
ಅಯೋಧ್ಯೆ, ಅ17: ದೀಪಾವಳಿ ಹಬ್ಬಕ್ಕೆ ಇನ್ನು ಎರಡು ದಿನ ಬಾಕಿ ಇದೆ. ಎಲ್ಲ ಕಡೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ದೇಶದಲ್ಲಿ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು. ಮಂದಿರಗಳಲ್ಲಿ, ದೇವಾಲಯಗಳಲ್ಲಿ, ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಹಾಗೂ ಭಕ್ತಿಪೂರ್ವಕವಾಗಿ ಆಚರಣೆ ಮಾಡುತ್ತಾರೆ. ಇದೀಗ ರಾಮಮಂದಿರಲ್ಲೂ ಪ್ರತಿವರ್ಷದಂತೆ ಈ ಬಾರಿಯೂ ದೀಪಾವಳಿಯನ್ನು ಅದ್ಧೂರಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಮಾತ್ರ ಒಂದು ವಿಶೇಷವಿದೆ. ಹೌದು ಈ ಬಾರಿ ರಾಮಮಂದಿರದಲ್ಲಿ ವಿಶ್ವದ ಮೊದಲ ರಾಮಾಯಣ ಮೇಣದ ವಸ್ತು ಸಂಗ್ರಹಾಲಯ (New Ramayana Wax Museum) ಲೋಕಾರ್ಪಣೆಗೊಳ್ಳಲಿದೆ. ಇದು ವಿಶ್ವದ ಮೊದಲ ರಾಮಾಯಣ-ವಿಷಯದ ಮೇಣದ ವಸ್ತುಸಂಗ್ರಹಾಲಯವಾಗಿದೆ. ಈ ವಸ್ತುಸಂಗ್ರಹಾಲಯವನ್ನು ಒಂಬತ್ತನೇ ದೀಪೋತ್ಸವ ಆಚರಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
9,850 ಚದರ ಅಡಿ ವಿಸ್ತೀರ್ಣದಲ್ಲಿ ಹೊಂದಿಕೊಂಡಿರುವ ಈ ವಸ್ತುಸಂಗ್ರಹಾಲಯವು, 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ರಾಮಾಯಣ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದೆ. ಇದನ್ನು ಭಕ್ತಿಯ ಕೇಂದ್ರ ಮತ್ತು ಪ್ರಮುಖ ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಲಾಗಿದೆ. ಇದು, ಪುರಾಣ, ತಂತ್ರಜ್ಞಾನ ಮತ್ತು ಕಲಾತ್ಮಕತೆಯನ್ನು ಸಂಯೋಜಿಸುವ ವಿಶಿಷ್ಟ ವಸ್ತುಸಂಗ್ರಹಾಲಯವಾಗಿದೆ. ಈ ವಸ್ತುಸಂಗ್ರಹಾಲಯವು ಅಯೋಧ್ಯಾ ಮುನ್ಸಿಪಲ್ ಕಾರ್ಪೊರೇಷನ್‌ನ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ಇದು 12% ಆದಾಯವನ್ನು ನೀಡಲಿದೆ ಎಂದು ಹೇಳಲಾಗಿದೆ.
ಈ ವಸ್ತು ಸಂಗ್ರಹಾಲಯವು ರಾಮಾಯಣದ ಪ್ರಮುಖ ಪಾತ್ರಗಳಾದ ರಾಮ, ಸೀತಾ ಮಾತೆ, ಲಕ್ಷ್ಮಣ, ಭರತ, ಹನುಮಾನ್, ರಾವಣ ಮತ್ತು ವಿಭೀಷಣರ 50 ಜೀವಂತ ಮೇಣದ ಪ್ರತಿಮೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಶಿಲ್ಪವು ಉಡುಪು ಮತ್ತು ಅಭಿವ್ಯಕ್ತಿಗಳಿಂದ ಹಿಡಿದು ಭಂಗಿ ಮತ್ತು ಬೆಳಕಿನವರೆಗೆ ಸಂಕ್ಷಿಪ್ತವಾಗಿ ವಿವರಿಸಲ್ಪಟ್ಟಿದೆ. ಜತೆಗೆ ಮಹಾಕಾವ್ಯದ ಸಾರವನ್ನು ಮರುಸೃಷ್ಟಿಸಲಾಗಿದೆ. ಪ್ರವೇಶದ್ವಾರದಲ್ಲಿ ಗಣೇಶನ ಭವ್ಯವಾದ ವಿಗ್ರಹವು ಭಕ್ತರನ್ನು ಸ್ವಾಗತಿಸಲಿದೆ. ಇದೊಂದು ರೀತಿಯಲ್ಲಿ ರಾಮಾಯಣ ಲೋಕಕ್ಕೆ ಕಾಲಿಡುವ ಮೊದಲು ಶುಭ ಆರಂಭವನ್ನು ಸಂಕೇತಿಸುತ್ತದೆ.
ನೆಲ ಮಹಡಿ: ಭಗವಾನ್ ರಾಮನ ಬಾಲ್ಯ, ಸೀತೆಯ ಸ್ವಯಂವರ ಮತ್ತು ರಾಮಲಲ್ಲಾನ ಆರಂಭಿಕ ಜೀವನದ ಕ್ಷಣಗಳನ್ನು ತಿಳಿಸುತ್ತದೆ. ಬಾಲ ರಾಮನ ಪ್ರತಿಮೆಯ ಪಕ್ಕದಲ್ಲಿ ವಿಶೇಷ ಸೆಲ್ಫಿ ಪಾಯಿಂಟ್ ಇದ್ದು, ಸಂದರ್ಶಕರು ಸ್ಮರಣೀಯ ಫೋಟೋಗಳನ್ನು ತೆಗೆದುಕೊಳ್ಳಲು ಅವಕಾಶ ಇದೆ.
ಮೊದಲ ಮಹಡಿ: ವನವಾಸದ ವರ್ಷಗಳು, ಲಂಕಾ ದಹನ ಮತ್ತು ರಾಮ-ರಾವಣ ಮಹಾ ಯುದ್ಧದ ಬಗ್ಗೆ ಹೇಳುತ್ತದೆ. ಡೈನಾಮಿಕ್ 3D ಬೆಳಕಿನ ಸೀತೆಯ ಅಪಹರಣ ಮತ್ತು ಹನುಮಂತನು ಲಂಕಾವನ್ನು ಹೊತ್ತಿಸುವ ಪ್ರಮುಖ ದೃಶ್ಯಗಳನ್ನು ಕಾಣಬಹುದು.
ಇದರ ಜತೆಗೆ ಶ್ರೀಗಂಧದ ಸೌಮ್ಯ ಪರಿಮಳ, ರಾಮ ಭಜನೆ, ನಿರಂತರ ರಾಮ ತಾರಕ ಮಂತ್ರ, ಒಂದು ಅದ್ಭುತ ಆಧ್ಯಾತ್ಮಿಕ ಪ್ರಯಾಣವನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ: ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಪ್ರವೇಶ ಶುಲ್ಕ: ಪ್ರತಿ ವ್ಯಕ್ತಿಗೆ 100 ರೂ.
ಭೇಟಿ ನೀಡುವವರ ಮಿತಿ: ಒಂದು ಬಾರಿಗೆ 100 ಜನರು
ಸ್ಥಳ: ಚೌಡಾ ಕೋಸಿ ಪರಿಕ್ರಮ ಮಾರ್ಗ, ಕಾಶಿರಾಮ್ ಕಾಲೋನಿ ಎದುರು
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Fri, 17 October 25