ದೆಹಲಿ: ಕೊರೊನಾ ಎದುರಿಸಲು ಸಮರ್ಪಕ ತಯಾರಿ ಮಾಡಿಕೊಳ್ಳದಿದ್ದರೆ ಡಿಸೆಂಬರ್ ಅತ್ಯಂತ ಭಯಾನಕವಾಗಿರಲಿದೆ ಎಂದು ಕೆಲ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಗಂಭೀರ ಎಚ್ಚರಿಕೆ ನೀಡಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಎರಡು ದಿನಗಳಲ್ಲಿ ವರದಿ ಸಲ್ಲಿಸಬೇಕೆಂದು ದೆಹಲಿ, ಗುಜರಾತ್, ಮಹಾರಾಷ್ಟ್ರ ಮತ್ತು ಅಸ್ಸಾಂ ರಾಜ್ಯಗಳಿಗೆ ಸೂಚಿಸಿದೆ.
ಕೊರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿದೆ. ಪರಿಸ್ಥಿತಿ ಕೈಮೀರುವ ಮೊದಲು ಇತರ ರಾಜ್ಯಗಳೂ ಎಚ್ಚೆತ್ತುಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸುಭಾಷ್ ರೆಡ್ಡಿ. ಎಂ.ಪಿ. ಶಾ ಅವರಿದ್ದ ನ್ಯಾಯಪೀಠ ದೆಹಲಿಯ ಕೊರೊನಾ ಪರಿಸ್ಥಿತಿ ಕುರಿತು ವಿಚಾರಣೆ ನಡೆಸಿತು. ಈ ವೇಳೆ ಗುಜರಾತ್ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿತು.
ವಿಚಾರಣೆ ವೇಳೆ ಸೋಂಕು ತಡೆಗಟ್ಟಲು ಗೃಹ ಸಚಿವ ಅಮಿತ್ ಶಾ ಕೈಗೊಂಡ ಕ್ರಮಗಳನ್ನು ನ್ಯಾಯಾಲಯಕ್ಕೆ ವಿವರಿಸಿದ ಕೇಂದ್ರ ಸರ್ಕಾರ, ದೆಹಲಿ ಸರ್ಕಾರವು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎನ್ನುವ ಮೂಲಕ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಮೇಲೆ ಉತ್ತರಿಸುವ ಜವಾಬ್ದಾರಿ ಹೊರಿಸಿತ್ತು. ರಾಜಕೀಯ ಸಂಭ್ರಮಾಚರಣೆ, ಮದುವೆಗಳಲ್ಲಿ ಜನಜಂಗುಳಿಗಳನ್ನು ನಿರ್ಬಂಧಿಸದ ಗುಜರಾತ್ ಸರ್ಕಾರದ ನಡೆಯನ್ನು ಸಹ ನ್ಯಾಯಾಲಯ ಪ್ರಶ್ನಿಸಿತು.
Published On - 2:53 pm, Mon, 23 November 20