20 ವರ್ಷದಿಂದ ಇಂಥ ಅವಮಾನ ಎದುರಿಸುತ್ತಾ ಬಂದಿದ್ದೇನೆ: ಉಪರಾಷ್ಟ್ರಪತಿಗೆ ಕರೆ ಮಾಡಿ ಸಮಾಧಾನ ಹೇಳಿದ ಪ್ರಧಾನಿ ಮೋದಿ

PM Narendra Modi Dials Jagdeep Dhankhar: 20 ವರ್ಷದಿಂದ ಇಂಥ ಅವಮಾನ ಎದುರಿಸುತ್ತಾ ಬಂದಿದ್ದೇನೆ. ಈಗಲೂ ಅವಮಾನಗಳಾಗುತ್ತಿವೆ ಎಂದು ಉಪರಾಷ್ಟ್ರಪತಿ ಬಳಿ ಪ್ರಧಾನಿ ಹೇಳಿಕೊಂಡಿದ್ದಾರೆ. ಟಿಎಂಸಿ ಸಂಸದರೊಬ್ಬರು ಸಂಸತ್ ಭವನದಲ್ಲಿ ಉಪರಾಷ್ಟ್ರಪತಿಗಳನ್ನು ವೈಯಕ್ತಿಕವಾಗಿ ಗುರಿ ಮಾಡಿ ಅಣಕು ಪ್ರದರ್ಶನ ಮಾಡಿದ್ದರು. ರಾಹುಲ್ ಗಾಂಧಿ ಆ ದೃಶ್ಯ ಚಿತ್ರೀಕರಿಸಿದ್ದರು. ಇಂತಹ ಅವಮಾನಗಳು ತನ್ನನ್ನು ದೃತಿಗೆಡಿಸುವುದಿಲ್ಲ, ತಾನು ವಿಚಲಿತಗೊಳ್ಳುವುದಿಲ್ಲ ಎಂದು ಜಗದೀಪ್ ಧನಖರ್ ಅವರು ಪ್ರಧಾನಿಗೆ ಹೇಳಿದ್ದಾರೆ.

20 ವರ್ಷದಿಂದ ಇಂಥ ಅವಮಾನ ಎದುರಿಸುತ್ತಾ ಬಂದಿದ್ದೇನೆ: ಉಪರಾಷ್ಟ್ರಪತಿಗೆ ಕರೆ ಮಾಡಿ ಸಮಾಧಾನ ಹೇಳಿದ ಪ್ರಧಾನಿ ಮೋದಿ
ಜಗದೀಪ್ ಧನಖರ್, ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 20, 2023 | 11:30 AM

ನವದೆಹಲಿ, ಡಿಸೆಂಬರ್ 20: ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರೊಬ್ಬರು ತಮ್ಮನ್ನು ಅಣುಕು ಮಾಡಿದ್ದು ಮತ್ತು ಅದನ್ನು ರಾಹುಲ್ ಗಾಂಧಿ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದು, ಈ ದೃಶ್ಯಗಳು ರಾಜ್ಯಸಭಾ ಅಧ್ಯಕ್ಷ ಹಾಗು ಉಪರಾಷ್ಟ್ರಪತಿ ಜಗದೀಪ್ ಧನಖರ್ ಅವರನ್ನು (Jagdeep Dhankhar) ಬೇಸರಗೊಳಿಸಿವೆ. ಆ ಘಟನೆಗಳು ತಮ್ಮ ಮೇಲೆ ನಡೆದ ವೈಯಕ್ತಿಕ ದಾಳಿ ಎಂದು ವ್ಯಾಕುಲಗೊಂಡಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಜಗದೀಪ್ ಧನಖರ್​ಗೆ ಕರೆ ಮಾಡಿ ಸಮಾಧಾನ ಹೇಳುವ ಕೆಲಸ ಮಾಡಿದ್ದಾರೆ. ಈ ವಿಚಾರವನ್ನು ಉಪರಾಷ್ಟ್ರಪತಿಗಳೇ ಖುದ್ದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಕರೆ ಮಾಡಿ, ನಿನ್ನೆ ಪವಿತ್ರ ಸಂಸತ್ ಭವನದಲ್ಲಿ ಕೆಲ ಸಂಸದರು ಮಾಡಿದ ಅಣುಕು ಕೆಲಸಗಳಿಂದ (mimicry) ಬಹಳ ನೋವಾಯಿತು ಎಂದು ಸಮಾಧಾನ ಹೇಳಿದ್ದಾರೆ’ ಎಂದು ಜಗದೀಪ್ ಧನಖರ್ ಬರೆದಿದ್ದಾರೆ.

