ಕೋವಿಡ್ -19 ಬಗ್ಗೆ ಗಾಬರಿಯಾಗಬೇಡಿ, ಜಾಗರೂಕರಾಗಿರಿ: ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ

|

Updated on: Dec 20, 2023 | 12:48 PM

ಇತ್ತೀಚಿನ ದಿನಗಳಲ್ಲಿ ಇನ್ಫ್ಲುಯೆನ್ಸ ತರಹದ ಅನಾರೋಗ್ಯ, ತೀವ್ರ ಉಸಿರಾಟದ ಕಾಯಿಲೆ, ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಆರೋಗ್ಯ ಸೌಲಭ್ಯಗಳು ಮತ್ತು ಸೇವೆಗಳ ಸನ್ನದ್ಧತೆಯ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆಯನ್ನು ನಡೆಸಿದರು

ಕೋವಿಡ್ -19 ಬಗ್ಗೆ ಗಾಬರಿಯಾಗಬೇಡಿ, ಜಾಗರೂಕರಾಗಿರಿ: ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ
ಕೋವಿಡ್ ಪರಿಸ್ಥಿತಿ ಪರಿಶೀಲಿಸಲು ಮನ್ಸುಖ್ ಮಾಂಡವಿಯಾ ಸಭೆ
Follow us on

ದೆಹಲಿ ಡಿಸೆಂಬರ್ 20: ಕೋವಿಡ್ -19 (Covid 19) ಪ್ರಕರಣಗಳ ಹೆಚ್ಚಳದ ಮಧ್ಯೆ ದೇಶದ ಆಸ್ಪತ್ರೆಗಳಿಗೆ ಸಿದ್ಧತೆ ನಡೆಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ(Mansukh Mandaviya) ಬುಧವಾರ ಹೇಳಿದ್ದಾರೆ. ದೇಶದಲ್ಲಿನ ಕೊರೊನಾವೈರಸ್ (Coronavirus) ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಸಚಿವರು ಪ್ರಕರಣಗಳ ಬಗ್ಗೆ ಕಣ್ಗಾವಲು ಮತ್ತು ಜನರೊಂದಿಗೆ ಸಂವಹನವನ್ನು ಹೆಚ್ಚಿಸಲು ಅವರು ಕೇಳಿಕೊಂಡರು. ಪರಸ್ಪರ ನಿಕಟವಾಗಿ ಕೆಲಸ ಮಾಡುವ ಮೂಲಕ ‘ಸಂಪೂರ್ಣ ಸರ್ಕಾರ’ ವಿಧಾನದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಸಮಯ ಇದು. ನಾವು ಜಾಗರೂಕರಾಗಿರಬೇಕು, ಆದರೆ ಭಯಪಡುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು JN.1 ಕೊರೊನಾವೈರಸ್ ತಳಿಯನ್ನು ಅನ್ನು “ಆಸಕ್ತಿಯ ರೂಪಾಂತರ” ಎಂದು ವರ್ಗೀಕರಿಸಿದ ನಂತರ ಪ್ರಕರಣಗಳ ಉಲ್ಬಣದ ನಡುವೆ ಈ ಸಭೆ ಕರೆಯಲಾಗಿದೆ. ಭಾರತದಲ್ಲಿ, ಕೇರಳ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ. ಬುಧವಾರ, ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 292 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ ಮೂರು ಜನರು ಸಾವನ್ನಪ್ಪಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 2,041 ಕ್ಕೆ ಏರಿದೆ. ಮಂಗಳವಾರ ಬೆಳಗ್ಗೆ 8 ಗಂಟೆಯವರೆಗೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ, ಭಾರತದಲ್ಲಿ ಒಟ್ಟು 341 ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ.


ಪ್ರಕರಣಗಳು ಏರಿಕೆಯಾಗುತ್ತಿರುವಾಗ, ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ವೈರಸ್ ಸೋಂಕನ್ನು ನಿಭಾಯಿಸಲು ಕೇರಳ ಸಿದ್ಧವಾಗಿರುವುದರಿಂದ ಕೇರಳದಲ್ಲಿ ಚಿಂತಿಸಬೇಕಾಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಹೊಸ ಕೋವಿಡ್ ತಳಿ ಬಗ್ಗೆ ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ: JN.1 ಕುರಿತು ನೀವು ತಿಳಿದುಕೊಳ್ಳಬೇಕಾದದ್ದು

ಕೋವಿಡ್ ರೋಗಿಗಳಿಗೆ ವಿಶೇಷ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲು ಮತ್ತು ಆಸ್ಪತ್ರೆಗಳಲ್ಲಿ ಕೊಠಡಿಗಳು, ಆಮ್ಲಜನಕ ಬೆಂಬಲಿತ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಬುಧವಾರದ ಸಭೆಯಲ್ಲಿ, ಮಾಂಡವಿಯಾ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಚಳಿಗಾಲದ ಅವಧಿಯಲ್ಲಿ ಮತ್ತು ಮುಂಬರುವ ಹಬ್ಬದ ಋತುವಿನಲ್ಲಿ ಶೀತ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ತಡೆಗಟ್ಟುವ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಒತ್ತಾಯಿಸಿದರು.

ದೇಶದಲ್ಲಿ ಸುಮಾರು 2,300 ಕೊವಿಡ್ ಸಕ್ರಿಯ ಪ್ರಕರಣಗಳಿವೆ. ಕೊವಿಡ್​ ರೂಪಾಂತರ ಜೆಎನ್​​.1ನಿಂದ ಸೋಂಕು ಏರಿಕೆಯಾಗಿದೆ
ಸೋಂಕಿನ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು  ನೀತಿ ಆಯೋಗದ ಸದಸ್ಯ ವಿ.ಕೆ‌.ಪೌಲ್ ಹೇಳಿದ್ದಾರೆ. ಕೇರಳ, ತಮಿಳುನಾಡು, ಗೋವಾ, ಕರ್ನಾಟಕದಲ್ಲಿ ಕೊವಿಡ್​​​​ ಪ್ರಕರಣಗಳಿವೆ. ದೇಶದ ವಿವಿಧೆಡೆ 2 ವಾರಗಳಲ್ಲಿ 16 ಜನ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Wed, 20 December 23