ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪ್ರಧಾನಿ ಮೋದಿ ಮಾತುಕತೆ: ಯುದ್ಧ ಸೇರಿ ಹಲವು ವಿಚಾರ ಚರ್ಚೆ
ದೂರವಾಣಿ ಮಾತುಕತೆ ವೇಳೆ, ಕೆಂಪು ಸಮುದ್ರದಲ್ಲಿ ಜಾಗತಿಕ ಹಡಗು ಸಾಗಣೆಗೆ ಇರಾನ್ ಬೆಂಬಲಿತ ಹೌತಿಗಳು ಒಡ್ಡುತ್ತಿರುವ ಬೆದರಿಕೆಗಳ ಬಗ್ಗೆ ನೆತನ್ಯಾಹು ಅವರು ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿದ್ದಾರೆ. ಇಸ್ರೇಲ್ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿವರಿಸಿದ್ದಾರೆ.
ನವದೆಹಲಿ, ಡಿಸೆಂಬರ್ 20: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಯುದ್ಧ ಪೀಡಿತ ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದ ಕೆಲವೇ ದಿನಗಳ ಬಳಿಕ ಈ ಮಾತುಕತೆ ನಡೆದಿದೆ. ನೆತನ್ಯಾಹು ಅವರೊಂದಿಗಿನ ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಇಸ್ರೇಲ್-ಹಮಾಸ್ ಯುದ್ಧ ಮತ್ತು ಸಮುದ್ರ ಸಂಚಾರದ ಸುರಕ್ಷತೆ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
ಇಸ್ರೇಲ್ ಪಡೆಗಳು ಮತ್ತು ಹಮಾಸ್ ಉಗ್ರಗಾಮಿಗಳ ನಡುವೆ ನಡೆಯುತ್ತಿರುವ ಯುದ್ಧದ ಇತ್ತೀಚಿನ ಬೆಳವಣಿಗೆಗಳ ಕುರಿತು ನೆತನ್ಯಾಹು ಅವರು ದೂರವಾಣಿ ಕರೆಯಲ್ಲಿ ಪ್ರಧಾನಿ ಮೋದಿಯವರಿಗೆ ವಿವರಿಸಿದರು. ಏತನ್ಮಧ್ಯೆ, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಯ ಪರವಾಗಿ ಭಾರತದ ನಿಲುವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ಸಂತ್ರಸ್ತರಿಗೆ ಮಾನವೀಯ ನೆರವು ದೊರೆಯಲೇಬೇಕು ಎಂದು ಭಾರತದ ಪ್ರಧಾನಿ ಪುನರುಚ್ಚರಿಸಿದರು.
ಕೆಂಪು ಸಮುದ್ರದಲ್ಲಿ ಜಾಗತಿಕ ಹಡಗು ಸಾಗಣೆಗೆ ಇರಾನ್ ಬೆಂಬಲಿತ ಹೌತಿಗಳು ಒಡ್ಡುತ್ತಿರುವ ಬೆದರಿಕೆಗಳ ಬಗ್ಗೆ ನೆತನ್ಯಾಹು ಅವರು ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿದ್ದಾರೆ. ಇಸ್ರೇಲ್ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿವರಿಸಿದ್ದಾರೆ. ಹಮಾಸ್ ವಿರುದ್ಧದ ಹೋರಾಟದಲ್ಲಿ ಬೆಂಬಲಿಸಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಎಂದು ‘ಇಸ್ರೇಲ್ ಟೈಮ್ಸ್’ ವರದಿ ಉಲ್ಲೇಖಿಸಿದೆ.
Had a productive exchange of views with PM @netanyahu on the ongoing Israel-Hamas conflict, including shared concerns on the safety of maritime traffic. Highlighted India’s consistent stand in favour of early restoration of peace & stability in the region with continued…
— Narendra Modi (@narendramodi) December 19, 2023
ಇದನ್ನೂ ಓದಿ: ಗಾಜಾ ಜಾಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: 90 ಮಂದಿ ಸಾವು
ಇಸ್ರೇಲ್ ಪ್ರಧಾನ ಮಂತ್ರಿ ನೆತನ್ಯಾಹು ಅವರೊಂದಿಗೆ ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ, ಕಡಲ ಸಂಚಾರದ ಸುರಕ್ಷತೆಯ ಕಳವಳಗಳು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಯುದ್ಧ ಸಂತ್ರಸ್ತರಿಗಾಗಿ ನಿರಂತರ ಮಾನವೀಯ ನೆರವಿನೊಂದಿಗೆ ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಯ ಪರವಾಗಿ ಭಾರತದ ಸ್ಥಿರ ನಿಲುವನ್ನು ಒತ್ತಿ ಹೇಳಲಾಗಿದೆ ಎಂದು ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಸಂದೇಶ ಪ್ರಕಟಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:18 am, Wed, 20 December 23