ಆಪರೇಷನ್ ಬ್ಲೂ ಸ್ಟಾರ್ ಫೋಟೋ ನೋಡಿ ಕಣ್ಣೀರಿಟ್ಟಿದ್ದ ಇಂದಿರಾ ಗಾಂಧಿ; ಸೋನಿಯಾ ಗಾಂಧಿ ಆತ್ಮಕತೆಗೆ ಅಕಾಲಿ ದಳ ಆಕ್ಷೇಪ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕತೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆಯ ಬೆನ್ನಲ್ಲೇ, ಅದರಲ್ಲಿ ಉಲ್ಲೇಖಿಸಲಾಗಿರುವ 1984ರ 'ಆಪರೇಷನ್ ಬ್ಲೂ ಸ್ಟಾರ್' ವಿಚಾರವು ಪಂಜಾಬ್ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ಸ್ವರ್ಣ ಮಂದಿರದ ಸಂಕೀರ್ಣದೊಳಗೆ ನಡೆದ ಆಪರೇಷನ್ ಬ್ಲೂ ಸ್ಟಾರ್ ಸೇನಾ ಕಾರ್ಯಾಚರಣೆಯ ನಂತರದ ಹಾನಿಯ ಫೋಟೋಗಳನ್ನು ನೋಡಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಕಣ್ಣೀರಿಟ್ಟಿದ್ದರು ಎಂದು ಸೋನಿಯಾ ಗಾಂಧಿ ಪುಸ್ತಕದಲ್ಲಿ ಸ್ಮರಿಸಿಕೊಂಡಿದ್ದಾರೆ. ಈ ಹೇಳಿಕೆಗೆ ಶಿರೋಮಣಿ ಅಕಾಲಿ ದಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ನವದೆಹಲಿ, ನವೆಂಬರ್ 10: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಭಾರೀ ಚರ್ಚೆಗೆ ಒಳಗಾಗಿದೆ. ಈ ಪುಸ್ತಕದಲ್ಲಿ ಸೋನಿಯಾ ಗಾಂಧಿ ತಮ್ಮ ವೈಯಕ್ತಿಕ ಜೀವನದ ಹಾಗೂ ಗಾಂಧಿ ಕುಟುಂಬದ ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ. ತಮ್ಮ ಪುಸ್ತಕದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಅಮೃತಸರದ ಸ್ವರ್ಣ ಮಂದಿರದಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯ ಬಗ್ಗೆಯೂ ಸೋನಿಯಾ ಗಾಂಧಿ ಪ್ರಸ್ತಾಪಿಸಿದ್ದಾರೆ. ಈ ಕಾರ್ಯಾಚರಣೆಗೆ ಇಂದಿರಾ ಗಾಂಧಿಯವರೇ ಆದೇಶ ನೀಡಿದ್ದರೂ ಅದಾದ ನಂತರದ ಹಾನಿಯ ಫೋಟೋಗಳನ್ನು ನೋಡಿ ಇಂದಿರಾ ಗಾಂಧಿ ಕಣ್ಣೀರಿಟ್ಟಿದ್ದರು ಎಂದು ಸೋನಿಯಾ ಗಾಂಧಿ ಪುಸ್ತಕದಲ್ಲಿ ಸ್ಮರಿಸಿಕೊಂಡಿದ್ದಾರೆ. ಆದರೆ, ಈ ಹೇಳಿಕೆಗೆ ಶಿರೋಮಣಿ ಅಕಾಲಿ ದಳ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ತನ್ನ ಹಳೆಯ ಅಪರಾಧಗಳನ್ನು ಸಕ್ಕರೆ ಬಳಿದು ಮರೆಮಾಚಲು ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
ಇಂದಿರಾ ಗಾಂಧಿ ಕಣ್ಣೀರು:
ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯ ನಂತರ ಸ್ವರ್ಣ ಮಂದಿರದಲ್ಲಾದ ಧ್ವಂಸ ಮತ್ತು ಹಾನಿಯ ಫೋಟೋಗಳನ್ನು ಇಂದಿರಾ ಗಾಂಧಿ ಅವರಿಗೆ ತೋರಿಸಿದಾಗ, ಅದನ್ನು ಕಂಡು ಅವರ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಹರಿದಿತ್ತು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಆ ಘಟನೆಯು ಇಂದಿರಾ ಗಾಂಧಿ ಅವರ ಮನಸ್ಸಿಗೆ ಆಳವಾದ ಗಾಯವನ್ನುಂಟು ಮಾಡಿತ್ತು ಎಂದು ಅವರು ವಿವರಿಸಿದ್ದಾರೆ.
