AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ವಿದಾಯದ ವೇಳೆ ವಧು ಹಿಂದಕ್ಕೆ ಅಕ್ಕಿ ಎಸೆಯುವುದೇಕೆ? ಈ ಭಾವನಾತ್ಮಕ ಸಂಪ್ರದಾಯದ ಹಿಂದಿರುವ ಧಾರ್ಮಿಕ ಮಹತ್ವ

ಹಿಂದೂ ವಿವಾಹದಲ್ಲಿ ವಧು ತವರು ಮನೆಯಿಂದ ಹೊರಡುವಾಗ ಹಿಂದಕ್ಕೆ ಅಕ್ಕಿ ಎಸೆಯುವ ಆಚರಣೆ ಅತ್ಯಂತ ಭಾವನಾತ್ಮಕ. ಇದು ಹುಟ್ಟಿ ಬೆಳೆದ ಮನೆಯ ಪ್ರೀತಿ, ವಾತ್ಸಲ್ಯ, ಉತ್ತಮ ಸಂಸ್ಕಾರಕ್ಕಾಗಿ ಪೋಷಕರಿಗೆ ಸಲ್ಲಿಸುವ ಕೃತಜ್ಞತೆಯ ಸಂಕೇತ. ಅಕ್ಕಿ ಶುಭ, ಸಮೃದ್ಧಿ ಪ್ರತೀಕವಾಗಿದ್ದು, ಈ ಮೂಲಕ ವಧು ತನ್ನ ತವರು ಮನೆಗೆ ಸದಾ ಸುಖ-ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತಾಳೆ. ಇದು ಪೋಷಕರ ಬಾಂಧವ್ಯವನ್ನು ಗಟ್ಟಿಗೊಳಿಸಿ, ತವರು ಮನೆಗೆ ಶುಭ ತರುತ್ತದೆ ಎಂಬ ನಂಬಿಕೆಯಿದೆ.

ಮದುವೆ ವಿದಾಯದ ವೇಳೆ ವಧು ಹಿಂದಕ್ಕೆ ಅಕ್ಕಿ ಎಸೆಯುವುದೇಕೆ? ಈ ಭಾವನಾತ್ಮಕ ಸಂಪ್ರದಾಯದ ಹಿಂದಿರುವ ಧಾರ್ಮಿಕ ಮಹತ್ವ
ಹಿಂದೂ ವಿವಾಹ ಸಂಪ್ರದಾಯ
ಅಕ್ಷತಾ ವರ್ಕಾಡಿ
|

Updated on: Nov 28, 2026 | 12:05 PM

Share

ಹಿಂದೂ ವಿವಾಹ ಸಂಪ್ರದಾಯಗಳಲ್ಲಿ ವಧು ತವರು ಮನೆಯಿಂದ ಗಂಡನ ಮನೆಗೆ ಹೊರಡುವ (ವಿದಾಯ) ಸಮಯದಲ್ಲಿ ಹಿಂದಕ್ಕೆ ಅಕ್ಕಿ ಎಸೆಯುವ ಆಚರಣೆಯನ್ನು ಅತ್ಯಂತ ಭಾವನಾತ್ಮಕ ಹಾಗೂ ಮಹತ್ವದ್ದಾಗಿ ಪರಿಗಣಿಸಲಾಗುತ್ತದೆ. ಈ ಆಚರಣೆಯ ವೇಳೆ ವಧು ತನ್ನ ಬೊಗಸೆಯಲ್ಲಿ ಅಕ್ಕಿಯನ್ನು ತೆಗೆದುಕೊಂಡು, ಹಿಂದೆ ನಿಂತಿರುವ ತನ್ನ ಹೆತ್ತವರು, ಒಡಹುಟ್ಟಿದವರು ಮತ್ತು ತವರು ಮನೆಯ ಕಡೆಗೆ ಎಸೆಯುತ್ತಾಳೆ. ತಾನು ಹುಟ್ಟಿ ಬೆಳೆದ ಮನೆಯಲ್ಲಿ ಪಡೆದ ಪ್ರೀತಿ, ವಾತ್ಸಲ್ಯ, ಉತ್ತಮ ಸಂಸ್ಕಾರ ಮತ್ತು ಸಂತೋಷಕ್ಕಾಗಿ ಹೆತ್ತವರಿಗೆ ಕೃತಜ್ಞತೆ ಸಲ್ಲಿಸುವುದೇ ಈ ಸಂಪ್ರದಾಯದ ಪ್ರಮುಖ ಉದ್ದೇಶವಾಗಿದೆ.

