‘ಕರ್ನಾಟಕದ ಲೋಕಸಭಾ ಕ್ಷೇತ್ರಗಳು 56ಕ್ಕೆ ಏರಲಿವೆ’; ಕ್ಷೇತ್ರ ಮರುವಿಂಗಡಣೆಗೆ ಜೆಡಿಎಸ್ ಸಂಪೂರ್ಣ ಬೆಂಬಲ
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಜೆಡಿಎಸ್ ಬೆಂಬಲ ನೀಡಿದೆ. ಇಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಈ ಕುರಿತು ಘೋಷಣೆ ಮಾಡಿದ್ದಾರೆ. 30 ವರ್ಷಗಳ ಕನಸು ನನಸಾಗುವ ಕಾಲ ಬಂದಿದೆ ಎಂದ ಹೆಚ್ಡಿ ಕುಮಾರಸ್ವಾಮಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳು 56ಕ್ಕೆ ಹೆಚ್ಚಳವಾಗಲಿವೆ ಎಂದಿದ್ದಾರೆ. ಕ್ಷೇತ್ರ ಮರುವಿಂಗಡಣೆಯಿಂದ ಕನ್ನಡಿಗರ ಪ್ರಾತಿನಿಧ್ಯ ಹೆಚ್ಚಳವಾಗಲಿದೆ, ಎಲ್ಲಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ ಶೇ. 50ರಷ್ಟು ಹೆಚ್ಚಳವಾಗಲಿದೆ. ಈ ಬಗ್ಗೆ ಕಾಂಗ್ರೆಸ್ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ, ನವೆಂಬರ್ 27: ಜೆಡಿಎಸ್ ಪಕ್ಷವು ಮಹಿಳಾ ಮೀಸಲಾತಿ ವಿಧೇಯಕ ಮತ್ತು ಕ್ಷೇತ್ರ ಪುನರ್ವಿಂಗಡಣೆ ವಿಧೇಯಕಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯಿಂದ ಯಾವುದೇ ರಾಜ್ಯಕ್ಕೂ ಅನ್ಯಾಯವಾಗುವುದಿಲ್ಲ. ಈ ಮಸೂದೆಯಿಂದ ಕರ್ನಾಟಕದ ಲೋಕಸಭಾ ಸ್ಥಾನಗಳು ಶೇ. 50ರಷ್ಟು ಹೆಚ್ಚಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಇಂದು ಸಂಜೆ ನವದೆಹಲಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೆಚ್ಡಿ ಕುಮಾರಸ್ವಾಮಿ ಮಾತನಾಡಿದರು. ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಕನಸು 3 ದಶಕಗಳಿಂದ ಬಾಕಿ ಉಳಿದಿತ್ತು ಎಂದ ಅವರು, ಮುಂಬರುವ ಸಂಸತ್ ಅಧಿವೇಶನದಲ್ಲಿ ಧ್ವನಿಮತದ ಮೂಲಕ ಈ ವಿಧೇಯಕ ಅಂಗೀಕಾರಗೊಂಡು ಜಾರಿಗೆ ಬರಲಿದೆ ಎಂದು ಹೇಳಿದರು.
ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಆದರೆ, ಯುನೈಟೆಡ್ ಫ್ರಂಟ್‌ನ ಮಿತ್ರಪಕ್ಷಗಳು ಒಪ್ಪದ ಕಾರಣ ಅದು ಅಂಗೀಕಾರವಾಗಲಿಲ್ಲ ಎಂದು ಅವರು ಸ್ಮರಿಸಿದರು. ಈಗ 30 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದನ್ನು ಸಂಸತ್ತಿಗೆ ತರಲಾಗುತ್ತಿದ್ದು, ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಘೋಷಿಸಿದರು.
ಕ್ಷೇತ್ರ ಪುನರ್ವಿಂಗಡಣೆಯ ಕುರಿತು ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ವಿಧೇಯಕವು ಅಂಗೀಕಾರವಾಗಿ ಜಾರಿಗೆ ಬಂದ ನಂತರ ಕರ್ನಾಟಕದ ಲೋಕಸಭಾ ಕ್ಷೇತ್ರಗಳು ಶೇ. 50ರಷ್ಟು ಹೆಚ್ಚಾಗಲಿವೆ ಎಂದರು. “ಎನ್‌ಡಿಎ ಭಾಗವಾಗಿ, ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಕ್ಷೇತ್ರ ಪುನರ್ವಿಂಗಡಣೆ ವಿಧೇಯಕವು ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಲೋಕಸಭೆಯಲ್ಲಿ ಕನ್ನಡಿಗರ ಪ್ರಾತಿನಿಧ್ಯ ಗಣನೀಯವಾಗಿ ಹೆಚ್ಚಾಗಲಿದೆ” ಎಂದು ಅವರು ಹೇಳಿದರು. ಲೋಕಸಭೆಯಲ್ಲಿ ಕನ್ನಡಿಗರ ಧ್ವನಿ ದುರ್ಬಲಗೊಳ್ಳುವುದಿಲ್ಲ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.
📍ನವದೆಹಲಿ
ಶಾಸನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲು ನೀಡುವ ಐತಿಹಾಸಿಕ ಮಸೂದೆ ಹಾಗೂ ಕ್ಷೇತ್ರ ಮರುವಿಂಗಡಣೆ ವಿಧೇಯಕಕ್ಕೆ @JanataDal_S ಪಕ್ಷವು ಸಂಪೂರ್ಣ ಬೆಂಬಲ ನೀಡುತ್ತದೆ. ರಾಷ್ಟ್ರದ ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರ ದೂರದೃಷ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಇವೆರಡೂ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲು ನಿರ್ಧಾರ ಕೈಗೊಳ್ಳಲಾಯಿತು.
