ಗಾಜಾ ಜಾಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: 90 ಮಂದಿ ಸಾವು
ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ ಜಜೀರಾ ಪ್ರಕಾರ, ಹೆಚ್ಚಿನ ದೇಹಗಳು ಅವಶೇಷಗಳ ಒಳಗೆ ಸಿಲುಕಿಕೊಂಡಿರಬಹುದು ಎನ್ನಲಾಗಿದೆ. ಮಕ್ಕಳು ಸೇರಿದಂತೆ ಗಾಯಗೊಂಡ ಅನೇಕ ಜನರನ್ನು ಹತ್ತಿರದ ವೈದ್ಯಕೀಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ನವದೆಹಲಿ, ಡಿಸೆಂಬರ್ 18: ಉತ್ತರ ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ (Isrel) ಪಡೆಗಳು ನಡೆಸಿದ ಇತ್ತೀಚಿನ ದಾಳಿಯಲ್ಲಿ ಭಾನುವಾರ ಕನಿಷ್ಠ 90 ಪ್ಯಾಲೆಸ್ತೀನಿಯರು (Palestine) ಸಾವನ್ನಪ್ಪಿದ್ದಾರೆ. 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಜಬಾಲಿಯಾ ಪಟ್ಟಣದಲ್ಲಿರುವ ಅಲ್-ಬರ್ಶ್ ಮತ್ತು ಅಲ್ವಾನ್ಗಳಿಗೆ ಸೇರಿದ ವಸತಿ ಸಂಕೀರ್ಣಗಳ ಮೇಲೆ ದಾಳಿ ನಡೆದಿತ್ತು ಎಂದು ಪ್ಯಾಲೆಸ್ತೀನ್ ಸುದ್ದಿಸಂಸ್ಥೆ ವಾಫಾ ತಿಳಿಸಿದೆ.
ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ ಜಜೀರಾ ಪ್ರಕಾರ, ಹೆಚ್ಚಿನ ದೇಹಗಳು ಅವಶೇಷಗಳ ಒಳಗೆ ಸಿಲುಕಿಕೊಂಡಿರಬಹುದು ಎನ್ನಲಾಗಿದೆ. ಮಕ್ಕಳು ಸೇರಿದಂತೆ ಗಾಯಗೊಂಡ ಅನೇಕ ಜನರನ್ನು ಹತ್ತಿರದ ವೈದ್ಯಕೀಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ವೈದ್ಯಕೀಯ ಕೇಂದ್ರಗಳು ಈಗಾಗಲೇ ರೋಗಿಗಳಿಂದ ತುಂಬಿ ತುಳುಕುತ್ತಿವೆ.
ಇಸ್ರೇಲ್ ದಾಳಿಯಲ್ಲಿ ಮೃತಪಟ್ಟವರಲ್ಲಿ ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ ಗುಂಪಿನ ವಕ್ತಾರ ದಾವೂದ್ ಶೆಹಾಬ್ ಅವರ ಪುತ್ರನೂ ಸೇರಿದ್ದಾನೆ ಎಂದು ಗುಂಪಿನ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಈ ಮಧ್ಯೆ, ಗಾಜಾದ ಮತ್ತೊಂದು ಕಡೆಯಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ನಾಲ್ಕು ಜನ ಮೃತಪಟ್ಟಿದ್ದಾರೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಹಠಾತ್ ದಾಳಿಯ ನಂತರ ಇಲ್ಲಿಯವರೆಗೆ ನಡೆದ ಸಂಘರ್ಷದಲ್ಲಿ 19,000 ಪ್ಯಾಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಸ್ಪತ್ರೆಗೆ ದಾಖಲು; ವಿಷಪ್ರಾಶನದ ಶಂಕೆ
ಏತನ್ಮಧ್ಯೆ, ದಕ್ಷಿಣ ಗಾಜಾದಲ್ಲಿ ಖಾನ್ ಯೂನಿಸ್ ಮತ್ತು ರಫಾ ನಗರಗಳನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ ಪಡೆಗಳು ಫಿರಂಗಿ ಶೆಲ್ ದಾಳಿಯನ್ನು ತೀವ್ರಗೊಳಿಸಿವೆ. ಅಲ್ಲಿ ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯಾದವರು ಆಶ್ರಯ ಪಡೆದಿದ್ದಾರೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 1.9 ಮಿಲಿಯನ್ ಜನರು, ಗಾಜಾದ ಜನಸಂಖ್ಯೆಯ ಸುಮಾರು 80 ಪ್ರತಿಶತದಷ್ಟು ಜನರು ಯುದ್ಧದಿಂದಾಗಿ ಸ್ಥಳಾಂತರಗೊಂಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