
ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ (ಜನವರಿ 28, 2026) ಸಂಭವಿಸಿದ ಈ ಭೀಕರ ವಿಮಾನ ಅಪಘಾತದ ತಾಂತ್ರಿಕ ವಿವರಗಳು ಈಗ ಲಭ್ಯವಾಗುತ್ತಿವೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮತ್ತು ವಾಯುಯಾನ ತಜ್ಞರ ಪ್ರಾಥಮಿಕ ವರದಿಯಂತೆ ಅಪಘಾತಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ನೀಡಲಾಿದೆ. ವಿಮಾನವು ಮೊದಲ ಬಾರಿಗೆ ಬಾರಾಮತಿ ರನ್‌ವೇ ಮೇಲೆ ಇಳಿಯಲು ಪ್ರಯತ್ನಿಸಿದಾಗ ತಾಂತ್ರಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಪೈಲಟ್ ತಕ್ಷಣವೇ ‘ಗೋ-ಅರೌಂಡ್’ (Go-around) ಮಾಡಲು ನಿರ್ಧರಿಸಿದರು, ಅಂದರೆ ವಿಮಾನವನ್ನು ಮತ್ತೆ ಮೇಲೆ ಹಾರಿಸಿ ಎರಡನೇ ಬಾರಿ ಇಳಿಯಲು ಪ್ರಯತ್ನಿಸಿದರು. ಈ ಎರಡನೇ ಪ್ರಯತ್ನದ ವೇಳೆ ವಿಮಾನವು ಹಠಾತ್ತಾಗಿ ನಿಯಂತ್ರಣ ಕಳೆದುಕೊಂಡು ರನ್‌ವೇಯ ಪ್ರಾರಂಭದ ಹಂತದಲ್ಲಿ (Runway Threshold) ವೇಗವಾಗಿ ಅಪ್ಪಳಿಸಿದೆ.
ವಿಮಾನವು ರನ್‌ವೇಗೆ ಅಪ್ಪಳಿಸಿದ ತಕ್ಷಣ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತು. ಇದರಿಂದಾಗಿ ವಿಮಾನವು ತುಂಡು ತುಂಡಾಗಿ ಚದುರಿಹೋಗಿದೆ. ಈ ಭೀಕರ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಐವರು (5) ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇದರಲ್ಲಿ ಇಬ್ಬರು ಪೈಲಟ್‌ಗಳು (ಸುಮಿತ್ ಕಪೂರ್ ಮತ್ತು ಸಂಭವಿ ಪಾಠಕ್), ಒಬ್ಬ ಪಿಎಸ್‌ಒ ಮತ್ತು ಒಬ್ಬ ಅಟೆಂಡೆಂಟ್ ಸೇರಿದ್ದಾರೆ. ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ಬಾರಾಮತಿ ವೈದ್ಯಕೀಯ ಕಾಲೇಜಿಗೆ ತರಲಾಗಿದ್ದು, ಪೋಸ್ಟ್‌ಮಾರ್ಟಮ್ ನಂತರ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಾಥಮಿಕ ವರದಿಯ ಪ್ರಕಾರ ಆ ಸಮಯದಲ್ಲಿ ಹವಾಮಾನವು ಸಾಧಾರಣವಾಗಿತ್ತು, ಆದ್ದರಿಂದ ತಾಂತ್ರಿಕ ದೋಷವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಅಪಘಾತದ ಸ್ಥಳದಿಂದ ವಿಮಾನದ ‘ಬ್ಲಾಕ್ ಬಾಕ್ಸ್’ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರ ವಿಶ್ಲೇಷಣೆಯಿಂದ ಪೈಲಟ್ ಮತ್ತು ಎಟಿಸಿ (ATC) ನಡುವೆ ನಡೆದ ಕೊನೆಯ ಸಂಭಾಷಣೆ ಹಾಗೂ ವಿಮಾನದ ತಾಂತ್ರಿಕ ಸ್ಥಿತಿಯ ನಿಖರ ಮಾಹಿತಿ ದೊರೆಯಲಿದೆ. ಕೇಂದ್ರ ವಾಯುಯಾನ ಸಚಿವಾಲಯವು AAIB (Aircraft Accident Investigation Bureau) ಮೂಲಕ ಸಮಗ್ರ ತನಿಖೆಗೆ ಆದೇಶಿಸಿದೆ. ವಾಯುಯಾನದ ಅಂಕಿಅಂಶಗಳ ಪ್ರಕಾರ, ಸುಮಾರು 60% ರಿಂದ 80% ರಷ್ಟು ಅಪಘಾತಗಳು ವಿಮಾನವು ಇಳಿಯುವ (Landing) ಅಥವಾ ಟೇಕಾಫ್ ಆಗುವ ಸಮಯದಲ್ಲಿ ಸಂಭವಿಸುತ್ತವೆ. ಅಜಿತ್ ಪವಾರ್ ಅವರ ವಿಮಾನವು ಎರಡನೇ ಬಾರಿ ಇಳಿಯಲು ಪ್ರಯತ್ನಿಸುತ್ತಿದ್ದಾಗ (2nd Approach) ಈ ಘಟನೆ ನಡೆದಿದೆ. ತಜ್ಞರ ಪ್ರಕಾರ, ಒಂದು ಬಾರಿ ಲ್ಯಾಂಡಿಂಗ್ ವಿಫಲವಾದಾಗ ಪೈಲಟ್‌ಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ, ಇದು ಸಣ್ಣ ತಾಂತ್ರಿಕ ದೋಷವನ್ನೂ ದೊಡ್ಡ ಅವಘಡವನ್ನಾಗಿ ಪರಿವರ್ತಿಸಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ: ವಾಯು ದುರಂತಗಳಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಾಜಕಾರಣಿಗಳು ಯಾರ್ಯಾರು?
ತಜ್ಞರು ಹೇಳಿರುವ ಪ್ರಕಾರ, ಈ ವಿಮಾನವು ವಿಶ್ವದಾದ್ಯಂತ ಸುರಕ್ಷಿತವೆಂದು ಹೆಸರುವಾಸಿಯಾಗಿದ್ದರೂ, ಈ ಹಿಂದೆ ಕೆಲವು ಬಾರಿ ‘ರನ್‌ವೇ ಎಕ್ಸ್‌ಕರ್ಷನ್’ (ರನ್‌ವೇಯಿಂದ ಹೊರಬರುವುದು) ಘಟನೆಗಳು ವರದಿಯಾಗಿವೆ. ವಿಮಾನದ ಮಾಲೀಕತ್ವ ಹೊಂದಿದ್ದ VSR ಏವಿಯೇಷನ್ ಪ್ರಕಾರ, ವಿಮಾನವು 100% ಸುಸ್ಥಿತಿಯಲ್ಲಿತ್ತು ಮತ್ತು ಪೈಲಟ್‌ಗಳು ಅನುಭವಿಗಳಾಗಿದ್ದರು. ಆದರೂ ತಾಂತ್ರಿಕ ದೋಷ ಅಥವಾ ಇಂಜಿನ್ ವಿಫಲತೆಯ ಸಾಧ್ಯತೆಯನ್ನು ತಜ್ಞರು ತಳ್ಳಿಹಾಕಿಲ್ಲ. ಅಪಘಾತದ ನಿಖರ ಕಾರಣ ತಿಳಿಯಲು CVR (Cockpit Voice Recorder) ಮತ್ತು FDR (Flight Data Recorder) ಅತಿ ಮುಖ್ಯ. ಪೈಲಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ (ATC) ನಡುವಿನ ಕೊನೆಯ ಸಂಭಾಷಣೆಯು ವಿಮಾನದ ಒಳಗೆ ಯಾವುದಾದರೂ ತುರ್ತು ಪರಿಸ್ಥಿತಿ ಇತ್ತೇ ಎಂಬುದನ್ನು ಸ್ಪಷ್ಟಪಡಿಸಲಿದೆ ಎಂದು ವಾಯುಯಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