2030ರ ಹೊತ್ತಿಗೆ ಅಯೋಧ್ಯೆ ಅತಿದೊಡ್ಡ ಅಧ್ಯಾತ್ಮ ಪ್ರವಾಸಿ ತಾಣವಾಗಲಿದೆ: ಕೇಂದ್ರ ಸಚಿವ ಜಿ.ಕಿಶನ್​ ರೆಡ್ಡಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸರ್ಕಾರವನ್ನು ಹೊಗಳಿದ ಸಚಿವ ಜಿ.ಕಿಶನ್​ ರೆಡ್ಡಿ, ಶ್ರೀರಾಮನ ಸಂಕಲ್ಪವನ್ನು ಪೂರ್ಣಗೊಳಿಸಲು ಯೋಗಿ ಆದಿತ್ಯನಾಥ್​ ಪ್ರಯತ್ನ ಮಾಡುತ್ತಿದ್ದಾರೆ.

2030ರ ಹೊತ್ತಿಗೆ ಅಯೋಧ್ಯೆ ಅತಿದೊಡ್ಡ ಅಧ್ಯಾತ್ಮ ಪ್ರವಾಸಿ ತಾಣವಾಗಲಿದೆ: ಕೇಂದ್ರ ಸಚಿವ ಜಿ.ಕಿಶನ್​ ರೆಡ್ಡಿ
ಅಯೋಧ್ಯೆಯ ದೀಪೋತ್ಸವ ಚಿತ್ರಣ
Updated By: Lakshmi Hegde

Updated on: Nov 04, 2021 | 9:59 AM

2030ರ ಹೊತ್ತಿಗೆ ಅಯೋಧ್ಯೆ (Ayodhya) ಜಗತ್ತಿನಲ್ಲೇ ಅತಿದೊಡ್ಡ ಅಧ್ಯಾತ್ಮ ಪ್ರವಾಸಿ ತಾಣವಾಗಿ ಪರಿವರ್ತನೆಗೊಳ್ಳಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಶನ್​ ರೆಡ್ಡಿ ಹೇಳಿದ್ದಾರೆ. ಹಾಗೇ, ಶ್ರೀರಾಮಮಂದಿರವನ್ನು ಅತಿಶೀಘ್ರದಲ್ಲೇ ನಿರ್ಮಾಣ ಮಾಡಲಾಗುವುದು. ಅದು ರಾಜ್ಯದಲ್ಲಿ ಪ್ರವಾಸೋದ್ಯಮ ಅವಕಾಶವನ್ನು ಹೆಚ್ಚಿಸಲಿದೆ ಎಂದೂ ತಿಳಿಸಿದ್ದಾರೆ.  

ಅಯೋದ್ಯೆಯಲ್ಲಿ ದೀಪಾವಳಿ ದೀಪೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ನಡೆದ ರಾಮ ಕಥಾ ಪಾರ್ಕ್​​ನಲ್ಲಿ, ಶ್ರೀರಾಮನ ಜೀವನಚರಿತ್ರೆ ಸಾರುವ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಅಯೋಧ್ಯೆ 2030ರ ಹೊತ್ತಿಗೆ ಜಗತ್ತಿನ ಅತಿದೊಡ್ಡ ಅಧ್ಯಾತ್ಮ ಪ್ರವಾಸಿ ತಾಣವಾಗಲಿದೆ. ಜಗತ್ತಿನ ವಿವಿಧ ದೇಶಗಳಿಂದ ಜನರು ಇಲ್ಲಿಗೆ ಪ್ರಾರ್ಥನೆ ಸಲ್ಲಿಸಲು ಬರಲಿದ್ದಾರೆ.  ಅಯೋಧ್ಯೆಯೆಂದರೆ ಸಂಕಲ್ಪ, ಪರಂಪರೆಯ ನಗರ. ಅದೊಂದು ಆಧ್ಯಾತ್ಮಿಕ ನಗರವಾಗಿದ್ದು, ಶೀಘ್ರದಲ್ಲೇ ಪ್ರವಾಸಿ ನಗರವಾಗಲಿದೆ ಎಂದೂ ಸಚಿವ ರೆಡ್ಡಿ ತಿಳಿಸಿದರು.

