ವಿಪಕ್ಷ ಸಂಸದರ ಪ್ರತಿಭಟನೆ ವೇಳೆ ಜಗದೀಪ್ ಧನ್ಖರ್​​ನ್ನು ಅನುಕರಣೆ ಮಾಡಿದ ಟಿಎಂಸಿ ಎಂಪಿ

Trinamool MP Kalyan Banerjee: ಸಂಸತ್ತಿನಲ್ಲಿ ಭಾರೀ ಭದ್ರತಾ ಲೋಪ ನಂತರ ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ  141 ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ನೂತನ ಸಂಸತ್ ಭವನದ ಮಕರ ದ್ವಾರದಲ್ಲಿ ಸಂಸದರು ಅಣಕು ಸದನದ ಕಲಾಪ ನಡೆಸಿದ್ದು ಈ ವೇಳೆ ಕಲ್ಯಾಣ್ ಬ್ಯಾನರ್ಜಿ, ರಾಜ್ಯಸಭಾ ಸಭಾಪತಿ ಧನ್ಖರ್ ಅವರನ್ನು ಅಣಕ ಮಾಡಿದ್ದಾರೆ.

ವಿಪಕ್ಷ ಸಂಸದರ ಪ್ರತಿಭಟನೆ ವೇಳೆ ಜಗದೀಪ್ ಧನ್ಖರ್​​ನ್ನು ಅನುಕರಣೆ ಮಾಡಿದ ಟಿಎಂಸಿ ಎಂಪಿ
ಕಲ್ಯಾಣ್ ಬ್ಯಾನರ್ಜಿ
Follow us
ರಶ್ಮಿ ಕಲ್ಲಕಟ್ಟ
|

Updated on: Dec 19, 2023 | 3:02 PM

ದೆಹಲಿ ಡಿಸೆಂಬರ್ 19: ಸಂಸತ್​​ನಿಂದ ಸಂಸದರನ್ನು ಅಮಾನತುಗೊಳಿಸಿದ ಕ್ರಮ ಖಂಡಿಸಿ ಮಂಗಳವಾರ ವಿರೋಧ ಪಕ್ಷಗಳು (Opposition MPs Protest) ನಡೆಸಿದ ಪ್ರತಿಭಟನೆಯಲ್ಲಿ ತೃಣಮೂಲ ಕಾಂಗ್ರೆಸ್‌ನ (TMC)ಅಮಾನತುಗೊಂಡ ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಅವರು ರಾಜ್ಯಸಭಾ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ (Jagdeep Dhankhar) ಅವರನ್ನು ಅನುಕರಣೆ ಮಾಡಿದ್ದಾರೆ. ಕಲ್ಯಾಣ್ ಬ್ಯಾನರ್ಜಿ ಈ ರೀತಿ ಮಾಡುವಾಗ ಜತೆಗಿದ್ದ ಸಂಸದರು ನಗುತ್ತಿರುವುದು ವಿಡಿಯೊದಲ್ಲಿದೆ. ನನ್ನ ಬೆನ್ನುಮೂಳೆಯು ತುಂಬಾ ನೇರವಾಗಿದೆ, ನಾನು ತುಂಬಾ ಎತ್ತರವಾಗಿದ್ದೇನೆ ಎಂದು ಕಲ್ಯಾಣ್ ಬ್ಯಾನರ್ಜಿ ಹೇಳುತ್ತಿರುವುದು ವಿಡಿಯೊದಲ್ಲಿ ಕೇಳಿಸುತ್ತದೆ.

ಸಂಸತ್ತಿನಲ್ಲಿ ಭಾರೀ ಭದ್ರತಾ ಲೋಪ ನಂತರ ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ  141 ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ನೂತನ ಸಂಸತ್ ಭವನದ ಮಕರ ದ್ವಾರದಲ್ಲಿ ಸಂಸದರು ಅಣಕು ಸದನದ ಕಲಾಪ ನಡೆಸಿದರು.  ಜಗದೀಪ್ ಧನ್ಖರ್ ಈ ಘಟನೆಯನ್ನು “ಅಸಂಬದ್ಧ ಮತ್ತು ಸ್ವೀಕಾರಾರ್ಹವಲ್ಲ” ಎಂದಿದ್ದಾರೆ.

