿವತು ಎಂಬ ಘಟನೆಗಳನ್ನು ವಿವರಿಸಿದ್ದಾರೆ.

ಸೋನಿಯಾ ಗಾಂಧಿ ಏಕೆ ಪ್ರಧಾನಿಯಾಗಲಿಲ್ಲ?; ಆತ್ಮಕತೆಯಲ್ಲಿ ಕಾರಣ ಬಿಚ್ಚಿಟ್ಟ ಕಾಂಗ್ರೆಸ್ ನಾಯಕಿ
Sonia Gandhi
ಸುಷ್ಮಾ ಚಕ್ರೆ
|

Updated on: Nov 10, 2026 | 2:09 PM

Share

ನವದೆಹಲಿ, ನವೆಂಬರ್ 10: 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಭವ್ಯ ಗೆಲುವು ಸಾಧಿಸುವುದಕ್ಕೂ ಕೆಲವು ತಿಂಗಳುಗಳ ಮುನ್ನವೇ, ದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಒಂದು ಪ್ರಮುಖ ಪ್ರಶ್ನೆಗೆ ಸೋನಿಯಾ ಗಾಂಧಿ ತಮ್ಮ ಮನಸ್ಸಿನಲ್ಲೇ ಸ್ಪಷ್ಟ ಉತ್ತರ ಕಂಡುಕೊಂಡಿದ್ದರು. ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ “ಪಕ್ಷ ಗೆದ್ದರೆ ನೀವು ಪ್ರಧಾನಿ ಹುದ್ದೆಯನ್ನು ಸ್ವೀಕರಿಸುತ್ತೀರಾ?” ಎಂದು ನೇರವಾಗಿ ಕೇಳಿದಾಗ, ಸೋನಿಯಾ ಗಾಂಧಿ “ಖಂಡಿತವಾಗಿಯೂ ಇಲ್ಲ!” ಎಂದು ಹೇಳಿದ್ದರು. ಇಂದು ಬಿಡುಗಡೆಯಾಗುತ್ತಿರುವ ತಮ್ಮ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಆತ್ಮಕಥೆಯಲ್ಲಿ, ಪ್ರಧಾನಮಂತ್ರಿ ಹುದ್ದೆಯನ್ನು ನಿರಾಕರಿಸುವ ನಿರ್ಧಾರಕ್ಕೆ ಬಂದ ಆ ಕ್ಷಣಗಳು ಮತ್ತು ಅದಕ್ಕೂ ಮುನ್ನ ನಡೆದ ಘಟನೆಗಳನ್ನು ಸೋನಿಯಾ ಗಾಂಧಿ ವಿವರವಾಗಿ ಬರೆದುಕೊಂಡಿದ್ದಾರೆ.

2004ರ ಚುನಾವಣೆಗೂ ಕೆಲವು ತಿಂಗಳುಗಳ ಮುನ್ನವೇ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ “ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಪ್ರಧಾನಿ ಹುದ್ದೆ ಸ್ವೀಕರಿಸುತ್ತೀರಾ?” ಎಂದು ಸೋನಿಯಾ ಗಾಂಧಿಯವರನ್ನು ಕೇಳಿದ್ದರು. ಅದಕ್ಕೆ ಸೋನಿಯಾ ಗಾಂಧಿ “ಖಂಡಿತವಾಗಿಯೂ ಇಲ್ಲ!” ಎಂದು ದೃಢವಾಗಿ ಉತ್ತರಿಸಿದ್ದರು. ರಾಜಕೀಯ ಅಪಾಯ, ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿಯವರ ಭೀಕರ ಹತ್ಯೆಯ ದುರಂತವನ್ನು ಕಣ್ಣಾರೆ ಕಂಡಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾಗೆ, ಪ್ರಧಾನಿ ಹುದ್ದೆಯು ತಮ್ಮ ತಾಯಿಯ ಜೀವಕ್ಕೆ ಅಪಾಯ ತರಬಹುದು ಎಂಬ ಭಯವಿತ್ತು. ಹೀಗಾಗಿ, ಅವರಿಗೂ ತಮ್ಮ ತಾಯಿ ಪ್ರಧಾನಿಯಾಗುವುದು ಇಷ್ಟವಿರಲಿಲ್ಲ ಎಂದು ಸೋನಿಯಾ ಗಾಂಧಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಆಪರೇಷನ್ ಬ್ಲೂ ಸ್ಟಾರ್ ಫೋಟೋ ನೋಡಿ ಕಣ್ಣೀರಿಟ್ಟಿದ್ದ ಇಂದಿರಾ ಗಾಂಧಿ; ಸೋನಿಯಾ ಗಾಂಧಿ ಆತ್ಮಕತೆಗೆ ಅಕಾಲಿ ದಳ ಆಕ್ಷೇಪ

ಪ್ರಧಾನಿಯಾಗಲು ಒಪ್ಪಿದ್ದರಾ ಸೋನಿಯಾ?:

