ನವದೆಹಲಿ: ದೆಹಲಿ ಸರ್ಕಾರದ ಉಚಿತ ತೀರ್ಥಯಾತ್ರೆ ಯೋಜನೆಯಡಿ ಅಯೋಧ್ಯೆಗೆ ಡಿಸೆಂಬರ್ 3ರಂದು ಮೊದಲ ರೈಲು ಹೊರಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಉಚಿತ ತೀರ್ಥಯಾತ್ರೆ ಯೋಜನೆಯ ಪಟ್ಟಿಯಲ್ಲಿ ತಮಿಳುನಾಡಿನ ವೇಲಂಕಣಿ ಚರ್ಚ್ ಕೂಡ ಇದೆ. ಕ್ಯಾಥೋಲಿಕರ ಪ್ರಮುಖ ತೀರ್ಥಯಾತ್ರೆ ಕ್ಷೇತ್ರವಾದ ತಮಿಳುನಾಡಿನ ವೇಲಂಕಣಿ ಚರ್ಚ್ ಅನ್ನು ಉಚಿತ ತೀರ್ಥಯಾತ್ರೆ ಯೋಜನೆಯ ಸ್ಥಳಗಳ ಪಟ್ಟಿಗೆ ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸುಮಾರು ಒಂದು ತಿಂಗಳ ಹಿಂದೆ ಸಿಎಂ ಅರವಿಂದ್ ಕೇಜ್ರಿವಾಲ್ ಉಚಿತ ತೀರ್ಥಯಾತ್ರೆ ಯೋಜನೆಯನ್ನು ಘೋಷಿಸಿದ್ದರು. ಅಯೋಧ್ಯೆಗೆ ನಮ್ಮ ಯೋಜನೆಯ ಮೊದಲ ರೈಲು ಡಿಸೆಂಬರ್ 3ರಂದು ಹೊರಡಲಿದೆ. ಈಗಾಗಲೇ ರಿಜಿಸ್ಟ್ರೇಷನ್ ಶುರುವಾಗಿದೆ. ಈ ರೈಲು ದೆಹಲಿಯ 1,000 ಹಿರಿಯ ನಾಗರಿಕರನ್ನು ಅಯೋಧ್ಯೆಗೆ ಕರೆದೊಯ್ಯಲಿದೆ. ಹಿರಿಯ ನಾಗರಿಕರಿಂದ ತೀರ್ಥಯಾತ್ರೆ ಯೋಜನೆಗೆ ಬಹಳ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ತೀರ್ಥಯಾತ್ರಾ ಯೋಜನೆ ಹಿರಿಯ ನಾಗರಿಕರು ತೀರ್ಥಯಾತ್ರೆಗೆ ಹೋಗಬಹುದಾದ 12 ಸ್ಥಳಗಳ ಪಟ್ಟಿಯನ್ನು ಹೊಂದಿದೆ. ಆ ಪಟ್ಟಿಗೆ ಅಯೋಧ್ಯೆಯನ್ನು ಸೇರಿಸಿದ್ದೇವೆ. ದೆಹಲಿಯಲ್ಲಿರುವ ಯಾವುದೇ ಹಿರಿಯ ನಾಗರಿಕರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಒಬ್ಬ ಹಿರಿಯ ವ್ಯಕ್ತಿಗೆ ಒಬ್ಬ ಯುವಕನನ್ನು ಅಟೆಂಡರ್ ಆಗಿ ಕರೆದುಕೊಂಡು ಹೋಗಬಹುದು. ದೆಹಲಿಯಿಂದ ಅಯೋಧ್ಯೆಗೆ ಮೊದಲ ರೈಲು ಡಿಸೆಂಬರ್ 3ರಂದು ಹೊರಡಲಿದೆ. ದೆಹಲಿ ಸರ್ಕಾರದ ಇ-ಡಿಸ್ಟ್ರಿಕ್ಟ್ ಪೋರ್ಟಲ್‌ನಲ್ಲಿ ಈಗಾಗಲೇ ನೋಂದಣಿ ಪ್ರಾರಂಭವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಈ ಯೋಜನೆಯಡಿಯಲ್ಲಿ ಎಸಿ ರೈಲುಗಳಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಯಾತ್ರಿಕರನ್ನು ಎಸಿ ಹೋಟೆಲ್‌ಗಳಲ್ಲಿ ಇರಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆಹಾರ ಮತ್ತು ಪ್ರಯಾಣದ ವೆಚ್ಚವನ್ನು ಸಹ ಸರ್ಕಾರವೇ ಭರಿಸಲಿದೆ ಮತ್ತು ಸದ್ಯಕ್ಕೆ 36,000ಕ್ಕೂ ಹೆಚ್ಚು ಜನರು ಯೋಜನೆಯ ಲಾಭ ಪಡೆದಿದ್ದಾರೆ. ಪ್ರತಿಯೊಬ್ಬರಿಗೂ ದರ್ಶನಕ್ಕೆ ಅವಕಾಶ ಸಿಗುವಂತೆ ನೋಡಿಕೊಳ್ಳುತ್ತೇನೆ. ಹೆಚ್ಚು ಜನರಿದ್ದರೆ ವಾರದ ನಂತರ ಇನ್ನೊಂದು ರೈಲನ್ನು ಕಳುಹಿಸುತ್ತೇವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ: ನಾನು ಹಿಂದೂ, ಹಾಗಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್