ವಯಸ್ಸು 26 ಆದರೂ ಮನೆಯವರು ಮದುವೆ ಮಾಡಿಸುತ್ತಿಲ್ಲ; ನೀವೇ ಹುಡುಗಿ ತೋರಿಸಿ ಎಂದು ಪೊಲೀಸರ ಮೊರೆಹೋದ 2 ಅಡಿ ವ್ಯಕ್ತಿ
ನನಗೆ ಮದುವೆಯಾಗಬೇಕು ಎಂಬ ಆಸೆ ಇದೆ. ಹೀಗಾಗಿ ನೀವೇ ನನಗೊಂದು ಸೂಕ್ತ ವಧುವನ್ನು ಹುಡುಕಿ ಕೊಡಿ ಎಂದು 26 ವರ್ಷ ವಯಸ್ಸಿನ ಅಜೀಮ್ ಎಂಬ ವ್ಯಕ್ತಿ ಪೊಲೀಸರಲ್ಲಿ ಕೋರಿಕೊಂಡಿದ್ದಾರೆ.
ಲಕ್ನೋ: ದೇಹದೊಳಗಿನ ಕೆಲ ಅಂಶಗಳು ಏರುಪೇರಾದಾಗ ಮನುಷ್ಯನ ಗಾತ್ರ, ರೂಪ, ಆಕಾರ ಎಲ್ಲವೂ ಅದಕ್ಕೆ ತಕ್ಕಂತೆ ರೂಪುಗೊಳ್ಳುತ್ತವೆ. ನಮ್ಮ ನಡುವೆಯೇ ಅತೀ ಕುಳ್ಳ, ಅತೀ ಎತ್ತರ, ಅತೀ ದಪ್ಪ, ಅತೀ ತೆಳ್ಳಗಿನ ವ್ಯಕ್ತಿಗಳು ಸಿಗುತ್ತಾರೆ. ಹಾಗೆ ನೋಡಲಿಕ್ಕೆ ಹೋದರೆ ಮನುಷ್ಯನ ಸಾಧಾರಣ ಎತ್ತರ ಇಂತಿಷ್ಟೇ ಇರಬೇಕು, ಇಂತಿಷ್ಟು ದಪ್ಪ ಇದ್ದರೆ ಮಾತ್ರ ಸೂಕ್ತ ಎಂಬೆಲ್ಲಾ ಲೆಕ್ಕಾಚಾರಗಳು ನಮ್ಮ ಮೂಗಿನ ನೇರಕ್ಕೆ ರೂಪುಗೊಂಡಿವೆಯಷ್ಟೇ. ಹೀಗಾಗಿಯೇ ನಾವಂದುಕೊಂಡಂತೆ ಇರದವರೆಲ್ಲರೂ ನಮಗೆ ವಿಶೇಷ ಎನ್ನಿಸಿಬಿಡುತ್ತಾರೆ. ಅವರು ಏನೇ ಮಾಡಿದರು ಅದನ್ನು ಸೋಜಿಗದ ಸಂಗತಿ ಎಂಬಂತೆ ಕಣ್ಣರಳಿಸಿಕೊಂಡು ನೋಡುತ್ತೇವೆ. ಇಂತಹದ್ದೇ ಒಂದು ಘಟನೆಗೆ ಇದೀಗ ಉತ್ತರ ಪ್ರದೇಶ ಸಾಕ್ಷಿಯಾಗಿದೆ.
