ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ: ವಿಪಕ್ಷ ಸಂಸದರ ಅಮಾನತು ಕುರಿತು ಮಲ್ಲಿಕಾರ್ಜುನ ಖರ್ಗೆ
ಇದು ಸಂಸತ್ತಿಗೆ ಮಾಡಿದ ಅವಮಾನ, ನಮ್ಮನ್ನು ಹೆದರಿಸಲು ಸಂಸದರನ್ನು ಅಮಾನತುಗೊಳಿಸುತ್ತಿದ್ದಾರೆ. ಹಲವಾರು ಸಂಸದರು ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಕಾಣಿಸಿಕೊಳ್ಳಲು ಬಯಸಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿ ಡಿಸೆಂಬರ್ 19: ಉಭಯ ಸದನಗಳಿಂದ ಹಲವಾರು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿರುವುದನ್ನು (Mps Suspended) ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನದ (Parliament Winter Session) ಉಳಿದ ಅವಧಿಗೆ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ವಿರೋಧ ಪಕ್ಷಗಳ ಸದಸ್ಯರು ಮಂಗಳವಾರ ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ನೇತೃತ್ವದಲ್ಲಿ ಪ್ರತಿಭಟನಾಕಾರರು ಪ್ಲೇಕಾರ್ಡ್‌ಗಳನ್ನು ಹಿಡಿದು, “ಪ್ರಜಾಪ್ರಭುತ್ವ ದಿಗ್ಭಂಧನದಲ್ಲಿದೆ, ನಾವು ಪಂಜರದಲ್ಲಿ ಸಿಲುಕುವುದಿಲ್ಲ” ಮತ್ತು “ಪ್ರಧಾನಿ ಮತ್ತು ಗೃಹ ಸಚಿವರು ಏಕೆ ಮೌನವಾಗಿದ್ದಾರೆ? ಎಂದು ಘೋಷಣೆ ಕೂಗಿದ್ದಾರೆ.
लोकतंत्र की हत्या और संसद की मर्यादा को भंग करने के ख़िलाफ़, गाँधी प्रतिमा पर हमारा शांतिपूर्ण प्रदर्शन। pic.twitter.com/CxkB2WI4Bo
— Mallikarjun Kharge (@kharge) December 19, 2023
ಈ ನಡುವೆ ಎಎನ್‌ಐ ಜೊತೆ ಮಾತನಾಡಿದ ಖರ್ಗೆ, ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ಸಂಸತ್ತಿಗೆ ಮಾಡಿದ ಅವಮಾನ, ನಮ್ಮನ್ನು ಹೆದರಿಸಲು ಸಂಸದರನ್ನು ಅಮಾನತುಗೊಳಿಸುತ್ತಿದ್ದಾರೆ. ಹಲವಾರು ಸಂಸದರು ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಕಾಣಿಸಿಕೊಳ್ಳಲು ಬಯಸಲಿಲ್ಲ. ಅವರು ಸಂಸತ್ತಿನ ನಡೆಯುತ್ತಿರುವ ಅಧಿವೇಶನದ ನಡುವೆ ವಾರಣಾಸಿ ಮತ್ತು ಅಹಮದಾಬಾದ್‌ನಲ್ಲಿ ಉಪನ್ಯಾಸಗಳನ್ನು ನೀಡುತ್ತಿದ್ದಾರೆ ಎಂದಿದ್ದಾರೆ.
ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್, “ಸಂಸದರನ್ನು ಅಮಾನತುಗೊಳಿಸುತ್ತಿರುವ ರೀತಿ, ಅವರು (ಆಡಳಿತ ಪಕ್ಷ) ವಿರೋಧ ಪಕ್ಷವನ್ನು ಅನಗತ್ಯ ಸಂಗತಿ ಎಂಬಂತೆ ನೋಡುತ್ತಿದ್ದಾರೆಂದು ತೋರುತ್ತದೆ” ಎಂದು ಹೇಳಿದರು. ಮಂಗಳವಾರ ಅಮಾನತುಗೊಂಡ ವಿರೋಧ ಪಕ್ಷದ ಸಂಸದರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಇದನ್ನೂ ಓದಿ:49 ಸದಸ್ಯರು ಅಮಾನತು; ಇಲ್ಲಿವರೆಗೆ ಸಂಸತ್ನಿಂದ ಸಸ್ಪೆಂಡ್ ಆಗಿದ್ದು ವಿಪಕ್ಷದ 141 ಸಂಸದರು
ಪ್ರಜಾಪ್ರಭುತ್ವದ ಪರಿಕಲ್ಪನೆಯ ಬಗ್ಗೆ ಬಿಜೆಪಿಗೆ ಸಂಪೂರ್ಣ ಅರಿವಿಲ್ಲ ಎಂದು ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರತಿನಿಧಿಸುವ ಸಂಘಟನೆಗೆ (ಬಿಜೆಪಿ) ಪ್ರಜಾಪ್ರಭುತ್ವದ ಪರಿಕಲ್ಪನೆಯ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ಇದು ಸಂಸದೀಯ ಪ್ರಜಾಪ್ರಭುತ್ವವನ್ನು ನಿರ್ಮೂಲನೆ ಮಾಡಲು ಪೂರ್ವ ಯೋಜಿತ ದಾಳಿಯಾಗಿದೆ. ಅವರು ಹಿಟ್ಲರ್ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಈ ಹೊಗೆ ಬಾಂಬ್ ‘ಸರಿನ್’ ನಂತಹ ವಿಷಕಾರಿ ಅನಿಲವನ್ನು ಹೊಂದಿತ್ತು, ಇದು ಫಿದಾಯಿನ್ ಆಗಿದ್ದರೆ ಏನು ಮಾಡುತ್ತಿದ್ದರು? ಎಲ್ಲಾ ಸದಸ್ಯರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬಹುದು. ಅವರು ಯಾವಾಗಲೂ ಹೊಸ ಸಂಸತ್ತಿನ ಕಟ್ಟಡವನ್ನು ಅತ್ಯುನ್ನತ ಸುವ್ಯವಸ್ಥೆಯ ಭದ್ರತೆಯನ್ನು ಹೊಂದಬೇಕೆಂದು ಪ್ರತಿಪಾದಿಸುತ್ತಾರೆ, ಆದರೆ ನಾವು ಸಂಪೂರ್ಣವಾಗಿ ವ್ಯತಿರಿಕ್ತ ದೃಶ್ಯಗಳನ್ನು ನೋಡಿದ್ದೇವೆ ಎಂದಿದ್ದಾರೆ.
ಏತನ್ಮಧ್ಯೆ, ಮಂಗಳವಾರದ ಕಲಾಪಗಳು ಪುನರಾರಂಭಗೊಂಡ ಕೆಲವೇ ನಿಮಿಷಗಳಲ್ಲಿ, ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆ ಮತ್ತು ಸಹ ಸದಸ್ಯರ ಬೃಹತ್ ಅಮಾನತುಗಳ ಬಗ್ಗೆ ಪ್ರತಿಪಕ್ಷಗಳ ಸಂಸದರ ಗದ್ದಲದ ನಂತರ ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಮುಂದೂಡಲಾಯಿತು. ನಂತರ ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ. ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಪಕ್ಷಗಳ ಬೇಡಿಕೆಯ ಗದ್ದಲದ ನಂತರ ಲೋಕಸಭೆಯ 95 ಮತ್ತು ರಾಜ್ಯಸಭೆಯ 46 ಒಟ್ಟು 141 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