‘…ಇಪತ್ತು ವರ್ಷಗಳಿಂದ ತಾನು ಇಂಥ ಅವಮಾನಗಳನ್ನು ಎದುರಿಸುತ್ತಾ ಬಂದಿರುವುದಾಗಿ ಅವರು ನನಗೆ ತಿಳಿಸಿದರು. ಆದರೆ, ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಹುದ್ದೆಗೆ ಇಂಥ ಅಪಮಾನ ಆಗುವುದು, ಅದರಲ್ಲೂ ಸಂಸತ್ತಿನಲ್ಲೇ ಆ ಘಟನೆ ಆಗುವುದು ನಿಜಕ್ಕೂ ದುರದೃಷ್ಟಕರ…’ ಎಂದು ಜಗದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿದ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿಪಕ್ಷ ಸಂಸದರ ಪ್ರತಿಭಟನೆ ವೇಳೆ ಜಗದೀಪ್ ಧನ್ಖರ್​​ನ್ನು ಅನುಕರಣೆ ಮಾಡಿದ ಟಿಎಂಸಿ ಎಂಪಿ

‘… ಪ್ರಧಾನಿಗಳೇ, ಕೆಲ ಜನರ ಈ ವರ್ತನೆಗಳು ನನ್ನನ್ನು ಕರ್ತವ್ಯ ಪಾಲನೆಯಿಂದ ವಿಮುಖಗೊಳಿಸಲು ಸಾಧ್ಯವಿಲ್ಲ. ನಮ್ಮ ಸಂವಿಧಾನದ ತತ್ವ ಪಾಲಿಸುವುದನ್ನು ತಡೆಯಲು ಸಾಧ್ಯ ಇಲ್ಲ. ಯಾವ ಅವಮಾನವೂ ನನ್ನನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ,’ ಎಂದು ರಾಜ್ಯಸಭಾ ಛೇರ್ಮನ್ ಕೂಡ ಆದ ಅವರು ಬರೆದಿದ್ದಾರೆ.

ರಾಷ್ಟ್ರಪತಿಗಳೂ ಬೇಸರ

ಇದೇ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಉಪರಾಷ್ಟ್ರಪತಿಗೆ ಅವಮಾನವಾದ ಘಟನೆ ಬಗ್ಗೆ ವಿಷಾದಿಸಿ ಟ್ವೀಟ್ ಮಾಡಿದ್ದಾರೆ. ಜನಪ್ರತಿನಿಧಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ ಘನತೆಗೆ ಕುಂದು ತರುವಂತೆ ಅಭಿವ್ಯಕ್ತತೆ ಇರಬಾರದು ಎಂದು ವಿಪಕ್ಷಗಳಿಗೆ ತಿಳಿಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಹೊಸ ಕ್ರಿಮಿನಲ್ ಕಾನೂನು ವಿಧೇಯಕ ಮಂಡಿಸಿದ ಗೃಹ ಸಚಿವ ಅಮಿತ್ ಶಾ

ಏನಿದು ಘಟನೆ?

ನೂತನ ಸಂಸತ್​ನಲ್ಲಿ ಆದ ಭದ್ರತಾ ಲೋಪ ಘಟನೆಯನ್ನು ಖಂಡಿಸಿ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಹಲವು ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಈ ಕ್ರಮವನ್ನು ಆಕ್ಷೇಪಿಸಿ ಅಮಾನತುಗೊಂಡ ಸಂಸದರು ಸಂಸತ್ ಭವನದೊಳಗೆಯೇ ಪ್ರತಿಭಟನೆ ಮಾಡಿದ್ದರು. ಈ ವೇಳೆ, ಪಶ್ಚಿಮ ಬಂಗಾಳದ ಸೇರಾಮ್​ಪೂರ್ ಕ್ಷೇತ್ರದ ಸಂಸದ ಕಲ್ಯಾಣ್ ಬ್ಯಾನರ್ಜಿ ನಿನ್ನೆ (ಡಿ. 19) ಸಂಸತ್​ನಲ್ಲಿ ಉಪರಾಷ್ಟ್ರಪತಿ ಸೇರಿದಂತೆ ಕೆಲವರನ್ನು ಕುಚೋದ್ಯ ಮಾಡಿದ್ದರು. ರಾಹುಲ್ ಗಾಂಧಿ ಈ ಮಿಮಿಕ್ರಿ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಿಸುತ್ತಿದ್ದರು.

ಈ ಘಟನೆ ಬಗ್ಗೆ ಆಡಳಿತ ಪಕ್ಷದ ಸದಸ್ಯರು ತೀವ್ರ ಟೀಕೆ ಮಾಡುತ್ತಿದ್ದಾರೆ. ಈ ಘಟನೆಯನ್ನು ಇಟ್ಟುಕೊಂಡು ವಿಪಕ್ಷಗಳ ವಿರುದ್ಧ ಸರ್ಕಾರ ಆಕ್ರಮಣ ಮಾಡತೊಡಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:15 am, Wed, 20 December 23