ದೆಹಲಿ: ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ, ವಯನಾಡ್ (Wayanad)ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ (Rahul Gandhi) ಇಂದು (ಮಂಗಳವಾರ) ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಇಂದು ಬೆಳಗ್ಗೆ ಅವರು ವಿದೇಶಕ್ಕೆ ಹೋಗಿದ್ದು, ಜುಲೈ 17 ಭಾನುವಾರ ವಾಪಸ್ ಬರಲಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ರಾಹುಲ್ ಗಾಂಧಿಯವರ ವಿದೇಶ ಪ್ರವಾಸ ವೈಯಕ್ತಿಕವೇ ಅಥವಾ ಅಧಿಕೃತ ಪ್ರವಾಸವೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಯಾವ ದೇಶಕ್ಕೆ ಅವರು ಹೋಗಿದ್ದಾರೆ ಎಂಬುದ ಬಗ್ಗೆಯೂ ಸದ್ಯಕ್ಕೆ ಮಾಹಿತಿ ಇಲ್ಲ.ಜುಲೈ 18(ಸೋಮವಾರ) ಸಂಸತ್ ನಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದೆ. ಅದೇ ದಿನ ರಾಷ್ಟ್ರಪತಿ ಚುನಾವಣೆಯೂ ನಡೆಯಲಿದ್ದು ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ರಾಹುಲ್ ಗಾಂಧಿ ಇತ್ತೀಚೆಗೆ ಕೈಗೊಂಡ ವಿದೇಶ ಪ್ರವಾಸ ಬಗ್ಗೆ ಭಾರೀ ಚರ್ಚೆಯಾಗಿತ್ತು. ಕಳೆದ ಮೇ ತಿಂಗಳಲ್ಲಿ ರಾಹುಲ್ ವಿದೇಶ ಯಾತ್ರೆ ಕೈಗೊಂಡಿದ್ದರು.
ಮೇ ತಿಂಗಳಲ್ಲಿ ಪ್ರವಾಸಕ್ಕೆ ಹೋದಾಗ ರಾಹುಲ್ ಕಾಠ್ಮಂಡುವಿನ ನೈಟ ಕ್ಲಬ್ನಲ್ಲಿ ಕಾಣಿಸಿಕೊಂಡಿದ್ದರು. ಈ ಹೊತ್ತಲ್ಲೇ ಕಾಂಗ್ರೆಸ್ ಪಕ್ಷ ಭಾರೀ ಬಿಕ್ಕಟ್ಟು ಅನುಭವಿಸುತ್ತಿತ್ತು. ಬಿಜೆಪಿ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, ರಾಹುಲ್ ನೇಪಾಳದಲ್ಲಿ ಸ್ನೇಹಿತರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗಿದ್ದರು ಎಂದು ಹೇಳಿತ್ತು.
ಮೇ ತಿಂಗಳಾಂತ್ಯದಲ್ಲಿ ರಾಹುಲ್ ಬ್ರಿಟನ್ ಗೆ ಪ್ರವಾಸ ಮಾಡಿದ್ದು, ಈ ಪ್ರವಾಸಕ್ಕೆ ಸರ್ಕಾರದಿಂದ ರಾಜಕೀಯ ಸಮ್ಮತಿ ಇರಲಿಲ್ಲ ಎಂದು ಹೇಳಿ ವಿವಾದವಾಗಿತ್ತು.ಆದರೆ ಸಂಸದರೊಬ್ಬರು ಅಧಿಕೃತ ಪ್ರವಾಸ ಕೈಗೊಳ್ಳುವಾಗ ಮಾತ್ರ ಈ ಸಮ್ಮತಿ ಬೇಕಾಗಿರುವುದು ಆ ಭೇಟಿ ವೈಯಕ್ತಿಕ ಆಗಿತ್ತು ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿತ್ತು.
Published On - 1:30 pm, Tue, 12 July 22