ಕಾಸರಗೋಡು: ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿರುವ ಕಾಸರಗೋಡಿನ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ (Sri Anandapadmanabha Swamy Temple) ಬಹಳ ಪ್ರಸಿದ್ಧಿ ಪಡೆದಿರುವ ಹಿಂದೂ ದೇವಾಲಯವಾಗಿದೆ. ಇಲ್ಲಿಗೆ ಬರುವ ಭಕ್ತರು ಅನಂತ ಪದ್ಮನಾಭನ ದರ್ಶನದ ಜೊತೆಗೆ ಆ ದೇವಸ್ಥಾನದ ಸುತ್ತಲೂ ಇದ್ದ ಕೊಳದಲ್ಲಿದ್ದ ಬಬಿಯಾ ಮೊಸಳೆಯನ್ನು ನೋಡದೆ ವಾಪಾಸ್ ಬರುವುದೇ ಇಲ್ಲ. ಆ ದೇವಸ್ಥಾನದ ಆಕರ್ಷಣೆಯ ಕೇಂದ್ರವಾಗಿದ್ದ, ಹಲವು ಭಕ್ತರಿಂದ ದೇವರ ಪ್ರತಿರೂಪವೆಂದೇ ಕರೆಯಲ್ಪಡುತ್ತಿದ್ದ ಬಬಿಯಾ ಮೊಸಳೆ ಭಾನುವಾರ ರಾತ್ರಿ ಕೊನೆಯುಸಿರೆಳೆದಿದೆ.
ಅನಂತಪದ್ಮನಾಭ ದೇವಸ್ಥಾನದ ಸುತ್ತಲೂ ನೀರು ಆವರಿಸಿದೆ. ಆ ಕೆರೆಯಲ್ಲಿ ಕಳೆದ 75 ವರ್ಷಗಳಿಂದ ವಾಸವಾಗಿದ್ದ ಬಬಿಯಾ ಮೊಸಳೆ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದೆ. ಬ್ರಿಟಿಷರ ಕಾಲದಿಂದಲೂ ಆ ಕೆರೆಯಲ್ಲಿಯೇ ಇದ್ದ ಬಬಿಯಾ ಆ ಕೆರೆಗೆ ಹೇಗೆ ಬಂದಿತು? ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ. ಆ ಮೊಸಳೆಯನ್ನು ದೇವರ ಮೊಸಳೆ ಎಂದೇ ಕರೆಯಲಾಗುತ್ತಿತ್ತು. ಅಂದಹಾಗೆ, ಮೊಸಳೆಗಳೆಲ್ಲವೂ ಮಾಂಸಾಹಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಬಬಿಯಾ ಮಾತ್ರ ಶುದ್ಧ ಸಸ್ಯಾಹಾರಿ ಮೊಸಳೆಯಾಗಿತ್ತು ಎಂಬುದು ಇನ್ನೊಂದು ವಿಶೇಷ.
ಇದನ್ನೂ ಓದಿ: ಕುಡಿದ ನಶೆಯಲ್ಲಿ ಕೆರೆಯಲ್ಲಿರುವ ಮೊಸಳೆ ಹಿಡಿಯಲು ಹೋದ ಭೂಪ
ದೇವಸ್ಥಾನದ ಸುತ್ತಲೂ ಇರುವ ಕೆರೆಯಲ್ಲಿ ಸಾಕಷ್ಟು ಮೀನುಗಳಿದ್ದರೂ ಬಬಿಯಾ ಆ ಮೀನುಗಳ ತಂಟೆಗೆ ಹೋಗುತ್ತಿರಲಿಲ್ಲ. ಅನಂತ ಪದ್ಮನಾಭ ದೇವಸ್ಥಾನದಲ್ಲಿ ದಿನಕ್ಕೆ 2 ಹೊತ್ತು ನೀಡುತ್ತಿದ್ದ ಪ್ರಸಾದವೇ ಬಬಿಯಾ ಮೊಸಳೆಯ ಆಹಾರವಾಗಿತ್ತು! ದೇವಸ್ಥಾನದ ಅರ್ಚಕರು ಹೊರಗೆ ಬಂದು ಬಬಿಯಾ ಎಂದು ಕರೆದರೆ ಕೆರೆಯಿಂದ ಹೊರಗೆ ಬಂದು ಬಾಯಿ ತೆರೆಯುತ್ತಿದ್ದ ಆ ಮೊಸಳೆ ಅವರು ಕೊಟ್ಟ ಅನ್ನದ ನೈವೇದ್ಯವನ್ನು ತಿಂದು ಹೋಗುತ್ತಿತ್ತು. ಆ ಅರ್ಚಕರ ಜೊತೆ ಬಬಿಯಾಗೆ ಬಹಳ ಅನ್ಯೋನ್ಯ ಸಂಬಂಧವಿತ್ತು.
