AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಕರಣ ದಾಖಲಿಸಿದ ವ್ಯಕ್ತಿಯ ಮರಣಾನಂತರವೂ ಅದು ಇತ್ಯರ್ಥವಾಗದೇ ಉಳಿದುಬಿಟ್ಟರೆ, ಅದು ಯಾರ ಪ್ರಕರಣ?

ಭಾರತದಲ್ಲಿ 5.64 ಕೋಟಿಗೂ ಹೆಚ್ಚು ನ್ಯಾಯಾಲಯದ ಪ್ರಕರಣಗಳು ಬಾಕಿ ಉಳಿದಿದ್ದು, ಗೋವಿಂದನಂತಹ ಲಕ್ಷಾಂತರ ಕುಟುಂಬಗಳು ದಶಕಗಳಿಂದ ನ್ಯಾಯಕ್ಕಾಗಿ ಕಾಯುತ್ತಿವೆ. ಭೂ ವಿವಾದ, ಮುಂದೂಡಿಕೆ ಮತ್ತು ದಾಖಲೆಗಳ ಕೊರತೆಯಂತಹ ಕಾರಣಗಳಿಂದ ನ್ಯಾಯ ವಿಳಂಬವಾಗುತ್ತಿದೆ. ಇದು ಕೇವಲ ವೈಯಕ್ತಿಕ ನೋವಲ್ಲದೆ, ಇಡೀ ಆರ್ಥಿಕತೆಯ ಮೇಲೆ ದುಬಾರಿ ಪರಿಣಾಮ ಬೀರುತ್ತಿದೆ. ನ್ಯಾಯಯುತ ವಿಚಾರಣೆಗೆ ಸಮಯ ಬೇಕಾದರೂ, ವಿಳಂಬವಾದ ನ್ಯಾಯವು ನಿರಾಕರಿಸಲ್ಪಟ್ಟ ನ್ಯಾಯಕ್ಕೆ ಸಮಾನ.

ಪ್ರಕರಣ ದಾಖಲಿಸಿದ ವ್ಯಕ್ತಿಯ ಮರಣಾನಂತರವೂ ಅದು ಇತ್ಯರ್ಥವಾಗದೇ ಉಳಿದುಬಿಟ್ಟರೆ, ಅದು ಯಾರ ಪ್ರಕರಣ?
ನ್ಯಾಯಾಲಯImage Credit source: Getty Images
Santosh Nair
| Edited By: |

Updated on: Nov 28, 2026 | 6:00 AM

Share

ಗೋವಿಂದನ ಅಜ್ಜ ಹೊಲದ ಅಂಚಿನ ಜಮೀನಿನ ತುಂಡೊಂದರ ಬಗ್ಗೆ ನ್ಯಾಯಾಲಯಕ್ಕೆ ಹೋಗುತ್ತಾರೆ. ಅದು ಸುಮಾರು ನಾಲ್ಕು ಅಡಿಯ ಗಡಿಯ ಜಮೀನು ವ್ಯಾಜ್ಯ. ಅದನ್ನು ಕಲ್ಲುಗಳಿಂದ ಗುರುತಿಸಲಾಗಿತ್ತು. ನೆರೆಹೊರೆಯವರು ಆ ಕಲ್ಲುಗಳನ್ನು ಸರಿಸಿದ್ದರು. ಅದು ಆಗಿದ್ದು ಗೋವಿಂದನ ತಂದೆಯ ಮದುವೆಯಾಗುವುದಕ್ಕೂ ಹಿಂದಿನ ವರ್ಷದಂದು. ಕಾಗದಪತ್ರಗಳ ಕಂತೆಯೊಂದನ್ನು ಹಿಡಿದುಕೊಂಡೇ ಅಜ್ಜ ತೀರಿಹೋದರು. ಗೋವಿಂದನ ತಂದೆ ಆ ಬಂಡಲ್​ಗಳನ್ನು ಇಟ್ಟುಕೊಂಡು, ಕೋರ್ಟ್​ನಲ್ಲಿ ಮುಂದಿನ ದಿನಾಂಕಗಳನ್ನು (dates) ಪಡೆದುಕೊಂಡರು. ಅಂದು ಬೆಳಿಗ್ಗೆ ನ್ಯಾಯಾಲಯದ ಹೊರಗಿನ ಮರದ ಬೆಂಚಿನ ಮೇಲೆ ಕುಳಿತು, ಮಧ್ಯಾಹ್ನ ಹೊಸ ದಿನಾಂಕದೊಂದಿಗೆ ಮನೆಗೆ ಹೋಗುತ್ತಿದ್ದರು. ಈಗ ನಲವತ್ತರ ಹರೆಯದಲ್ಲಿರುವ ಗೋವಿಂದ, ಅದೇ ರೀತಿಯ ಬೆಂಚಿನ ಮೇಲೆ, ಈಗ ಸ್ವಲ್ಪ ಹೆಚ್ಚು ದಪ್ಪವಾಗಿರುವ ಅದೇ ಕಂತೆಯೊಂದಿಗೆ ಕುಳಿತುಕೊಂಡಿದ್ದಾನೆ. ನೆರೆಹೊರೆಯವರ ಕುಟುಂಬವೂ ಈಗ ಮೂರನೇ ತಲೆಮಾರಿನಲ್ಲಿದೆ. ಆ ಕಲ್ಲುಗಳನ್ನು ಸರಿಸಿದ್ದಕ್ಕೆ ನಿಖರ ಕಾರಣವೇನು ಎಂಬುದು ಯಾರಿಗೂ ನೆನಪಿಲ್ಲ.