ಅಯೋಧ್ಯೆಯಲ್ಲಿ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಇಲ್ಲಿಗೆ ರೈಲು ಮತ್ತು ರಸ್ತೆ ಮಾರ್ಗ ಸಂಪರ್ಕ ಅಭಿವೃದ್ಧಿ ಮಾಡಲಾಗುತ್ತದೆ. ಅಯೋಧ್ಯೆಯ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ಇನ್ನು 10 ವರ್ಷಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ 5 ಕೋಟಿಗೆ ಏರಬೇಕು ಎಂಬುದು ನಮ್ಮ ಅಂದಾಜು. ಅಯೋಧ್ಯೆ ಅಭಿವೃದ್ಧಿ ನಮ್ಮ ಹೆಮ್ಮೆ ಎಂದು ಹೇಳಿದರು.

ಇಂದು ಇಲ್ಲಿ 12 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುತ್ತಿರುವುದು ಬರೀ ವಿಶ್ವ ದಾಖಲೆಯಷ್ಟೇ ಅಲ್ಲ. ಶ್ರೀರಾಮನ ವಿನಯತೆ, ನಮ್ರತೆಯನ್ನು ಜಗತ್ತಿಗೇ ಸಾರುವ ಒಂದು ವಿಧಾನ. ಶ್ರೀರಾಮ ವನವಾಸದಿಂದ ಅಯೋಧ್ಯೆಗೆ ಮರಳಿದಾಗ ದೀಪಗಳನ್ನು ಬೆಳಗಿದಂತೆಯೇ, ಇದೀಗ ನಮ್ಮ ಸರ್ಕಾರ ಇಲ್ಲಿನ ದೀಪೋತ್ಸವದಲ್ಲಿ ಹಣತೆಗಳನ್ನು ಬೆಳಗಿ, ಈ ನಗರವನ್ನು ಪುನಃ ಬೆಳಗಿಸಿತು ಎಂದು ಕಿಶನ್​ ರೆಡ್ಡಿ ಹೇಳಿದರು. ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸರ್ಕಾರವನ್ನು ಹೊಗಳಿದ ಅವರು, ಶ್ರೀರಾಮನ ಸಂಕಲ್ಪವನ್ನು ಪೂರ್ಣಗೊಳಿಸಲು ಯೋಗಿ ಆದಿತ್ಯನಾಥ್​ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿಂದು ಯಾವುದೇ ತಾರತಮ್ಯವಿಲ್ಲ. ಜನರು ಯಾವುದೇ ಭಯವಿಲ್ಲದೆ ಬದುಕುತ್ತಿದ್ದಾರೆ.  ಯೋಗಿ ಆದಿತ್ಯನಾಥ್​ರ ಕಠಿಣ ಶ್ರಮ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಅಯೋಧ್ಯೆಯಿಂದು ಹೊಸ ದಾರಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಜೊತೆ ಕಲಾವಿದರ ಬಗ್ಗೆ ಪುನೀತ್ ರಾಜಕುಮಾರ್​ಗೆ ಇನ್ನಿಲ್ಲದ ಕಾಳಜಿ ಮತ್ತು ಪ್ರೀತಿ, ವಿಡಿಯೋ ನೋಡಿ

ನೀರು ಪೋಲಾಗುವ ಬಗ್ಗೆ ದೂರು ಹೇಳಿದಕ್ಕೆ ವಿದ್ಯಾರ್ಥಿಗಳಿಗೆ ಧಮ್ಕಿ, ಗುಬ್ಬಿ ಪ.ಪಂ. ಮುಖ್ಯಾಧಿಕಾರಿ ಮೇಲೆ ದೂರು ದಾಖಲು