ಮುಂಗಾರು ಮಳೆಗೆ (monsoon season) ಪ್ರಕೃತಿಯ ವಿಸ್ಮಯಗಳು ನಮ್ಮನ್ನು ಬೆರಗುಗೊಳಿಸುತ್ತಿರುತ್ತವೆ. ಸ್ವಾತಿ ಮುತ್ತಿನಂಥಾ ಮಳೆ ಹನಿಗಳು ಮನಸಿಗೆ ಉಲ್ಲಾಸ ನೀಡುವ ಜತೆಗೆ ಪ್ರಕೃತಿ ರಮಣೀಯ ದೃಶ್ಯಗಳನ್ನು ನೋಡುವ ಅವಕಾಶವನ್ನೂ ನಮಗೆ ಕಲ್ಪಿಸುತ್ತವೆ. ಅಂಥಾ ವಿಸ್ಮಯಗಳಲ್ಲೊಂದು ಮಹಾರಾಷ್ಟ್ರದ (Maharashtra) ನಾನೆಘಾಟ್(Naneghat). ಎರಡು ಬೆಟ್ಟಗಳ ನಡುವಿನಿಂದ ಹರಿಯುತ್ತಿರುವ ಈ ಜಲಪಾತ ಹಿಮ್ಮುಖವಾಗಿದೆ. ಝರಿ ನೀರಿಗೆ ಗಾಳಿಯು ಸಾಥ್ ನೀಡುತ್ತಿದ್ದು ಈ ಹಿಮ್ಮುಖ ಜಲಪಾತದ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಹಿಮ್ಮುಖ ಜಲಪಾತದ ವಿಡಿಯೊ ಟ್ವೀಟ್ ಮಾಡಿರುವ ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ, ಗಾಳಿಯ ವೇಗದ ಪ್ರಮಾಣವು ಗುರುತ್ವಾಕರ್ಷಣೆಯ ಬಲಕ್ಕೆ ಸಮಾನವಾಗಿ ಮತ್ತು ವಿರುದ್ಧವಾಗಿದ್ದಾಗ, ಪಶ್ಚಿಮ ಘಟ್ಟಗಳ ಶ್ರೇಣಿಯ ನಾನೆಘಾಟ್‌ನಲ್ಲಿ ಜಲಪಾತ ಈ ರೀತಿ ಕಾಣುತ್ತದೆ. ಇದು ಮುಂಗಾರಿನ ಸೌಂದರ್ಯ ಎಂದಿದ್ದಾರೆ. ವೈರಲ್ ವಿಡಿಯೊದಲ್ಲಿ ಬೆಟ್ಟಗಳು ಹಸಿರಾಗಿದ್ದು, ಮೇಲೆ ಬಿಳಿ ಮೋಡಗಳು ತೇಲುತ್ತಿರುವುದು ಕಾಣುತ್ತದೆ.
ಈ ವಿಡಿಯೊಗೆ 3.5 ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆ ಸಿಕ್ಕಿದ್ದು 17ಸಾವಿರಕ್ಕಿಂತಲೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೊ ನೋಡಿ ಹಲವರ ಅಚ್ಚರಿ ವ್ಯಕ್ತಪಡಿಸಿದ್ದು, ಪ್ರಕೃತಿ ವಿಸ್ಮಯಕ್ಕೆ ದಂಗಾಗಿದ್ದಾರೆ. ನಾನು ಇಲ್ಲಿಗೆ ಭೇಟಿ ನೀಡಿದ್ದೆ, ಇದು ಭೂಮಿಯಲ್ಲಿನ ಸ್ವರ್ಗ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
When the magnitude of wind speed is equal & opposite to the force of gravity. The water fall at its best during that stage in Naneghat of western ghats range.
Beauty of Monsoons. pic.twitter.com/lkMfR9uS3R— Susanta Nanda IFS (@susantananda3) July 10, 2022
ಈ ವಿಸ್ಮಯಕ್ಕೆ ವೈಜ್ಞಾನಿಕ ಕಾರಣ ನೀಡಿದ ಬಳಕೆದಾರರೊಬ್ಬರು, ನ್ಯೂಟನ್ನ ಮೊದಲ ಚಲನೆಯ ನಿಯಮ ಪ್ರಕಾರ ಒಂದು ವಸ್ತುವಿನ ಮೇಲೆ ಬಲ ಬೀಳದೇ ಇದ್ದರೆ ಆ ವಸ್ತುಅದೇ ಚಲನೆಯ ಸ್ಥಿತಿಯಲ್ಲಿ ಉಳಿಯುತ್ತದೆ ಎಂದು ಹೇಳುತ್ತದೆ. ಗುರುತ್ವಾಕರ್ಷಣೆಯನ್ನು ಅನುಸರಿಸಲು ಈ ನೀರಿನ ನೈಸರ್ಗಿಕ ಪ್ರವೃತ್ತಿಯ ಮೇಲೆ ದೊಡ್ಡಮಟ್ಟದಲ್ಲಿ ಗಾಳಿ ಕಾರ್ಯನಿರ್ವಹಿಸುತ್ತವೆ. ಎರಡು ಶಕ್ತಿಗಳ ಪ್ರಮಾಣವು ಸಮಾನವಾಗಿರುತ್ತದೆ ಮತ್ತು ಅವುಗಳ ದಿಕ್ಕುಗಳು ವಿರುದ್ಧವಾಗಿರುತ್ತವೆ ಎಂದಿದ್ದಾರೆ. ಜಲಪಾತ ಯಾಕೆ ಈ ರೀತಿ ಹಿಮ್ಮುಖವಾಗಿದೆ ಎಂಬುದ ಬಗ್ಗೆ ವಿವರಿಸಲು ಹಲವಾರುಬಳಕೆದಾರರು ಪ್ರಯತ್ನಿಸಿದ್ದಾರೆ.
ಗುರುತ್ವಾಕರ್ಷಣೆ ಮತ್ತು ಗಾಳಿಯ ವೇಗವು ವಿವಿಧ ಆಯಾಮಗಳಲ್ಲಿರುವುದರಿಂದ ಇದನ್ನು ಹೋಲಿಸಲು ಆಗಲ್ಲ. ಇದರ ಬದಲಾಗಿ ಗಾಳಿಯ ಚಲನೆಯು ಕೆಳಗೆ ಬೀಳುವ ನೀರಿನ ಚಲನೆಯ ವೇಗವನ್ನು ನಿಲ್ಲಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಪಶ್ಚಿಮ ಘಟ್ಟದಲ್ಲಿರುವ ಕೊಂಕಣ ಕರಾವಳಿ ಮತ್ತು ಡೆಕ್ಕನ್ ಪ್ರಸ್ಥಭೂಮಿಯಲ್ಲಿರುವ ಜುನ್ನಾರ್ ನಗರದ ಮಧ್ಯೆ ಇರುವ ಬೆಟ್ಟದಲ್ಲಿ ನಾನೆಘಾಟ್ ಇದೆ.