ಗೋವಿಂದ ಒಂದು ಕಾಲ್ಪನಿಕ ಪಾತ್ರ, ಆದರೆ ಅವನ ಕಥೆ ಅಸಾಮಾನ್ಯವಾದದ್ದೇನೂ ಅಲ್ಲ. ನ್ಯಾಷನಲ್ ಜ್ಯುಡಿಷಿಯಲ್ ಡೇಟಾ ಗ್ರಿಡ್ (National Judicial Data Grid) ದತ್ತಾಂಶವನ್ನು ಉಲ್ಲೇಖಿಸಿ ಕಾನೂನು ಸಚಿವರು 2026ರ ಜುಲೈನಲ್ಲಿ ರಾಜ್ಯಸಭೆಗೆ ತಿಳಿಸಿದಂತೆ, ಭಾರತದ ನ್ಯಾಯಾಲಯಗಳಾದ್ಯಂತ — ಸುಪ್ರೀಂ ಕೋರ್ಟ್, ಇಪ್ಪತ್ತೈದು ಹೈಕೋರ್ಟ್‌ಗಳು ಮತ್ತು ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಲ್ಲಿ — 5.64 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಇದ್ದವು. ಆ ಸಂಖ್ಯೆಯು ಅನೇಕ ದೇಶಗಳ ಜನಸಂಖ್ಯೆಗಿಂತಲೂ ದೊಡ್ಡದು. ಆ ಪ್ರತಿಯೊಂದು ಪ್ರಕರಣವೂ ಒಬ್ಬೊಬ್ಬ ವ್ಯಕ್ತಿಯಾಗಿದ್ದರೆ, ಅವು ಭಾರತದ ಯಾವುದೇ ನಗರಕ್ಕಿಂತ ದೊಡ್ಡ ನಗರವನ್ನು ತುಂಬುತ್ತಿದ್ದವು. ಆ ಪ್ರತಿಯೊಬ್ಬರೂ ತೀರ್ಪಿಗಾಗಿ ಕಾಯುತ್ತಿರುತ್ತಿದ್ದರು.

