ಬೆಂಗಳೂರಿನಿಂದ ಜೈಪುರಕ್ಕೆ ತೆರಳುರುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಾರ್ಗ ಮಧ್ಯೆಯೇ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ. ಇಂಡಿಗೋ ವಿಮಾನ 6E-469ದಲ್ಲಿ ಈ ಮಹಿಳೆ ಪ್ರಯಾಣ ಮಾಡುತ್ತಿದ್ದರು. ಫ್ಲೈಟ್ನಲ್ಲಿದ್ದ ವೈದ್ಯ ಡಾ. ಸುಬಾಹಾನಾ ನಜೀರ್ ಮತ್ತು ವಿಮಾನ ಸಿಬ್ಬಂದಿ ಸೇರಿ ಅವರಿಗೆ ಸುಲಲಿತವಾಗಿ ಹೆರಿಗೆಯಾಗುವಂತೆ ನೋಡಿಕೊಂಡಿದ್ದಾರೆ. ಜೈಪುರಕ್ಕೆ ಬರುತ್ತಿದ್ದಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಇಂಡಿಗೋ ಏರ್ಲೈನ್ ತಿಳಿಸಿದೆ. ಇನ್ನು ಮಹಿಳೆಯ ಹೆರಿಗೆ ಮಾಡಿಸಿದ ಡಾ. ನಜೀರ್ ಅವರು ಜೈಪುರ ಏರ್ಪೋರ್ಟ್ನಲ್ಲಿ ಇಳಿಯುತ್ತಿದ್ದಂತೆ ಅಲ್ಲಿನ ಇಂಡಿಗೋ ಸಿಬ್ಬಂದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. Thank You ಎಂದು ಬರೆಯಲಾಗಿದ್ದ ದೊಡ್ಡ ಕಾರ್ಡ್ನ್ನೂ ನೀಡಿದ್ದಾರೆ. ಈ ಚಿತ್ರವನ್ನೂ ಇಂಡಿಗೋ ಬಿಡುಗಡೆ ಮಾಡಿದೆ. ಹಾಗೇ ತಾಯಿ-ಮಗು ಹಾಗೂ ಅವರೊಂದಿಗೆ ಸಿಬ್ಬಂದಿ, ವೈದ್ಯೆ ಇರುವ ಫೋಟೋವನ್ನೂ ಶೇರ್ ಮಾಡಿದೆ.
ಇದೇ ಮೊದಲಲ್ಲ
ಕಳೆದ ಅಕ್ಟೋಬರ್ನಲ್ಲಿ ಕೂಡ ಮಹಿಳೆಯೊಬ್ಬರು ಇಂಡಿಗೋ ಫ್ಲೈಟ್ನಲ್ಲಿ ಗಂಡುಮಗುವಿಗೆ ಜನ್ಮನೀಡಿದ್ದರು. ಅಂದು ವಿಮಾನ ದೆಹಲಿಯಿಂದ ಬೆಳಗಾವಿಗೆ ಬರುತ್ತಿತ್ತು. ಅಂದು ಆ ಮಹಿಳೆಗೆ ಇನ್ನೂ 9 ತಿಂಗಳು ಪೂರ್ತಿ ತುಂಬಿರಲಿಲ್ಲ. ಆಗ ಕೂಡ ಸುಲಲಿತವಾಗಿ ಹೆರಿಗೆಯಾಗಿತ್ತು ಮತ್ತು ತಾಯಿ-ಮಗು ಆರೋಗ್ಯವಾಗಿದ್ದಿದ್ದಾಗಿ ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿತ್ತು.
ಆ ಮಹಿಳೆಗೆ ವಿಮಾನದ ಪ್ರಥಮ ಚಿಕಿತ್ಸೆ ವಿಭಾಗದ ಸಿಬ್ಬಂದಿ ಹೆರಿಗೆ ಮಾಡಿಸಿದ್ದರು. ಅಂದು ಪೈಲಟ್ ತುರ್ತು ಭೂಸ್ಪರ್ಶಕ್ಕೆ ಮುಂದಾಗಿದ್ದರೂ, ಅಷ್ಟರಲ್ಲಾಗಲೇ ಆಕೆಯ ಹೆರಿಗೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರೂ ಸಹ ಈ ಬಗ್ಗೆ ಚರ್ಚಿಸಿದ್ದರು.
ಇದನ್ನೂ ಓದಿ: ಪ್ಲಾಸ್ಟಿಕ್ ತ್ಯಜಿಸಿದರೆ ಅದೇ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ; ಸತ್ರ ನ್ಯಾಯಾಧೀಶ ಉಮೇಶ್ ಅಡಿಗ ಅನಿಸಿಕೆ