ಹಿರಿಯರು, ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ @ncbn ಅವರೊಂದಿಗೆ ನಡೆಸಿದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಎರಡೂ ಮಸೂದೆಗಳನ್ನು ಬೆಂಬಲಿಸುವ ಘೋಷಣೆ ಮಾಡಲಾಯಿತು.
ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಯಾವುದೇ ರೀತಿಯ ಅನ್ಯಾಯ ಆಗುವುದಿಲ್ಲ ಹಾಗೂ ಲೋಕಸಭೆಯಲ್ಲಿ ಈ ರಾಜ್ಯಗಳ ಪ್ರಾತಿನಿಧ್ಯವೂ ದುಪ್ಪಟ್ಟಾಗುತ್ತದೆ ಎಂಬ ಅಂಶವನ್ನು ಮಾಧ್ಯಮಗೋಷ್ಠಿಯಲ್ಲಿ ಒತ್ತಿ ಹೇಳಲಾಯಿತು.
ಹಾಗೆಯೇ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.
#WomenReservation #DelimitationBill
@PMOIndia
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 27, 2026
ದಕ್ಷಿಣದ ರಾಜ್ಯಗಳು ಪ್ರಾತಿನಿಧ್ಯವನ್ನು ಕಳೆದುಕೊಳ್ಳಲಿವೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದರು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದ ಪ್ರಸ್ತುತ ಲೋಕಸಭಾ ಕ್ಷೇತ್ರಗಳೆಲ್ಲವೂ ಶೇ. 50ರಷ್ಟು ಹೆಚ್ಚಾಗಲಿವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಇಂಡಿಯ ಬಣಕ್ಕೆ ಶಾಕ್; ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬೆಂಬಲ ಘೋಷಣೆ
ಕ್ಷೇತ್ರ ಪುನರ್ವಿಂಗಡಣೆ ವಿಧೇಯಕದ ಬಗ್ಗೆ ಕಾಂಗ್ರೆಸ್ ದೇಶವನ್ನು ಅನಗತ್ಯವಾಗಿ ಗೊಂದಲಕ್ಕೀಡುಮಾಡುತ್ತಿದೆ ಮತ್ತು ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ಸ್ಪಷ್ಟ ನಿಲುವು ಹೊಂದಿಲ್ಲ ಎಂದು ಅವರು ಆರೋಪಿಸಿದರು. ದೇಶದ ಎಲ್ಲಾ ಮಹಿಳೆಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮೋದಿ ನೇತೃತ್ವದ ಎನ್‌ಡಿಎ ಈ ವಿಧೇಯಕವನ್ನು ಸಂಸತ್ತಿಗೆ ತರುತ್ತಿದೆ ಎಂದ ಅವರು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮುಕ್ತ ಮನಸ್ಸಿನಿಂದ ಎರಡೂ ವಿಧೇಯಕಗಳನ್ನು ಬೆಂಬಲಿಸಬೇಕು ಎಂದರು.
📍New Delhi
The @JanataDal_S extends its full support to the historic Bill providing 33% reservation for women in legislative assemblies and to the Delimitation Bill. At the Cabinet meeting chaired by the Hon’ble Prime Minister of India, Shri @narendramodi avaru, it was decided to introduce both Bills in Parliament.
At a joint press conference with our senior leader and the Chief Minister of Andhra Pradesh, Shri @ncbn avaru, we announced our support for both Bills.
It was emphasised at the press conference that delimitation would not in any way disadvantage the southern states and that their representation in the Lok Sabha would also double.
I also extend my heartfelt congratulations to Prime Minister Shri Narendra Modi for taking the historic decision to introduce in Parliament the Women’s Reservation Bill, which had remained pending for more than three decades.
#WomenReservation #DelimitationBill
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 27, 2026
ಕೆಲವು ಪಕ್ಷಗಳು ಕ್ಷೇತ್ರ ಪುನರ್ವಿಂಗಡಣೆ ವಿಧೇಯಕದ ಬಗ್ಗೆ ಆಧಾರರಹಿತ ಸುಳ್ಳುಗಳನ್ನು ಹರಡುತ್ತಿವೆ ಮತ್ತು ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ ಎಂದು ಆರೋಪಿಸಿದ ಅವರು, ದಕ್ಷಿಣದ ರಾಜ್ಯಗಳೂ ಸೇರಿದಂತೆ ಎಲ್ಲಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಶೇ. 50ರಷ್ಟು ಹೆಚ್ಚಾಗಲಿವೆ ಎಂದು ಪುನರುಚ್ಚರಿಸಿದರು. ಈ ಅಪಪ್ರಚಾರಕ್ಕಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದೇಶಕ್ಕೆ ಉತ್ತರಿಸಬೇಕು ಎಂದ ಅವರು, ಎಲ್ಲಾ ಪಕ್ಷಗಳು ಎರಡೂ ವಿಧೇಯಕಗಳನ್ನು ಸರ್ವಾನುಮತದಿಂದ ಬೆಂಬಲಿಸುವಂತೆ ಒತ್ತಾಯಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