ಆ ಪ್ರಕರಣಗಳಲ್ಲಿ ಕೆಲವು ಅತ್ಯಂತ ಹಳೆಯವು. ಸುಪ್ರೀಂ ಕೋರ್ಟ್ ಒಂದರಲ್ಲೇ 96,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದವು; ಅವುಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬಾಕಿ ಇದ್ದವು. ಐನೂರ ಐವತ್ತೆಂಟು ಪ್ರಕರಣಗಳು ಇಪ್ಪತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಮತ್ತು ಇಪ್ಪತ್ತಾರು ಪ್ರಕರಣಗಳು ಮೂವತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕಾಯುತ್ತಿದ್ದವು. ಹೈಕೋರ್ಟ್‌ಗಳಲ್ಲಿ 80,660 ಪ್ರಕರಣಗಳು ಮೂವತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಬಾಕಿ ಇದ್ದವು. ಮೂವತ್ತು ವರ್ಷ ಹಳೆಯದಾದ ಪ್ರಕರಣವನ್ನು, ಇಂದಿನ ಅನೇಕ ವಕೀಲರು ಮಕ್ಕಳಾಗಿದ್ದಾಗ ದಾಖಲಿಸಲಾಗಿತ್ತು. ಅಂತಹ ಪ್ರಕರಣಗಳನ್ನು ದಾಖಲಿಸಿದ ಜನರಲ್ಲಿ ಕೆಲವರು ತೀರಿಹೋಗಿದ್ದಾರೆ. ಅವರ ಮಕ್ಕಳು ಪ್ರಕರಣವನ್ನು ಮುಂದುವರಿಸುತ್ತಿದ್ದಾರೆ ಅಥವಾ ಕೈಬಿಟ್ಟಿದ್ದಾರೆ.

ಇದನ್ನೂ ಓದಿ: ಸದನ vs ಶಾಲೆ; ವರ್ಷದಲ್ಲಿ ಐವತ್ತೈದು ದಿನ ಮಾತ್ರ ತೆರೆಯುವ ಶಾಲೆ ಹೇಗನಿಸೀತು..!

ಇದು ಏಕೆ ಹೀಗಾಗುತ್ತದೆ ಎಂಬುದರ ಬಗ್ಗೆ ನ್ಯಾಯಯುತವಾಗಿ ಯೋಚಿಸುವುದು ಮುಖ್ಯ. ಇಲ್ಲಿ ಕಾರಣಗಳು ಹಲವು. ಎಲ್ಲದರಲ್ಲೂ ಕಪ್ಪು ಕೋಟು ಧರಿಸಿದವರೇ ಖಳನಾಯಕರಲ್ಲ. ನ್ಯಾಯಾಲಯಗಳಿಗೆ ಪ್ರತಿದಿನ ಹೊಸ ಪ್ರಕರಣಗಳು ಬರುತ್ತವೆ. ಕೆಲವು ವರ್ಷಗಳಲ್ಲಿ ಮುಗಿಯುವ ಪ್ರಕರಣಗಳಿಗಿಂತ ಪ್ರತಿ ದಿನ ಹೊಸದಾಗಿ ಬರುವ ಪ್ರಕರಣಗಳೇ ಹೆಚ್ಚಾಗಿರುತ್ತವೆ. ಕೆಲವೊಮ್ಮೆ ಸಕಾರಣಗಳಿಂದ ಮತ್ತು ಕೆಲವೊಮ್ಮೆ ಅಕಾರಣಗಳಿಂದ ವಿಚಾರಣೆಗಳು ಮುಂದೂಡಲ್ಪಡುತ್ತವೆ: ವಕೀಲರಿಗೆ ಅನಾರೋಗ್ಯ, ಸಾಕ್ಷಿ ಹಾಜರಾಗದಿರುವುದು, ದಾಖಲೆಯೊಂದು ಕಾಣೆಯಾಗಿರುವುದು, ಕಕ್ಷಿದಾರರು ಸಮಯ ಕೇಳುವುದು ಇತ್ಯಾದಿ ಕಾರಣಗಳಿರಬಹುದು. ಭೂಮಿ ಮತ್ತು ಆಸ್ತಿ ವಿವಾದಗಳು ವಿಶೇಷವಾಗಿ ನಿಧಾನವಾಗಿ ಸಾಗುತ್ತವೆ, ಏಕೆಂದರೆ ಅವುಗಳಿಗೆ ತಮ್ಮದೇ ಆದ ವಿಳಂಬಗಳನ್ನು ಹೊಂದಿರುವ ಕಚೇರಿಗಳಿಂದ ಕಾಗದಪತ್ರಗಳು ಬೇಕಾಗುತ್ತವೆ. ಒಬ್ಬ ನ್ಯಾಯಾಧೀಶರು ದಿನವೊಂದರಲ್ಲಿ ಎಷ್ಟು ಪ್ರಕರಣಗಳನ್ನು ಆಲಿಸಬಹುದು ಎಂಬುದಕ್ಕೆ ಒಂದು ನ್ಯಾಯಾಲಯಕ್ಕೆ ಮಿತಿ ಇರುತ್ತದೆ. ಆಲಿಸುವುದು, ಯೋಚಿಸುವುದು ಮತ್ತು ಬರೆಯುವ ಕೆಲಸವನ್ನು ಯೋಚನೆಗೆ ಧಕ್ಕೆಯಾಗದಂತೆ ವೇಗಗೊಳಿಸಲು ಸಾಧ್ಯವಿಲ್ಲ.

