ಸೈರಸ್ ಮಿಸ್ತ್ರಿ ವಜಾ ಪ್ರಕರಣ; ಟಾಟಾ ಸನ್ಸ್​ ಸಂಸ್ಥೆಗೆ ಸುಪ್ರೀಂಕೋರ್ಟ್​ನಲ್ಲಿ ಮಹತ್ವದ ಗೆಲುವು

|

Updated on: Mar 26, 2021 | 6:03 PM

‘ಇದು ಗೆಲುವು ಅಥವಾ ಸೋಲಿನ ಪ್ರಶ್ನೆಯಲ್ಲ. ನನ್ನ ಬದ್ಧತೆ ಬಗ್ಗೆ ನಮ್ಮ ಟಾಟಾ ಸಂಸ್ಥೆಯು ಅನುಸರಿಸುತ್ತಿರುವ ನೈತಿಕ ನಿಯಮಗಳನ್ನು ಕೆಲವರು ಪ್ರಶ್ನಿಸಿದ್ದರು. ಸುಪ್ರೀಂಕೋರ್ಟ್​ ತನ್ನ ತೀರ್ಪಿನ ಮೂಲಕ ಈ ಪ್ರಶ್ನೆಗಳಿಗೆ ಉತ್ತರ ನೀಡಿದೆ.’ : ರತನ್ ಟಾಟಾ

ಸೈರಸ್ ಮಿಸ್ತ್ರಿ ವಜಾ ಪ್ರಕರಣ; ಟಾಟಾ ಸನ್ಸ್​ ಸಂಸ್ಥೆಗೆ ಸುಪ್ರೀಂಕೋರ್ಟ್​ನಲ್ಲಿ ಮಹತ್ವದ ಗೆಲುವು
ರತನ್ ಟಾಟಾ (ಸಂಗ್ರಹ ಚಿತ್ರ)
Follow us on

ದೆಹಲಿ: ಟಾಟಾ ಕಂಪನಿ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಟಾ ಸನ್ಸ್ ಕಂಪನಿಗೆ ಸುಪ್ರೀಂಕೋರ್ಟ್​ನಲ್ಲಿ ಮಹತ್ವದ ಗೆಲುವು ದೊರೆತಿದೆ. ಟಾಟಾ ಸಂಸ್ಥೆಯ ಕಾರ್ಯನಿರ್ವಾಹಕ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ವಜಾಗೊಳಿಸಿದ ಟಾಟಾ ಸನ್ಸ್ ಕಂಪನಿಯ ನಿರ್ಧಾರದಲ್ಲಿ ತಪ್ಪಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸಂವಿಧಾನದ ವಿಧಿ 75ರ ಅಡಿ ಮಾತುಕತೆ ಮೂಲಕ ಟಾಟಾ ಸನ್ಸ್ ಕಂಪನಿ ಹಾಗೂ ಸೈರಸ್ ಮಿಸ್ತ್ರಿ ನಡುವಿನ ವಿವಾದ ಬಗೆಹರಿಸಿಕೊಳ್ಳಿ ಎಂದು ಆದೇಶಿಸಿರುವ ಕೋರ್ಟ್​, ಈ ಹಂತದಲ್ಲಿ ವಿವಾದ ಬಗೆಹರಿಸಲು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದೆ.

2016ರಲ್ಲಿ ಟಾಟಾ ಸನ್ಸ್ ಕಂಪನಿಯ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ವಜಾಗೊಳಿಸಿದ್ದನ್ನು ವಿರೋಧಿಸಿ ಕಂಪನಿ ಕಾಯ್ದೆಗಳಿಗೆ ಸಂಬಂಧಿಸಿದ ನ್ಯಾಯ ಮಂಡಳಿಗೆ ಸೈರಸ್ ಮಿಸ್ತ್ರಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ಎನ್​ಸಿಎಲ್​ಎಟಿಯ 2019ರಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಮರು ನೇಮಕಗೊಳಿಸುವಂತೆ ಆದೇಶ ನೀಡಿತ್ತು. ಆದರೆ ಇದೀಗ 2019ರ ಡಿಸೆಂಬರ್​ನಲ್ಲಿ NCLAT ನೀಡಿದ್ದ ಆದೇಶವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.

ಇಂದಿನ ತೀರ್ಪಿನ ಕುರಿತು ಪ್ರತಿಕ್ರಿಯಿಸಿ ಟಾಟಾ ಸಂಸ್ಥೆಯ ವರಿಷ್ಠ ರತನ್ ಟಾಟಾ ಟ್ವೀಟ್ ಮಾಡಿದ್ದಾರೆ. ‘ಇದು ಗೆಲುವು ಅಥವಾ ಸೋಲಿನ ಪ್ರಶ್ನೆಯಲ್ಲ. ನನ್ನ ಬದ್ಧತೆ ಬಗ್ಗೆ ನಮ್ಮ ಟಾಟಾ ಸಂಸ್ಥೆಯು ಅನುಸರಿಸುತ್ತಿರುವ ನೈತಿಕ ನಿಯಮಗಳನ್ನು ಕೆಲವರು ಪ್ರಶ್ನಿಸಿದ್ದರು. ಸುಪ್ರೀಂಕೋರ್ಟ್​ ತನ್ನ ತೀರ್ಪಿನ ಮೂಲಕ ಈ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಇಂದಿನ ತೀರ್ಪಿನಿಂದ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನನ್ನ ನಂಬಿಕೆ ಬಲಗೊಂಡಿದೆ’ ಎಂದು ರತನ್ ಟಾಟಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Govt Stake Sale In Tata Communications: ಟಾಟಾ ಕಮ್ಯುನಿಕೇಷನ್ಸ್​ನಲ್ಲಿನ ಎಲ್ಲ ಷೇರನ್ನು ಮಾರಲಿದೆ ಕೇಂದ್ರ ಸರ್ಕಾರ

Published On - 5:03 pm, Fri, 26 March 21