ಸದನವನ್ನು ಮುಂದೂಡಿದ ನಂತರ ಮಧ್ಯಾಹ್ನ 12 ಗಂಟೆಗೆ ಮತ್ತೆ ಸೇರುತ್ತಿದ್ದಂತೆ, ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ ಧನ್ಖರ್, “ರಾಷ್ಟ್ರಪತಿ  ಕಚೇರಿ, ರಾಜ್ಯಸಭೆ ಮತ್ತು ಸ್ಪೀಕರ್ ಕಚೇರಿ ತುಂಬಾ ವಿಭಿನ್ನವಾಗಿದೆ. ರಾಜಕೀಯ ಪಕ್ಷಗಳು ವಿರುದ್ಧ ನಿಲುವು ಹೊಂದಿರುತ್ತವೆ. ಅವುಗಳು ವಾಕ್ಸಮರ ಮಾಡಿಕೊಳ್ಳುತ್ತವೆ, ಆದರೆ ನಿಮ್ಮ ಪಕ್ಷದ ಹಿರಿಯ ನಾಯಕರೊಬ್ಬರು, ಇನ್ನೊಂದು ಪಕ್ಷದ ಇನ್ನೊಬ್ಬ ಸದಸ್ಯರ ವಿಡಿಯೊ ಚಿತ್ರೀಕರಿಸುತ್ತಿರುವುದನ್ನು ಕಲ್ಪಿಸಿಕೊಳ್ಳಿ. ಸಭಾಪತಿಯವರ ಮಿಮಿಕ್ರಿ, ಸ್ಪೀಕರ್ ಮಿಮಿಕ್ರಿ, ಎಷ್ಟು ಹಾಸ್ಯಾಸ್ಪದ, ಎಷ್ಟು ನಾಚಿಕೆಗೇಡಿನ ಸಂಗತಿ. ಇದು ಸ್ವೀಕಾರಾರ್ಹವಲ್ಲ ಎಂದು  ಹೇಳಿದ್ದಾರೆ.

ಬಿಜೆಪಿ ವಿಡಿಯೊವನ್ನು ಹಂಚಿಕೊಂಡಿದ್ದು, ಉಪರಾಷ್ಟ್ರಪತಿಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಬ್ಯಾನರ್ಜಿ ಮತ್ತು ರಾಹುಲ್ ಗಾಂಧಿ ಇಬ್ಬರನ್ನೂ ಟೀಕಿಸಿದೆ. ಪ್ರತಿಪಕ್ಷದ ಸಂಸದರನ್ನು ಏಕೆ ಅಮಾನತುಗೊಳಿಸಲಾಗಿದೆ ಎಂದು ದೇಶವು ಆಶ್ಚರ್ಯ ಪಡುತ್ತಿದ್ದರೆ, ಕಾರಣ ಇಲ್ಲಿದೆ. ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಗೌರವಾನ್ವಿತ ಉಪರಾಷ್ಟ್ರಪತಿಯನ್ನು ಲೇವಡಿ ಮಾಡಿದರು, ಆದರೆ ರಾಹುಲ್ ಗಾಂಧಿ ಅವರನ್ನು ನಗುತ್ತಾ ಹುರಿದುಂಬಿಸಿದರು. ಅವರು ಸದನದಲ್ಲಿ ಎಷ್ಟು ಅಜಾಗರೂಕ ಮತ್ತು ಉಲ್ಲಂಘನೆ ಮಾಡಿದ್ದಾರೆಂದು ಯಾರಾದರೂ ಊಹಿಸಬಹುದು ಎಂದು ವಿಡಿಯೊದ ಜತೆಗಿನ ಬರಹದಲ್ಲಿ ಹೇಳಲಾಗಿದೆ.

ಭದ್ರತಾ ಲೋಪದ ಬಗ್ಗೆ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷದ ಸಂಸದರು ಒತ್ತಾಯಿಸಿದ್ದು ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕೆ ವಿಪಕ್ಷ ಸಂಸದರನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ:49 ಸದಸ್ಯರು ಅಮಾನತು; ಇಲ್ಲಿವರೆಗೆ ಸಂಸತ್​​ನಿಂದ ಸಸ್ಪೆಂಡ್ ಆಗಿದ್ದು ವಿಪಕ್ಷದ 141 ಸಂಸದರು

ಇಂದು (ಮಂಗಳವಾರ) 49 ಸದಸ್ಯರನ್ನು ಅಮಾನತು ಮಾಡಲಾಗಿದ್ದು ಈ ಅಧಿವೇಶನದಲ್ಲಿ ಅಮಾನತುಗೊಂಡ ಒಟ್ಟು ಸಂಸದರ ಸಂಖ್ಯೆ 141ಕ್ಕೇರಿದೆ. ನ್ಯಾಶನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕರಾದ ಶಶಿ ತರೂರ್  ಮತ್ತು ಕಾರ್ತಿ ಚಿದಂಬರಂ, ಎನ್‌ಸಿಪಿಯ ಸುಪ್ರಿಯಾ ಸುಳೆ ಮತ್ತು ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಸೇರಿದಂತೆ ವಿಪಕ್ಷ ಎಂಪಿಗಳನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಇಂದು  ಅಮಾನತು ಮಾಡಿದ್ದಾರೆ.

ಕಳೆದ ವಾರ ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪದ ಬಗ್ಗೆ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಬ್ಬರು ಒಳನುಸುಳುಕೋರರು ಲೋಕಸಭೆಯ ಸಭಾಂಗಣಕ್ಕೆ ಪ್ರವೇಶಿಸಿ, ಡಬ್ಬಿಗಳಿಂದ ಬಣ್ಣದ ಹೊಗೆಯನ್ನು ಬಿಡುಗಡೆ ಮಾಡಿದ ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಮಾತನಾಡಬೇಕೆಂದು ವಿಪಕ್ಷ ಸಂಸದರು ಒತ್ತಾಯಿಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