ಆ ಸಂಖ್ಯೆಗೆ ಇನ್ನೊಂದು ಮುಖವೂ ಇದೆ. ಬಾಕಿ ಇರುವ ಪ್ರಕರಣವು ಯಾವಾಗಲೂ ವಿಫಲತೆಯಲ್ಲ. ಸತ್ಯವನ್ನು ತಲುಪುವ ಪ್ರಕ್ರಿಯೆಗೆ ಸಮಯ ಹಿಡಿಯುವುದರಿಂದ ಅನೇಕ ಪ್ರಕರಣಗಳು ಬಾಕಿ ಇರುತ್ತವೆ. ನಿಧಾನವಾದ ಸರಿಯಾದ ಉತ್ತರಕ್ಕಿಂತ ವೇಗವಾದ ತಪ್ಪು ಉತ್ತರವು ಹೆಚ್ಚು ಹಾನಿಕಾರಕವಾಗಬಹುದು. ಅಪರಾಧದ ಆರೋಪ ಹೊತ್ತವರಿಗೆ ನ್ಯಾಯಯುತ ವಿಚಾರಣೆಯ (fair trial) ಹಕ್ಕಿರುತ್ತದೆ. ನ್ಯಾಯಯುತ ವಿಚಾರಣೆಯು ನ್ಯಾಯಯುತವಾಗಿರದ ಹಂತವನ್ನು ಮೀರುವಷ್ಟು ಆತುರಗೊಳಿಸಲು ಬರುವುದಿಲ್ಲ. ಅದೇ ಸಮಯದಲ್ಲಿ, ‘ವಿಳಂಬವಾದ ನ್ಯಾಯವು ನಿರಾಕರಿಸಲ್ಪಟ್ಟ ನ್ಯಾಯಕ್ಕೆ ಸಮಾನ’ ಎಂದು ಅನೇಕ ವಕೀಲರು ಹೇಳುವ ಮಾತಿನಲ್ಲಿ ಒಂದು ಕಠೋರ ಸತ್ಯವಿದೆ: ಮೂವತ್ತು ವರ್ಷಗಳ ಕಾಲ ನ್ಯಾಯಾಲಯದಲ್ಲಿ ಸಿಲುಕಿಕೊಂಡಿರುವ ಜಮೀನಿನ ಮಾಲೀಕನಿಗೆ ಅದನ್ನು ಮಾರಲು, ವ್ಯವಸಾಯ ಮಾಡಲು, ಅಡವಿಡಲು ಅಥವಾ ಮುಂದಿನವರಿಗೆ ವರ್ಗಾಯಿಸಲು ಸಾಧ್ಯವಾಗದಿರಬಹುದು.