ಅಕ್ಕಿ ಎಸೆಯುವ ಆಚರಣೆಯ ಧಾರ್ಮಿಕ ಮಹತ್ವ:

ಹಿಂದೂ ಧರ್ಮದಲ್ಲಿ ಅಕ್ಕಿಯನ್ನು ಶುಭ, ಪವಿತ್ರತೆ ಮತ್ತು ಸಮೃದ್ಧಿಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಪೂಜೆ, ವಿವಾಹ, ಗೃಹಪ್ರವೇಶ ಸೇರಿದಂತೆ ಪ್ರತಿಯೊಂದು ಮಂಗಳಕರ ಕಾರ್ಯದಲ್ಲೂ ಮುರಿಯದ ಅಕ್ಕಿ ಅಥವಾ ‘ಅಕ್ಷತೆ’ಯನ್ನು ಸಂಪೂರ್ಣತೆಯ ಸಂಕೇತವಾಗಿ ಬಳಸಲಾಗುತ್ತದೆ. ವಿದಾಯದ ಸಮಯದಲ್ಲಿ ವಧು ಅಕ್ಕಿಯನ್ನು ಎಸೆಯುವ ಮೂಲಕ ತನ್ನ ತವರು ಮನೆಯಲ್ಲಿ ಎಂದಿಗೂ ಆಹಾರ ಮತ್ತು ಧನಧಾನ್ಯಕ್ಕೆ ಕೊರತೆಯಾಗದಿರಲಿ, ಕುಟುಂಬದಲ್ಲಿ ಸದಾ ಸುಖ-ಸಮೃದ್ಧಿ ನೆಲೆಸಿರಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತಾಳೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಶನಿ ಸಾಡೇ ಸಾತಿ ಮುಗಿದ ತಕ್ಷಣ ಜೀವನದಲ್ಲಿ ನಡೆಯುವ 5 ಪ್ರಮುಖ ಬದಲಾವಣೆಗಳಿವು!

ಪೋಷಕರ ಪ್ರೀತಿ ಮತ್ತು ಬಾಂಧವ್ಯದ ಸಂಕೇತ:

ವಧುವಿನ ನಿರ್ಗಮನವು ಕೇವಲ ಒಂದು ಮನೆಯಿಂದ ಮತ್ತೊಂದು ಮನೆಗೆ ತೆರಳುವ ಪ್ರಕ್ರಿಯೆಯಲ್ಲ; ಬದಲಾಗಿ ಆಕೆಯ ಜೀವನದ ಹೊಸ ಅಧ್ಯಾಯದ ಆರಂಭವಾಗಿದೆ. ಬಾಲ್ಯದ ಸವಿನೆನಪುಗಳು ಮತ್ತು ಹೆತ್ತವರ ಮಡಿಲನ್ನು ಬಿಟ್ಟು ಹೊಸ ಕುಟುಂಬಕ್ಕೆ ಕಾಲಿಡುವ ಈ ಭಾವುಕ ಘಳಿಗೆಯಲ್ಲಿ, ಅಕ್ಕಿ ಎಸೆಯುವ ಆಚರಣೆಯು ಮಗಳು ತನ್ನ ಹೆತ್ತವರಿಗೆ ಸಲ್ಲಿಸುವ ಗೌರವದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಪೋಷಕರು ಸಹ ತಮ್ಮ ಮಗಳಿಗೆ ಸುಖಕರ ದಾಂಪತ್ಯ ಜೀವನ ಲಭಿಸಲಿ ಎಂದು ಹೃದಯತುಂಬಿ ಆಶೀರ್ವದಿಸುತ್ತಾರೆ. ಈ ಆಚರಣೆಯು ಎರಡೂ ಕುಟುಂಬಗಳ ನಡುವಿನ ಪ್ರೀತಿ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ವಿದಾಯದ ವೇಳೆ ಅಕ್ಕಿ ಎಸೆಯುವುದು ತವರು ಮನೆಗೆ ಶುಭವೇ?

ಧಾರ್ಮಿಕ ಹಾಗೂ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ವಿದಾಯದ ವೇಳೆ ವಧು ಅಕ್ಕಿ ಎಸೆಯುವುದು ತವರು ಮನೆಗೆ ಅತ್ಯಂತ ಶುಭಕರವೆಂದು ಭಾವಿಸಲಾಗಿದೆ. ಮಗಳು ಮನೆಯಿಂದ ಹೊರಡುವಾಗ ತನ್ನ ಕುಟುಂಬಕ್ಕೆ ಶಾಂತಿ, ನೆಮ್ಮದಿ ಮತ್ತು ಅಕ್ಷಯ ಸಂಪತ್ತನ್ನು ಬಿಟ್ಟು ಹೋಗುತ್ತಾಳೆ ಎಂಬ ನಂಬಿಕೆ ಇದರ ಹಿಂದಿದೆ. ತಾನು ಬೆಳೆದ ಮನೆ ಯಾವಾಗಲೂ ಸಂತೋಷದಿಂದ ತುಂಬಿರಬೇಕು ಮತ್ತು ಹೆತ್ತವರಿಗೆ ಯಾವುದೇ ರೀತಿಯ ಕೊರತೆ ಎದುರಾಗಬಾರದು ಎಂಬ ಮಗಳ ನಿಷ್ಕಲ್ಮಶ ಪ್ರಾರ್ಥನೆಯೇ ಈ ಸುಂದರ ಆಚರಣೆಯ ಸಾರವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More