ಕೊವಾಕ್ಸಿನ್​ ವಿಚಾರದಲ್ಲಿ ರಾಜಕೀಯ ಬೇಡ: ಬಯೋಟೆಕ್ ಎಂಡಿ ಕೃಷ್ಣ ಎಲ್ಲಾ ಆಗ್ರಹ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 04, 2021 | 7:52 PM

ಕೊವ್ಯಾಕ್ಸಿನ್​ ಲಸಿಕೆಯ ವೈದ್ಯಕೀಯ ಪ್ರಯೋಗವನ್ನು ಭಾರತದಲ್ಲಷ್ಟೇ ಮಾಡಿರುವುದಲ್ಲ. ಬ್ರಿಟನ್​ ಸೇರಿದಂತೆ 12 ದೇಶಗಳಲ್ಲಿ ಪ್ರಯೋಗ ನಡೆದಿದೆ. ಭಾರತ್​ ಬಯೋಟೆಕ್​ ಸಂಸ್ಥೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಇದು ವಿಶ್ವಮಟ್ಟದ ಭಾರತೀಯ ಸಂಸ್ಥೆ..

ಕೊವಾಕ್ಸಿನ್​ ವಿಚಾರದಲ್ಲಿ ರಾಜಕೀಯ ಬೇಡ: ಬಯೋಟೆಕ್ ಎಂಡಿ ಕೃಷ್ಣ ಎಲ್ಲಾ ಆಗ್ರಹ
ಭಾರತ್​ ಬಯೋಟೆಕ್ MD ಕೃಷ್ಣ ಎಲ್ಲಾ
Follow us on

ಭಾರತ್​ ಬಯೋಟೆಕ್​ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್​ ಲಸಿಕೆ ಕುರಿತು ಕೆಲವರು ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ರಾಜಕೀಯ ಬೆರೆಸುತ್ತಿದ್ದಾರೆ. ಆದರೆ, ನಮ್ಮ ನೆಂಟರಾಗಲೀ, ಕುಟುಂಬದವರಾಗಲೀ ರಾಜಕೀಯದಲ್ಲಿಲ್ಲ. ವದಂತಿಗಳನ್ನು ಹಬ್ಬಿಸುವುದು ಸರಿಯಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೊವ್ಯಾಕ್ಸಿನ್​ ಕುರಿತಾಗಿ ಎದ್ದಿರುವ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿರುವ ಅವರು, ಭಾರತ್​ ಬಯೋಟೆಕ್​ ಔಷಧ ತಯಾರಿಕಾ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿರುವ ಸಂಸ್ಥೆ. ನಾವು 123 ದೇಶಗಳನ್ನು ತಲುಪುತ್ತಿದ್ದೇವೆ. ಕೊರೊನಾ ಲಸಿಕೆಯ ವಿಚಾರದಲ್ಲಿ ನಮ್ಮ ಸಂಸ್ಥೆಯ ಲಸಿಕೆಯನ್ನು ‘ಬ್ಯಾಕಪ್​’ ಎಂದು ಪರಿಗಣಿಸುವುದು ಉಚಿತವಲ್ಲ ಎಂದು ಹೇಳಿದ್ದಾರೆ.

ಕೊವ್ಯಾಕ್ಸಿನ್​ ಲಸಿಕೆಯ ವೈದ್ಯಕೀಯ ಪ್ರಯೋಗವನ್ನು ಭಾರತದಲ್ಲಷ್ಟೇ ಮಾಡಿರುವುದಲ್ಲ. ಬ್ರಿಟನ್​ ಸೇರಿದಂತೆ 12 ದೇಶಗಳಲ್ಲಿ ಪ್ರಯೋಗ ನಡೆದಿದೆ. ನಾವು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವಮಟ್ಟದ ಭಾರತೀಯ ಸಂಸ್ಥೆ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ನಮ್ಮ ಸಂಸ್ಥೆಯ ದತ್ತಾಂಶಗಳು ಪಾರದರ್ಶಕವಾಗಿಲ್ಲ ಎಂದು ಆರೋಪಿಸುವವರು ಜಾಲತಾಣಗಳಲ್ಲಿ ಹೋಗಿ ನಾವು ಪ್ರಕಟಿಸಿರುವ 70 ಕ್ಕೂ ಹೆಚ್ಚು ಲೇಖನಗಳತ್ತ ಒಮ್ಮೆ ಕಣ್ಣಾಡಿಸುವುದು ಒಳ್ಳೆಯದು ಎಂದಿದ್ದಾರೆ.

ನಮ್ಮ ಬಳಿ ಈಗಾಗಲೇ 2 ಕೋಟಿ ಡೋಸ್​ ಸಿದ್ಧವಿದೆ. ಬೆಂಗಳೂರಿನ ಒಂದು ಸಂಗ್ರಹ ಕೇಂದ್ರ ಮತ್ತು ಹೈದರಾಬಾದ್​ನಲ್ಲಿ 3 ಸಂಗ್ರಹ ಕೇಂದ್ರಗಳಲ್ಲಿ ಒಟ್ಟು 70 ಕೋಟಿ ಲಸಿಕೆ ಸಂಗ್ರಹಿಸಬೇಕು ಎನ್ನುವುದೇ ನಮ್ಮ ಗುರಿಯಾಗಿದೆ. ಆರಂಭದಲ್ಲಿ ಕೊರೊನಾ ಲಸಿಕೆಯ ದರ ಕೊಂಚ ಹೆಚ್ಚಿದ್ದರೂ ನಂತರದ ದಿನಗಳಲ್ಲಿ ಉತ್ಪಾದನೆ ಹೆಚ್ಚಿದಂತೆ ಬೆಲೆಯೂ ಕ್ರಮೇಣ ತಗ್ಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೊವ್ಯಾಕ್ಸಿನ್​ ಲಸಿಕೆ ರೂಪಾಂತರಗೊಂಡ ಕೊರೊನಾ ವಿರುದ್ಧವೂ ಪರಿಣಾಮಕಾರಿ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಕೇವಲ ಒಂದು ವಾರದ ಕಾಲಾವಕಾಶ ನೀಡಿದರೆ ಸಂಪೂರ್ಣ ದತ್ತಾಂಶ ಒಪ್ಪಿಸುವೆ. ಈಗಾಗಲೇ ನಮ್ಮ ಲಸಿಕೆಗಳು ಸರ್ಕಾರದ ಪ್ರಯೋಗಾಲಯಗಳಲ್ಲಿವೆ ಎಂದು ತಿಳಿಸಿದ್ದಾರೆ.

ಕೊರೊನಾ ಲಸಿಕೆಯೊಂದಿಗೆ ರಾಜಕೀಯ ಬೆರಕೆ.. ಒಬ್ಬೊಬ್ಬರದ್ದೂ ಒಂದೊಂದು ರಾಗ: ಆರೋಗ್ಯ ಸಚಿವರು ಹೇಳಿದ್ದೇನು?

Published On - 7:51 pm, Mon, 4 January 21