ಬೆಂಚಿನ ಮೇಲೆ ಕುಳಿತು ಗೋವಿಂದ ಕಲಿತ ಪಾಠ ಇಲ್ಲಿದೆ. ನ್ಯಾಯಾಲಯದ ಕೊಠಡಿಗೆ ತನ್ನದೇ ಆದ ಗಡಿಯಾರವಿದೆ. ಅದು ಸುಗ್ಗಿಯ, ಮದುವೆಯ ಅಥವಾ ಸಾಲದ ಕಂತಿನ ವೇಗದಲ್ಲಿ ಓಡುವುದಿಲ್ಲ. ಪ್ರಕರಣವು ಮುಂದುವರಿಯುವುದನ್ನು ನಿಲ್ಲಿಸಿದೆ ಎಂಬ ಮಾತ್ರಕ್ಕೆ ಅದು ಅವನದ್ದಲ್ಲದಂತಾಗುವುದಿಲ್ಲ. ಯಾವ ಗುಮಾಸ್ತ ದಿನಾಂಕ ಹೇಳುತ್ತಾನೆ, ಯಾವ ವಕೀಲ ಈ ಬಾರಿ ಹೆಚ್ಚು ಹಣ ಕೇಳುವುದಿಲ್ಲ, ಮತ್ತು ಮೂಲೆಗಳು ಮಡಚದಂತೆ ಕಾಗದಗಳ ಕಂತೆಯನ್ನು ಹೇಗೆ ಹಿಡಿದುಕೊಳ್ಳಬೇಕು ಎಂಬುದನ್ನು ಅವನು ಕಲಿತಿದ್ದಾನೆ. ತಾನಾಗಿಯೇ ಆಯ್ಕೆ ಮಾಡಿಕೊಳ್ಳದಿದ್ದರೂ, ಕಾಯುವುದರಲ್ಲಿ ಪರಿಣತನಾಗಿರುವ ವ್ಯಕ್ತಿಯ ಕೌಶಲ್ಯಗಳಿವು.

ಇದನ್ನೂ ಓದಿ: ಸಂವಿಧಾನ ರಚನೆಯಾದ ಐತಿಹಾಸಿಕ ಸಂದರ್ಭದ ಸ್ಮರಣೆ; ಸಂವಿಧಾನ ಸಭೆ ಈಗ ನಡೆದಿದ್ದರೆ ನಿಮ್ಮ ಪ್ರಶ್ನೆ ಏನಿರುತ್ತಿತ್ತು, ಕೇಳಿ

ಈ ಬಗ್ಗೆ ವ್ಯವಸ್ಥೆಗೆ ತಿಳಿದಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಪ್ರಕರಣಗಳನ್ನು ವೇಗಗೊಳಿಸಲು ಸರ್ಕಾರಗಳು ಮತ್ತು ನ್ಯಾಯಾಲಯಗಳು ಅನೇಕ ಮಾರ್ಗಗಳನ್ನು ಪ್ರಯತ್ನಿಸಿವೆ: ಕಂಪ್ಯೂಟರೀಕೃತ ದಾಖಲೆಗಳು, ವಿಶೇಷ ನ್ಯಾಯಾಲಯಗಳು, ಮತ್ತು ಇಬ್ಬರೂ ಕಡೆಯವರು ಸೇರಿ ಒಪ್ಪಂದಕ್ಕೆ ಬರುವ ಮಧ್ಯಸ್ಥಿಕೆ (mediation) ಹಾಗೂ ಲೋಕ್ ಅದಾಲತ್‌ಗಳ ಮೂಲಕ ವಿವಾದಗಳನ್ನು ಇತ್ಯರ್ಥಪಡಿಸುವ ಪ್ರಯತ್ನಗಳು. ಇವುಗಳಲ್ಲಿ ಕೆಲವು ಕೆಲವು ಕಡೆ ಕೆಲಸ ಮಾಡುತ್ತವೆ. ಆದರೆ ಬಾಕಿ ಇರುವ ಸಂಖ್ಯೆಯು ಎಷ್ಟು ದೊಡ್ಡದಿದೆಯೆಂದರೆ, ಅವೆಲ್ಲವೂ ಸೇರಿ ಅತ್ಯಂತ ದೊಡ್ಡದಾದ, ಅತ್ಯಂತ ನಿಧಾನವಾದ ಪ್ರಾಣಿಯೊಂದನ್ನು ಬೆನ್ನಟ್ಟುತ್ತಿರುವಂತಿದೆ.

