
ಉಡುಪಿ, ಅಕ್ಟೋಬರ್ 14: ರಾಜಕೀಯ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ನನ್ನ ನೆಚ್ಚಿನ ಮುಖಂಡ. ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ. ಯಾವತ್ತಾದರೂ ರಾಜಕೀಯದ ಬಗ್ಗೆ ಆಸಕ್ತಿ ಬಂದರೆ ನೋಡೋಣ ಎಂದು ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹವಾಲ್ (Saina Nehwal) ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ನನಗೆ ನರೇಂದ್ರ ಮೋದಿಯವರ ಚಿಂತನೆ ತುಂಬಾ ಇಷ್ಟ.ಕೆಲವೊಮ್ಮೆ ಅವರ ಕಾರ್ಯಕ್ರಮಗಳಿಗೆ ತೆರಳಿ ನಾನು ಬೆಂಬಲಿಸುತ್ತೇನೆ. ರಾಜಕೀಯ ತುಂಬಾ ಸುಲಭ ಎಂದು ಭಾವಿಸುತ್ತಾರೆ. ಆದರೆ ಅದು ನಾವು ಊಹಿಸಿದಷ್ಟು ಸುಲಭವಿಲ್ಲ ಎಂದು ಸೈನಾ ಹೇಳಿದ್ದಾರೆ.
ಬ್ಯಾಡ್ಮಿಂಟನ್ ಆಟಕ್ಕಾಗಿ ನಾನು ತುಂಬಾ ತ್ಯಾಗ ಮಾಡಬೇಕಾಯಿತು. ಕಳೆದ 25 ವರ್ಷಗಳಿಂದ ಮನೆ , ಸ್ನೇಹಿತರು, ಫುಡ್ ಎಲ್ಲವನ್ನು ಬಿಟ್ಟು ಕ್ರೀಡಾ ಕ್ಷೇತ್ರದಲ್ಲಿದ್ದೇನೆ. ತುಂಬಾ ಒತ್ತಡದ ಜೀವನ ನಡೆಸಿದ್ದೇನೆ. ನಾನೀಗ ಭಾರವಾದ ಹೃದಯದಿಂದ ಬ್ಯಾಡ್ಮಿಂಟನ್ ತೊರೆದಿದ್ದು, ದೈಹಿಕ ಕ್ಷಮತೆಯ ಕಾರಣಕ್ಕೆ ಇದು ಅನಿವಾರ್ಯವಾಗಿತ್ತು. ಆಟವಾಡುವ ಉತ್ಸಾಹ ಇದ್ದರೂ ದೇಹ ಸ್ಪಂದಿಸುವುದಿಲ್ಲ. ಆಟಗಾರ್ತಿಯ ಮನಸ್ಥಿತಿಯಿಂದ ನಾನು ಹೊರ ಬರಬೇಕಿದ್ದು, ಈಗಷ್ಟೇ ನಾನು ಸಕ್ರಿಯ ಚಟುವಟಿಕೆಯಿಂದ ಹೊರ ಬಂದವಳು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಮರಳಿದ ವಿರಾಟ್ ಕೊಹ್ಲಿ: ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ದಂಡು
ಕೋಚಿಂಗ್ ನೀಡುವ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಅವರು, ಆ ಬಗ್ಗೆ ನನಗೆ ಆಸಕ್ತಿ ಇಲ್ಲ. ಹೈದರಾಬಾದ್ ನಲ್ಲಿ ಬ್ಯಾಡ್ಮಿಂಟನ್ ತರಬೇತಿ ನೀಡುವ ಅತ್ಯುತ್ತಮ ಅಕಾಡೆಮಿ ಇದೆ. ಕೋಚಿಂಗ್ ತುಂಬಾ ಡಿಫಿಕಲ್ಟ್. ಆಡುವುದಕ್ಕಿಂತಲೂ ಕೋಚಿಂಗ್ ಗೆ ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ. ಹತ್ತು ಹದಿನೈದು ಗಂಟೆ ನಿಂತುಕೊಂಡು ಬೊಬ್ಬೆ ಹೊಡೆಯುತ್ತ ತರಬೇತಿ ನೀಡುವುದು ಸುಲಭವಲ್ಲ. ಹೀಗಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದೇನೆ. ಬ್ಯಾಡ್ಮಿಂಟನ್ ಮಾತ್ರವಲ್ಲದೆ ಎಲ್ಲ ಬಗೆಯ ಕ್ರೀಡೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣ ಬಿಟ್ಟು ಮಕ್ಕಳು ಮೈದಾನದತ್ತ ಬರಬೇಕು. ಹಾಗಾಗಿ ಅವರನ್ನು ಮೋಟಿವೇಟ್ ಮಾಡುವುದರಲ್ಲಿ ನನಗೆ ಸಂತೋಷವಿದೆ ಎಂದು ಸೈನಾ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:43 pm, Tue, 14 October 25