Govt Stake Sale In Tata Communications: ಟಾಟಾ ಕಮ್ಯುನಿಕೇಷನ್ಸ್ನಲ್ಲಿನ ಎಲ್ಲ ಷೇರನ್ನು ಮಾರಲಿದೆ ಕೇಂದ್ರ ಸರ್ಕಾರ
ಭಾರತ ಸರ್ಕಾರವು ಟಾಟಾ ಕಮ್ಯುನಿಕೇಷನ್ಸ್ನಲ್ಲಿ ಇರುವ ಶೇಕಡಾ 26.12ರಷ್ಟು ಷೇರನ್ನು ಮಾರಾಟ ಮಾಡಿ, ಸಂಪೂರ್ಣವಾಗಿ ಹೊರಬರಲಿದೆ ಎಂದು ಕಂಪೆನಿಯ ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಲಾಗಿದೆ.
ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್ನಲ್ಲಿ ಇರುವ ಶೇಕಡಾ 26.12ರಷ್ಟು ಷೇರನ್ನು ಭಾರತ ಸರ್ಕಾರ ಸಂಪೂರ್ಣವಾಗಿ ಮಾರಾಟ ಮಾಡಿ, ಹೊರನಡೆಯಲಿದೆ ಎಂದು ಶುಕ್ರವಾರದಂದು ರೆಗ್ಯುಲೇಟರಿ ಫೈಲಿಂಗ್ನಲ್ಲಿ ಕಂಪೆನಿ ತಿಳಿಸಿದೆ. ಸರ್ಕಾರವು ಶೇ 16.12ರಷ್ಟು ಷೇರನ್ನು ಆಫರ್ ಫಾರ್ ಸೇಲ್ (ಒಎಫ್ಎಸ್) ಮೂಲಕ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಮಾರಾಟ ಮಾಡಲಿದೆ. ಬಾಕಿ ಷೇರಿನ ಪ್ರಮಾಣವನ್ನು ಟಾಟಾ ಸನ್ಸ್ನ ಖಾಸಗಿ ಹೂಡಿಕೆ ಸಂಸ್ಥೆ ಪನಟೋನ್ ಫಿನ್ವೆಸ್ಟ್ ಲಿಮಿಟೆಡ್ಗೆ ಮಾರಾಟ ಮಾಡಲಿದೆ.
ಪನಟೋನ್ ಫಿನ್ವೆಸ್ಟ್ ಸದ್ಯಕ್ಕೆ ಟಾಟಾ ಕಮ್ಯುನಿಕೇಷನ್ಸ್ನ ಶೇ 34.8ರಷ್ಟು ಪಾಲನ್ನು ಹೊಂದಿದೆ. ಇನ್ನು ಟಾಟಾ ಸನ್ಸ್ ಶೇಕಡಾ 14.1ರಷ್ಟು ಪಾಲು ಹೊಂದಿದೆ. ಅಂದಹಾಗೆ, ಸರ್ಕಾರದ ಬಳಿ ಟಾಟಾ ಕಮ್ಯುನಿಕೇಷನ್ಸ್ನ 7,44,46,885 ಈಕ್ವಿಟಿ ಷೇರು ಇದೆ. ಶುಕ್ರವಾರದ ದಿನದ ಕೊನೆಗೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಮುಗಿಸುವ ಹೊತ್ತಿಗೆ ಪ್ರತಿ ಷೇರಿಗೆ ರೂ. 1289.75 ಇತ್ತು. ಅದರ ಒಟ್ಟಾರೆ ಮೌಲ್ಯ ರೂ. 9601 ಕೋಟಿ ಆಗುತ್ತದೆ.
ಆರಂಭಿಕ ಹೆಜ್ಜೆಯಾಗಿ ಸರ್ಕಾರದಿಂದ ಟಾಟಾ ಕಮ್ಯುನಿಕೇಷನ್ಸ್ ಕಂಪೆನಿಯ 4,59,46,885 ಈಕ್ವಿಟಿ ಷೇರುಗಳನ್ನು, ಅಂದರೆ ಶೇಕಡಾ 16.12ರಷ್ಟು ಪಾಲನ್ನು ಸ್ಟಾಕ್ ಎಕ್ಸ್ಚೇಂಜ್ ಮೂಲಕವಾಗಿ ಆಫರ್ ಫಾರ್ ಸೇಲ್ (ಒಎಫ್ಎಸ್) ಮಾಡಲಾಗುತ್ತದೆ. ಆ ಪ್ರಕ್ರಿಯೆ ಮುಗಿದ ತಕ್ಷಣವೇ ಬಾಕಿ ಉಳಿಯುವ ಈಕ್ವಿಟಿ ಷೇರುಗಳನ್ನು ಪನಟೋನ್ ಕಂಪೆನಿಗೆ ಮಾರಾಟ ಮಾಡಲಿದೆ ಎಂದು ಫೈಲಿಂಗ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್