ದೇಶದ ವಿವಿಧೆಡೆ ಮತ್ತೆ ಕೊರೊನಾ ಆತಂಕ: ಮಾಸ್ಕ್ ಕಡ್ಡಾಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ
ಕೆಲ ಜಿಲ್ಲೆಗಳು ಮೊದಲಿನಿಂದಲೂ ಕೊರೊನಾ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದವು. ಸುರಕ್ಷಿತ ವಲಯಗಳಾಗಿದ್ದ ಅನೇಕ ಜಿಲ್ಲೆಗಳಲ್ಲಿ ಇದೀಗ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 70 ವಾರಗಳಲ್ಲಿ ದೇಶದ 70 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ಶೇ 150ರಷ್ಟು ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿ: ಕೊರೊನಾ ನಿಯಂತ್ರಣದಲ್ಲಿ ನಾವು ಸಾಧಿಸಿರುವ ಮುನ್ನಡೆಯನ್ನು ಬೇಜವಾಬ್ದಾರಿಯಾಗಿ ಬದಲಾಯಿಸುವುದು ಬೇಡ. ಮಾಸ್ಕ್ ಧರಿಸುವುದು ಮತ್ತು ಅಂತರ ಪಾಲಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಆತ್ಮವಿಶ್ವಾಸವು ಅತಿವಿಶ್ವಾಸವಾಗಿ ಅಪಾಯಕಾರಿ ಮಟ್ಟಕ್ಕೆ ಏರುವುದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದರು.
ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಮಂಗಳವಾರ ಸಂವಾದ ನಡೆಸಿದ ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊರೊನಾ ಮಾದರಿ ಪರೀಕ್ಷೆಗಳು ಹೆಚ್ಚಾಗಬೇಕು. ಕೆಲ ರಾಜ್ಯಗಳಲ್ಲಿ ದೀಢೀರನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಸಣ್ಣ ನಗರಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಬೇಕು ಎಂದು ಸೂಚಿಸಿದರು.
ವಿಶ್ವದ ಹಲವು ದೇಶಗಳು ಕೊರೊನಾದ ಹಲವು ಅಲೆಗಳನ್ನು ಎದುರಿಸಬೇಕಾಯಿತು. ನಮ್ಮ ದೇಶದಲ್ಲಿಯೂ, ಕೆಲ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿವೆ. ಈ ಬಗ್ಗೆ ಕೆಲ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಪರೀಕ್ಷೆಯ ಸಂಖ್ಯೆ ಹೆಚ್ಚಾಗಿದೆ. ಇದರ ಜೊತೆಗೆ ಸೋಂಕಿತರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬಂದಿದೆ ಎಂದರು.
ಕೆಲ ಜಿಲ್ಲೆಗಳು ಮೊದಲಿನಿಂದಲೂ ಕೊರೊನಾ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದವು. ಸುರಕ್ಷಿತ ವಲಯಗಳಾಗಿದ್ದ ಅನೇಕ ಜಿಲ್ಲೆಗಳಲ್ಲಿ ಇದೀಗ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 70 ವಾರಗಳಲ್ಲಿ ದೇಶದ 70 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ಶೇ 150ರಷ್ಟು ಹೆಚ್ಚಾಗಿದೆ. ಈಗ ನಾವು ಕೊರೊನಾ ಸೋಂಕು ವಿಸ್ತರಣೆಗೆ ಕಡಿವಾಣ ಹಾಕದಿದ್ದರೆ ರಾಷ್ಟ್ರವ್ಯಾಪಿ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಬಹುದು. ಭಾರತದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ ಶೇ 96ರಷ್ಟು ಇರುವುದು ಗಮನಾರ್ಹ ಸಂಗತಿ. ಸೋಂಕಿತರ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇರುವ ದೇಶಗಳಲ್ಲಿ ಭಾರತವೂ ಒಂದು ಎಂದು ಮೋದಿ ಹೇಳಿದರು.
ದೇಶದಲ್ಲಿ ಕೊರೋನಾ 2ನೇ ಅಲೆ ವಿಸ್ತರಣೆಗೆ ಕಡಿವಾಣ ಹಾಕಬೇಕಿದೆ. ಇದಕ್ಕಾಗಿ ನಾವು ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಭಾರತ ಸೇರಿ ವಿಶ್ವದ ಹಲವು ದೇಶಗಳು ಕೊರೊನಾದ ಹಲವು ಅಲೆಗಳನ್ನು ಎದುರಿಸಿವೆ. ನಮ್ಮ ದೇಶದಲ್ಲಿಯೂ ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಇಂಥ ಪ್ರದೇಶಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಗಮನ ನೀಡಬೇಕು. ಸಣ್ಣಸಣ್ಣ ನಗರಗಳಲ್ಲಿಯೂ ಕೊವಿಡ್ ಟೆಸ್ಟ್, ಲಸಿಕೆ ವಿತರಣೆ ಕೇಂದ್ರಗಳ ಸಂಖ್ಯೆ ಹೆಚ್ಚಾಗಬೇಕು. ದೇಶದಲ್ಲಿ ಪ್ರತಿದಿನ 30 ಲಕ್ಷ ಜನರಿಗೆ ಲಸಿಕೆ ನೀಡಬೇಕು. ಸಾಮೂಹಿಕ ಪ್ರಯತ್ನ, ಕಠಿಣ ಕ್ರಮಗಳಿಂದ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಎಂದು ನುಡಿದರು.
ಕೊರೊನಾ ನಿಯಂತ್ರಣಕ್ಕೆ ಅತಿಸೂಕ್ಷ್ಮ ವಲಯಗಳನ್ನು (ಮೈಕ್ರೊ ಕಂಟೇನ್ಮೆಂಟ್ ಜೋನ್) ಗುರುತಿಸಿಕೊಂಡು ಯೋಜನೆಗಳನ್ನು ರೂಪಿಸುವುದು ಅತ್ಯಗತ್ಯ. ದೇಶದಲ್ಲಿರುವ ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಈ ವಿಚಾರದಲ್ಲಿ ಯಾರೊಬ್ಬರೂ ನಿರ್ಲಕ್ಷ್ಯ ಧೋರಣೆ ತೋರಬಾರದು. ಸ್ಥಳೀ ಆಡಳಿತಗಳು ಸಹ ಮಾಸ್ಕ್ ಧಾರಣೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಟೆಸ್ಟ್, ಟ್ರೇಸ್, ಟ್ರ್ಯಾಕ್ ಮಂತ್ರದಿಂದ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿಲುವು ಪುನರುಚ್ಚರಿಸಿದರು.
ಇದನ್ನೂ ಓದಿ: ಕೊರೊನಾ ಲಸಿಕೆ ವಿತರಣೆಗೆ ವೇಗ ನೀಡಲು ರಾಜ್ಯ ಸರ್ಕಾರ ನಿರ್ಧಾರ: ಬಿ.ಎಸ್.ಯಡಿಯೂರಪ್ಪ
ಇದನ್ನೂ ಓದಿ: ರೂಪಾಂತರಿ ಕೊರೊನಾ ಭಯ: ಐಪಿಎಲ್ ಹೊರತುಪಡಿಸಿ, ಎಲ್ಲಾ ವಯೋಮಾನದವರ ದೇಶಿ ಪಂದ್ಯಾವಳಿಗಳಿಗೆ ಬ್ರೇಕ್ ಹಾಕಿದ BCCI!
Published On - 2:59 pm, Wed, 17 March 21