2004ರಲ್ಲಿ ಯುಪಿಎ ಗೆದ್ದ ನಂತರ ಮೈತ್ರಿಕೂಟದ ನಾಯಕರು ಹಾಗೂ ಕಾಂಗ್ರೆಸ್ ಜನಪ್ರತಿನಿಧಿಗಳು ಸೋನಿಯಾ ಗಾಂಧಿಯವರನ್ನು ಪ್ರಧಾನಿ ಹುದ್ದೆ ವಹಿಸಿಕೊಳ್ಳುವಂತೆ ತೀವ್ರ ಒತ್ತಡ ಹೇರಿದರು. ಪ್ರತಿಯೊಬ್ಬ ನಾಯಕರೂ ಬಂದು ಮನವಿ ಮಾಡಲು ತೊಡಗಿದರು. ನಾಯಕರ ಸತತ ಒತ್ತಡದಿಂದ ಸೋನಿಯಾ ಗಾಂಧಿ, ಗಲಿಬಿಲಿಯಲ್ಲಿ ಸಣ್ಣ ಧ್ವನಿಯಲ್ಲಿ “ಠೀಕ್ ಹೈ” (ಆಯ್ತು, ಸರಿ) ಎಂದು ಉದ್ಗರಿಸಿದ್ದರು. ಅವರು ವಾಕ್ಯ ಮುಗಿಸುವ ಮುನ್ನವೇ ಅಲ್ಲಿದ್ದ ನಾಯಕರು ಶುಭಾಶಯ ಕೋರಲು ಆರಂಭಿಸಿದ್ದರು.

ಆದರೆ, ತಮ್ಮ ತಾಯಿ ಪ್ರಧಾನಿ ಹುದ್ದೆಗೆ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಪ್ರಿಯಾಂಕಾ ಗಾಂಧಿ ಕಣ್ಣೀರಿಡುತ್ತಾ ರಾಹುಲ್ ಗಾಂಧಿ ಬಳಿ ಓಡಿದರು. ಇಬ್ಬರೂ ಸೋನಿಯಾ ಅವರ ಬಳಿಗೆ ಬಂದು “ನೀವು ಓಕೆ ಅಂದಿರಾ? ಇದು ಸರಿಯಲ್ಲ” ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರಧಾನಿಯಾಗಲು ಬಯಸಿದ್ದರಾ ಪ್ರಣಬ್ ಮುಖರ್ಜಿ?; ಸೋನಿಯಾ ಗಾಂಧಿ ಆತ್ಮಕತೆಯಲ್ಲಿ ಸ್ಫೋಟಕ ಸಂಗತಿ ಬಯಲು

“ಅಮ್ಮಾ, ನೀನು ಯಾವತ್ತೂ ಈ ನಿರ್ಧಾರದಲ್ಲಿ ಸ್ಪಷ್ಟವಾಗಿದ್ದೆ, ಯಾರ ಒತ್ತಡಕ್ಕೂ ಮಣಿಯಬೇಡ. ನಿನ್ನ ನಿರ್ಧಾರಕ್ಕೆ ನಾವು ಬೆಂಬಲವಾಗಿ ನಿಲ್ಲುತ್ತೇವೆ” ಎಂದು ಪ್ರಿಯಾಂಕಾ ತನ್ನ ತಾಯಿಗೆ ಧೈರ್ಯ ತುಂಬಿದರು. ಆ ರಾತ್ರಿ ಪೂರ್ತಿ ತಮ್ಮ ಗಂಡ ರಾಜೀವ್ ಗಾಂಧಿಯವರ ನೆನಪುಗಳಲ್ಲಿ ಮುಳುಗಿದ ಸೋನಿಯಾ ಗಾಂಧಿ, ತಮ್ಮ ಆತ್ಮಸಾಕ್ಷಿಯ ಧ್ವನಿಯನ್ನು ಆಲಿಸಿ “ನನ್ನ ಅಂತರಂಗಕ್ಕೆ ನಾನು ಪ್ರಾಮಾಣಿಕವಾಗಿರಬೇಕು” ಎಂದು ನಿರ್ಧರಿಸಿದರು. ಬೆಳಿಗ್ಗೆ ಏಳುತ್ತಲೇ ರಾಹುಲ್ ಗಾಂಧಿ ಕೊಠಡಿಗೆ ತೆರಳಿ “ನಾನು ಪ್ರಧಾನಿಯಾಗುವುದಿಲ್ಲ”  ಎಂದು ಹೇಳಿದರು.

ಮನಮೋಹನ್ ಸಿಂಗ್ ಆಯ್ಕೆ:

ಸಂಸತ್ತಿನ ಸಭೆಯಲ್ಲಿ ಕಾಂಗ್ರೆಸ್ ನಾಯಕರ ತೀವ್ರ ಭಾವುಕ ಮನವಿಗಳ ನಡುವೆಯೂ, ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ಸ್ಪಷ್ಟವಾಗಿ ನಿರಾಕರಿಸಿದರು. ನಂತರ ಅಸೆಂಬ್ಲಿಯಲ್ಲಿದ್ದ ನಾಯಕರ ಒಪ್ಪಿಗೆ ಪಡೆದು, ಡಾ. ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಸಂಸದೀಯ ಮಂಡಳಿಯ ನಾಯಕರಾಗಿ ಹಾಗೂ ಭಾರತದ ಮುಂದಿನ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More