ಸಾವು ಮೊದಲೇ ತಿಳಿದಿತ್ತು:
ಆಪರೇಷನ್ ಬ್ಲೂ ಸ್ಟಾರ್ ನಂತರ ಇಂದಿರಾ ಗಾಂಧಿ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು. “ತಮ್ಮ ಸಾವಿನ ನಂತರ ನಾವು ಏನು ಮಾಡಬೇಕೆಂದು ಅವರು ನಮಗೆ ತಿಳಿಸಿದ್ದರು. ತಮ್ಮ ಅಂತ್ಯ ಸಮೀಪಿಸಿದೆ ಎಂಬುದು ಅವರಿಗೆ ತಿಳಿದಿತ್ತು. ಅವರು ತಮ್ಮ ಸಾವಿಗೆ ಸಿದ್ಧತೆ ನಡೆಸುತ್ತಿದ್ದರು. ಜೊತೆಗೆ ರಾಹುಲ್ ಗಾಂಧಿಗೆ ಧೈರ್ಯದಿಂದಿರಲು ಮತ್ತು ಕಣ್ಣೀರಿಡದಂತೆ ಹೇಳಿದ್ದರು” ಎಂದು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.
1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರ ಭೀಕರ ಹತ್ಯೆಯಾದ ಕ್ಷಣ ಮತ್ತು ರಕ್ತಸಿಕ್ತ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಒಯ್ದ ಆಘಾತಕಾರಿ ದಿನಗಳನ್ನು ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ಭಾವುಕವಾಗಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ನಿನ್ನನ್ನೂ ಕೊಂದುಬಿಡುತ್ತಾರೆ!’; ಪ್ರಧಾನಿಯಾಗದಂತೆ ರಾಜೀವ್ ಗಾಂಧಿ ಬಳಿ ಬೇಡಿಕೊಂಡಿದ್ದ ಸೋನಿಯಾ ಗಾಂಧಿ
ಅಕಾಲಿ ದಳ ತೀವ್ರ ವಾಗ್ದಾಳಿ:
ಸೋನಿಯಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಶಿರೋಮಣಿ ಅಕಾಲಿ ದಳದ ವಕ್ತಾರ ಅರ್ಷದೀಪ್ ಸಿಂಗ್ ಕ್ಲೇರ್, “ಆಪರೇಷನ್ ಬ್ಲೂ ಸ್ಟಾರ್ ಎನ್ನುವುದು ಸಿಖ್ ಸಮುದಾಯ ಹಾಗೂ ಶ್ರೀ ಅಕಾಲ ತಖ್ತ್ ಸಾಹಿಬ್ ಮೇಲಿನ ನೇರ ದಾಳಿಯಾಗಿತ್ತು. ಇದು ಪಿತೂರಿಯ ಭಾಗವಾಗಿ ನಡೆದ ಘಟನೆ. 1984ರಲ್ಲಿ ಕಾಂಗ್ರೆಸ್ ಪಕ್ಷ ಸಿಖ್ಖರ ವಿರುದ್ಧ ನರಮೇಧ ನಡೆಸಿತು. ಇಂದಿರಾ ಗಾಂಧಿಯ ಕಣ್ಣೀರಿನ ಕಥೆ ಹೇಳಿದರೆ ಅಮಾಯಕರ ಹತ್ಯೆಯ ಪಾಪ ತೊಳೆದುಹೋಗುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸ್ಪಷ್ಟನೆ:
ಅಕಾಲಿ ದಳದ ಆರೋಪವನ್ನು ತಳ್ಳಿಹಾಕಿದ ಪಂಜಾಬ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಜಕುಮಾರ್ ವೇರ್ಕಾ, “ಕಾಂಗ್ರೆಸ್ ಪಕ್ಷವು ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯನ್ನು ಎಂದಿಗೂ ಸಮರ್ಥಿಸಿಕೊಂಡಿಲ್ಲ. ಕಾಂಗ್ರೆಸ್ ಸದಾ ಪಂಜಾಬ್ ಮತ್ತು ಸಿಖ್ ಸಮುದಾಯದ ಪರವಾಗಿ ನಿಂತಿದೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವುದೇ ಇದಕ್ಕೆ ಸಾಕ್ಷಿ” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