ಆ ಅಪರೂಪದ ಮೊಸಳೆಯನ್ನು ನೋಡಲೆಂದೇ ಹಲವು ಊರುಗಳಿಂದ ಜನರು ಆಗಮಿಸುತ್ತಿದ್ದರು. ಬಬಿಯಾಳ ಅಂತ್ಯಕ್ರಿಯೆಯನ್ನು ಅನಂತಪದ್ಮನಾಭ ದೇವಸ್ಥಾನದ ಆವರಣದಲ್ಲಿಯೇ ಮಾಡಲು ನಿರ್ಧರಿಸಲಾಗಿದೆ. 1940ರ ಸುಮಾರಿಗೆ ಈ ಬಬಿಯಾ ಅನಂತ ಪದ್ಮನಾಭ ದೇವಸ್ಥಾನದ ಕೊಳದಲ್ಲಿ ಮೊದಲು ಪ್ರತ್ಯಕ್ಷವಾಯಿತು ಎನ್ನಲಾಗುತ್ತದೆ. ಈ ಮೊಸಳೆ ಆ ದೇವಾಲಯವನ್ನು ಕಾಪಾಡುತ್ತಿತ್ತು ಎಂಬ ನಂಬಿಕೆಯೂ ಇದೆ. ಆ ಮೊಸಳೆಗೆ ದೇವಸ್ಥಾನದಲ್ಲಿ ನೀಡುವ ಅನ್ನದ ನೈವೇದ್ಯವೆಂದರೆ ಬಹಳ ಇಷ್ಟ. ಬೇರೆ ಭಕ್ತರು ಬಬಿಯಾ ಎಂದು ಎಷ್ಟೇ ಬಾರಿ ಕರೆದರೂ ಆಕೆ ಹೊರಗೆ ಬರುತ್ತಿರಲಿಲ್ಲ. ಆದರೆ, ಅರ್ಚಕರು ಕರೆದ ಶಬ್ದ ಕೇಳಿದ ಕೂಡಲೆ ಕೆರೆಯಿಂದ ಹೊರಗೆ ಬಂದು ನೈವೇದ್ಯ ಸ್ವೀಕರಿಸುತ್ತಿತ್ತು.
ಇದನ್ನೂ ಓದಿ: ಅನಂತ ಪದ್ಮನಾಭ ದೇವಸ್ಥಾನದ ದೇವರ ಮೊಸಳೆ ‘ಬಬಿಯಾ’ ಇನ್ನಿಲ್ಲ
ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಎಂಬ ಗ್ರಾಮದಲ್ಲಿರುವ ದೇವಾಲಯದಕ್ಕೆ ಭೇಟಿ ನೀಡುವವರಿಗೆ ಮೊಸಳೆ ಪ್ರಮುಖ ಆಕರ್ಷಣೆಯಾಗಿತ್ತು. ಶ್ರೀ ಅನಂತಪುರ ದೇವಸ್ಥಾನವು ಅನಂತಪುರ ಗ್ರಾಮದ ಕೆರೆಯ ಮಧ್ಯದಲ್ಲಿದೆ. ಇದು ಕೇರಳದ ಏಕೈಕ ಸರೋವರ ದೇವಾಲಯವಾಗಿದ್ದು, ತಿರುವನಂತಪುರಂ ಅನಂತಪದ್ಮನಾಭ ಸ್ವಾಮಿಯ (ಪದ್ಮನಾಭಸ್ವಾಮಿ ದೇವಾಲಯ) ಮೂಲ ಸ್ಥಾನ (ಮೂಲಸ್ಥಾನ) ಎಂದು ನಂಬಲಾಗಿದೆ. ಇದು ಅನಂತಪದ್ಮನಾಭನು ನೆಲೆಸಿದ ಮೂಲ ಸ್ಥಳ ಎಂದು ಪುರಾಣಗಳು ಹೇಳುತ್ತವೆ. ದೇವಾಲಯವನ್ನು ರಕ್ಷಿಸಲು ದೇವರು ನೇಮಿಸಿದ ರಕ್ಷಕ ಈ ಬಬಿಯಾ ಎಂಬ ಮೊಸಳೆ ಎಂದು ಭಕ್ತರು ನಂಬುತ್ತಾರೆ.
ದೇವರ ಪ್ರಸಾದವನ್ನೇ ತಿಂದು 70ಕ್ಕೂ ಹೆಚ್ಚು ವರ್ಷಗಳ ಕಾಲ ಆ ಕೊಳದಲ್ಲಿ ಬದುಕಿದ ಬಬಿಯಾ ವೈದ್ಯಲೋಕಕ್ಕೂ ಅಚ್ಚರಿ ಮೂಡಿಸಿದೆ. ದೇವರ ಮೊಸಳೆ ಇರುವ ಏಕೈಕ ದೇಗುಲ ಇದು. ಸುಮಾರು 75 ವರ್ಷಗಳಿಂದ ಈ ಅನಂತ ಪದ್ಮನಾಭ ದೇವಸ್ಥಾನದ ಕೆರೆಯಲ್ಲಿರುವ ಬಬಿಯಾಗೆ ಎಷ್ಟು ವರ್ಷವಾಗಿತ್ತು ಎಂಬ ಬಗ್ಗೆ ಯಾರಿಗೂ ಖಚಿತ ಮಾಹಿತಿಯಿಲ್ಲ. ಆಕೆಗೆ 80 ವರ್ಷದ ಆಸುಪಾಸಾಗಿತ್ತು ಎಂದು ದೇವಸ್ಥಾನದ ಸಿಬ್ಬಂದಿ ಹೇಳಿದ್ದಾರೆ.
Published On - 1:55 pm, Mon, 10 October 22