ಬ್ಯಾಂಕ್ ಒಕ್ಕೂಟಗಳು ನಾಳಿನ ಭಾರತ್ ಬಂದ್​ನಲ್ಲಿ ಭಾಗಿಯಾಗುತ್ತಿಲ್ಲ

|

Updated on: Dec 07, 2020 | 10:34 PM

ನಾಳೆ ಭಾರತ ಬಂದ್​ಗೆ ಕರೆ ನೀಡಿರುವ ರೈತರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿರುವ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಮತ್ತು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಗಳು ಬಂದ್​ನಲ್ಲಿ ಭಾಗಿಯಾಗುವುದಿಲ್ಲವೆಂದು ಹೇಳಿವೆ.

ಬ್ಯಾಂಕ್ ಒಕ್ಕೂಟಗಳು ನಾಳಿನ ಭಾರತ್ ಬಂದ್​ನಲ್ಲಿ ಭಾಗಿಯಾಗುತ್ತಿಲ್ಲ
ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ
Follow us on

ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನೀಡಿರುವ ಭಾರತ ಬಂದ್​ನಲ್ಲಿ ತಾವು ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಬ್ಯಾಂಕ್ ಒಕ್ಕೂಟಗಳು ನೈತಿಕವಾಗಿ ಅವರೊಂದಿಗಿರುವುದಾಗಿ ಹೇಳಿವೆ. ದೆಹಲಿಯ ಹೊರವಲಯದಲ್ಲಿ ಒಂದು ವಾರದಿಂದ ನೆರೆದು ರಾಷ್ಟ್ರೀಯ ಹೆದ್ದಾರಿಗಳನ್ನು ಅಡ್ಡಗಟ್ಟಿರುವ ರೈತರು ಮಂಗಳವಾರದಂದು ರಾಷ್ಟ್ರವ್ಯಾಪಿ ಬಂದ್​ಗೆ ಕರೆ ನೀಡಿವೆ.

ಇಂದು ಮಾಧ್ಯಮದವರೊಂದಿಗೆ ಮಾತಾಡಿದ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ಸೌಮ್ಯ ದತ್ತಾ, ಬ್ಯಾಂಕ್ ಒಕ್ಕೂಟಗಳು ರೈತ ಸಮುದಾಯ ಮತ್ತು ಪ್ರತಿಭಟನಾನಿರತ ರೈತರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸುತ್ತವೆಯಾದರೂ ಅವರು ನೀಡಿರುವ ಭಾರತ ಬಂದ್​ನಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದರು.

ಹಾಗೆಯೇ, ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ ಹೆಚ್ ವೆಂಕಟಾಚಲಂ ಅವರು ಸಹ ಮಾಧ್ಯಮದವರೊಂದಿಗೆ ಮಾತಾಡಿ, ತಮ್ಮ ಸಂಘ ನಾಳೆ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಮತ್ತು ಕೆಲಸಕ್ಕೂ ಗೈರು ಹಾಜರಾಗುವುದಿಲ್ಲವೆಂದು ಹೇಳಿದರು. ಆದರೆ ರೈತರು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲವಿದೆಯೆಂದು ಅವರು ತಿಳಿಸಿದರು.

ಬ್ಯಾಂಕ್ ಉದ್ಯೋಗಿಗಳು ಕಪ್ಪು ಪಟ್ಟಿಯನ್ನು ಧರಿಸಿ ಕೆಲಸಕ್ಕೆ ಹಾಜರಾಗಲಿದ್ದಾರೆ ಮತ್ತು ಕೆಲಸ ಆರಂಭಿಸುವ ಮೊದಲು ಹಾಗೂ ದಿನದ ಕೆಲಸ ಮುಗಿದ ನಂತರ ತಮ್ಮ ತಮ್ಮ ಶಾಖೆಗಳ ಮುಂದೆ ಫಲಕಗಳನ್ನು ಪ್ರದರ್ಶಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಾಥ್ ನೀಡುವುದಾಗಿ ವೆಂಕಟಾಚಲಂ ಹೇಳಿದರು.