ನಮ್ಮಲ್ಲಿ ಹೆಚ್ಚಿನವರು ಎಂದಿಗೂ ಅರಿತುಕೊಳ್ಳದ ವಿಷಯವೆಂದರೆ, ನ್ಯಾಯಾಲಯಗಳಿಂದ ಪ್ರಭಾವಿತರಾಗಲು ನಾವು ನ್ಯಾಯಾಲಯದಲ್ಲೇ ಇರಬೇಕಾಗಿಲ್ಲ. ಬಾಕಿ ಇರುವ ಬಿಲ್ ವಸೂಲಿ ಮಾಡಲು ವರ್ಷಗಟ್ಟಲೆ ಕಾಯುವ ಉದ್ಯಮ, ಕಟ್ಟಡ ಕಟ್ಟಲಾಗದ ಜಮೀನಿನ ಮಾಲೀಕ, ಮನೆಯನ್ನು ವಿಭಜಿಸಲಾಗದ ಕುಟುಂಬ: ಇವರೆಲ್ಲರೂ ನ್ಯಾಯದ ವೇಗಕ್ಕಾಗಿ ಒಂದು ಮೌನ ಬೆಲೆಯನ್ನು ತೆರುತ್ತಿದ್ದಾರೆ. ಆ ವಿಳಂಬವು ಇಡೀ ಆರ್ಥಿಕತೆಯ ಮೇಲೆ ಬೀಳುವ ವೆಚ್ಚವಾಗಿದೆ, ಮತ್ತು ಅದನ್ನು ಹೆಚ್ಚಾಗಿ ನ್ಯಾಯಾಧೀಶರನ್ನೇ ಭೇಟಿಯಾಗದ ಜನರು ಹೊರುತ್ತಿದ್ದಾರೆ.

ಗೋವಿಂದನ ಹೊಲದ ಅಂಚಿನ ಕಲ್ಲುಗಳು ಇನ್ನೂ ಅಲ್ಲಿಯೇ ಇವೆ. ಯಾರೋ ಅವುಗಳನ್ನು ಸರಿಸಿದ್ದಾರೆ. ಅವು ಎಲ್ಲಿಗೆ ಹೋಗಬೇಕು ಎಂಬುದನ್ನು ಯಾರಾದರೂ ನಿರ್ಧರಿಸಬೇಕಿದೆ.

ಒಂದು ಪ್ರಕರಣವು, ಅದನ್ನು ದಾಖಲಿಸಿದ ವ್ಯಕ್ತಿಯ ಮರಣಾನಂತರವೂ ಇತ್ಯರ್ಥವಾಗದೇ ಉಳಿದುಬಿಟ್ಟರೆ, ಅದು ಯಾರ ಪ್ರಕರಣವಾಗುತ್ತದೆ?

(ಆಧಾರಗಳು: ನ್ಯಾಷನಲ್ ಜ್ಯುಡಿಷಿಯಲ್ ಡೇಟಾ ಗ್ರಿಡ್ (National Judicial Data Grid) ದತ್ತಾಂಶವನ್ನು ಉಲ್ಲೇಖಿಸಿ ಕೇಂದ್ರ ಕಾನೂನು ಸಚಿವರು ಜುಲೈ 2026ರಲ್ಲಿ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರ (ಪಿಟಿಐ / ತೆಲಂಗಾಣ ಟುಡೇ, 23 ಜುಲೈ 2026ರ ವರದಿಯಂತೆ: 5.64 ಕೋಟಿಗೂ ಹೆಚ್ಚು ಬಾಕಿ ಪ್ರಕರಣಗಳು; ಸುಪ್ರೀಂ ಕೋರ್ಟ್‌ನಲ್ಲಿ 96,000ಕ್ಕೂ ಹೆಚ್ಚು ಬಾಕಿ, ಒಂದು ದಶಕಕ್ಕೂ ಹೆಚ್ಚು ಕಾಲದಿಂದ 10,000ಕ್ಕೂ ಹೆಚ್ಚು, 20 ವರ್ಷಕ್ಕೂ ಹೆಚ್ಚು ಕಾಲದಿಂದ 558 ಮತ್ತು 30 ವರ್ಷಕ್ಕೂ ಹೆಚ್ಚು ಕಾಲದಿಂದ 26 ಪ್ರಕರಣಗಳು; ಹೈಕೋರ್ಟ್‌ಗಳಲ್ಲಿ 30 ವರ್ಷಕ್ಕೂ ಹೆಚ್ಚು ಕಾಲದಿಂದ ಬಾಕಿ ಇರುವ 80,660 ಪ್ರಕರಣಗಳು). ಗೋವಿಂದ ಕಾಲ್ಪನಿಕ ಪಾತ್ರ; ಆದರೆ ಅಂಕಿಅಂಶಗಳು ನೈಜವಾದವು.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Santosh Nair
Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More