ದೆಹಲಿ: ಕೊರೊನಾ ಮೂರನೇ ಅಲೆಯ ಅಟ್ಟಹಾಸದ ನಡುವೆ, ಲಸಿಕೆ ಅಭಿವೃದ್ಧಿ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆ ಕಂಡುಬಂದಿದೆ. ಸ್ವದೇಶಿ ಲಸಿಕೆ ಕೋವಾಕ್ಸಿನ್ ಫೆಬ್ರವರಿಯಲ್ಲಿಯೇ ಸಿದ್ಧವಾಗುವ ಭರವಸೆ ಸಿಕ್ಕಿದೆ.
ದೇಶದಲ್ಲಿ ದಿನೇದಿನೆ ಹೆಮ್ಮಾರಿ ಕೊರೊನಾ ಅಟ್ಟಹಾಸ ಹೆಚ್ಚುತ್ತಲೇ ಇದೆ. ದಿನ ನಿತ್ಯ ಸಾವಿರಾರು ಜನ ಕೊರೊನಾ ಕೂಪದಲ್ಲಿ ಬೀಳುತ್ತಿದ್ದಾರೆ. ರಾಷ್ಟ್ರರಾಜಧಾನಿ ಸೇರಿದಂತೆ ಮಹಾನಗರಗಳಲ್ಲಿ ಕೊರೊನಾ ಮೂರನೇ ಅಲೆ ಎದ್ದಿದ್ದು ಮಹಾ ಭೀತಿ ಶುರುವಾಗಿದೆ. ಆದ್ರೆ ಇಷ್ಟು ದಿನ ಮೈಮರೆತಿದ್ದ ಸರ್ಕಾರಗಳು ಮೈಕೊಡವಿ ಕೊರೊನಾ ನಿಯಂತ್ರಣಕ್ಕೆ ನಿಂತಿವೆ. ಈ ಮಧ್ಯೆ ಲಸಿಕೆ ವಿಚಾರದಲ್ಲಿ ಭಾರತಕ್ಕೆ ಗುಡ್ ನ್ಯೂಸ್ ಸಿಕ್ಕಿದೆ.
ಇನ್ನೂ ಮೂರು ತಿಂಗಳಲ್ಲಿ ರೆಡಿಯಾಗಲಿದೆ ಕೋವ್ಯಾಕ್ಸಿನ್
ಯೆಸ್, ದೇಶೀಯವಾಗಿ ಅಭಿವೃದ್ಧಿ ಪಡಿಸುತ್ತಿರುವ ಕೊವಿಡ್ 19 ಲಸಿಕೆಯಾದ ಕೋವಾಕ್ಸಿನ್ ಮುಂದಿನ ವರ್ಷ ಫೆಬ್ರವರಿಗೆ ಬಿಡುಗಡೆಯಾಗುವ ಸೂಚನೆ ಸಿಕ್ಕಿದೆ. ಮನುಷ್ಯರ ಮೇಲೆ ಈವರೆಗೂ ನಡೆಸಲಾಗಿರುವ ಪ್ರಯೋಗದಲ್ಲಿ ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷಿತವೆಂದು ತಿಳಿದು ಬಂದಿದೆ. ಇದೇ ತಿಂಗಳು ಲಸಿಕೆಯ ಕೊನೆಯ ಹಂತದ ಪ್ರಯೋಗ ಆರಂಭವಾಗಲಿದೆ ಎಂದು ಐಸಿಎಂಆರ್‌ನ ಹಿರಿಯ ವಿಜ್ಞಾನಿಗಳು ತಿಳಿಸಿದ್ದಾರೆ.
ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಕಂಪನಿ ಜಂಟಿಯಾಗಿ ಕೋವಾಕ್ಸಿನ್ ಅಭಿವೃದ್ಧಿ ಪಡಿಸುತ್ತಿವೆ. ಕೋವಾಕ್ಸಿನ್ ಲಸಿಕೆಯನ್ನು ಮುಂದಿನ ವರ್ಷ ಎರಡನೇ ತ್ರೈಮಾಸಿಕದಲ್ಲಿ ಅಂದ್ರೆ ಜೂನ್ ನಲ್ಲಿ ಬಿಡುಗಡೆ ಮಾಡುವ ಭರವಸೆ ವ್ಯಕ್ತವಾಗಿತ್ತು. ಆದರೆ, ಮುಂಚಿತವಾಗಿಯೇ ಅಂದ್ರೆ ಫೆಬ್ರವರಿಯಲ್ಲಿ ಲಸಿಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಎರಡು ಹಂತದ ಪರೀಕ್ಷೆಗೆ ಒಳಗಾಗಿರುವ ಕೋವಾಕ್ಸಿನ್ ಮೂರನೇ ಹಂತದ ಪರೀಕ್ಷೆಯಲ್ಲಿದೆ. ಕೋವಾಕ್ಸಿನ್‌ನನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, 100ರಷ್ಟು ಸುರಕ್ಷಿತವಾಗಿರುವುದು ಕಂಡುಬಂದಿದೆ. ಸಧ್ಯಕ್ಕೆ ಲಸಿಕೆ ಪರಿಣಾಮಕಾರಿಯಾಗಿದೆ, ಐಸಿಎಂಆರ್ ಕೂಡ ಲಸಿಕೆ ಬಗ್ಗೆ ಆಶಾದಾಯಕ ಭಾವನೆ ಹೊಂದಿದೆ. ಈ ಲಸಿಕೆ ಭಾರತ ಸರ್ಕಾರಕ್ಕೂ ಪ್ರಮುಖವಾಗಿದ್ದು ಪ್ರಯೋಗದ ಪ್ರತಿ ಪ್ರಕ್ರಿಯೇ ಮೇಲೆ ನಿಗಾ ಇಟ್ಟಿದೆ. ತುರ್ತು ಪರಿಸ್ಥಿತಿಗಳಲ್ಲಿ ಲಸಿಕೆಯನ್ನು ಬಳಸುವ ಬಗ್ಗೆ ಸರ್ಕಾರ ಯೋಚಿಸಬಹುದಾಗಿದೆ. ಆದರೆ, ಅಪಾಯಗಳ ಬಗ್ಗೆಯೂ ಸರಕಾರಕ್ಕೆ ಆತಂಕವಿದೆ.
ಒಟ್ನಲ್ಲಿ ಫೆಬ್ರುವರಿಯಲ್ಲಿ ಕೋವಾಕ್ಸಿನ್ ಬಿಡುಗಡೆಯಾದರೆ, ಮೊದಲ ಭಾರತೀಯ ಕೋವಿಡ್ 19 ಲಸಿಕೆ ಹೊರಬಂದಂತಾಗಲಿದೆ. ಆದಷ್ಟು ಬೇಗ ಈ ಲಸಿಕೆ ಯಶಸ್ವಿಯಾಗಿ ಭಾರತೀಯರ ಕೈಗೆ ಸಿಗುವಂತೆ ಆಗಲಿ. ಈ ಲಸಿಕೆಯಿಂದ ಪ್ರಪಂಚವೇ ಕೊರೊನಾ ಮುಕ್ತವಾಗಲಿ ಅನ್ನೋದೆ ಎಲ್ಲರ ಆಶಯ.