ಉತ್ತರ ಪ್ರದೇಶ ರಾಜ್ಯದ ಶಮೀಲ್ ಜಿಲ್ಲೆಯಲ್ಲಿ ಕುಳ್ಳಗಿನ ವ್ಯಕ್ತಿಯೊಬ್ಬರು ತಮಗೆ ಸೂಕ್ತ ವಧು ಹುಡುಕಿಕೊಡುವಂತೆ ಕೋರಿ ಪೊಲೀಸರ ಮೊರೆ ಹೋಗಿರುವ ವಿಚಿತ್ರ ಸನ್ನಿವೇಶ ಜರುಗಿದೆ. 26 ವರ್ಷ ವಯಸ್ಸಿನ ಅಜೀಮ್ ಎಂಬ ವ್ಯಕ್ತಿ ಗಾತ್ರದಲ್ಲಿ ಕುಳ್ಳಗಿದ್ದು, ಕೇವಲ ಎರಡು ಅಡಿ ಎತ್ತರವಿದ್ದಾರೆ. ಅವರಿಗೆ ವಯಸ್ಸಾಗುತ್ತಿದ್ದರೂ ಮನೆಯವರು ಮಾತ್ರ ಮದುವೆ ಮಾಡಿಸುವ ಆಲೋಚನೆಗೆ ಬಂದಿಲ್ಲವಂತೆ. ಹೀಗಾಗಿ ಮದುವೆಯ ಸೂಚನೆ ಕಾಣದೇ ಬೇಸತ್ತ ಅಜೀಂ ಸೀದಾ ಮಹಿಳಾ ಪೊಲೀಸರ ಮೊರೆ ಹೋಗಿದ್ದಾರೆ.
ಇತ್ತೀಚೆಗಷ್ಟೇ ಶಮೀಲ್ ನಗರದ ಮಹಿಳಾ ಪೊಲೀಸ್ ಠಾಣೆಗೆ ತನ್ನ ಸಮಸ್ಯೆ ಹೇಳಿಕೊಂಡು ತೆರಳಿರುವ ಅಜೀಂ, ಅಲ್ಲಿನ ಪೊಲೀಸರ ಬಳಿ ತನ್ನ ಮನೆಯವರು ನನಗೆ ಯಾವುದೇ ಹುಡುಗಿ ಹುಡುಕಿ ಮದುವೆ ಮಾಡುವ ಆಲೋಚನೆಯಲ್ಲಿ ಇದ್ದಂತಿಲ್ಲ. ನನಗೆ ಮದುವೆಯಾಗಬೇಕು ಎಂಬ ಆಸೆ ಇದೆ. ಹೀಗಾಗಿ ನೀವೇ ನನಗೊಂದು ಸೂಕ್ತ ವಧುವನ್ನು ಹುಡುಕಿ ಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.
ಆದರೆ, ಇದಕ್ಕೆ ಉತ್ತರಿಸಿರುವ ಶಮೀಲ್ ಠಾಣೆಯ ಅಧಿಕಾರಿ ನೀರಜ್ ಚೌಧರಿ, ಇದು ನಮ್ಮಿಂದ ಸಾಧ್ಯವಾಗದ ಕೆಲಸ. ಒಂದುವೇಳೆ ಕುಟುಂಬದ ನಡುವೆ ಯಾವುದೇ ಮನಸ್ತಾಪವಿದ್ದರೆ ಗಂಡ ಹೆಂಡತಿಯನ್ನು ಮರಳಿ ಒಂದುಗೂಡಿಸಲು ಪ್ರಯತ್ನಿಸಬಹುದು. ಅದರ ಹೊರತಾಗಿ ಅವಿವಾಹಿತರಿಗೆ ಜೋಡಿ ಹುಡುಕಿಕೊಡುವ ಕೆಲಸ ಪೊಲೀಸರು ಮಾಡಲಾಗುವುದಿಲ್ಲ ಎಂದು ಅಜೀಮ್ಅ ವರ ಕೋರಿಕೆಯನ್ನು ನಿರಾಕರಿಸಿದ್ದಾರೆ.
ಅಜೀಂ ಕುಟುಂಬಸ್ಥರು ಕೈರಾಣ ಪ್ರದೇಶದಲ್ಲಿ ವಾಸವಿದ್ದು, ನಮಗೂ ಅಜೀಂ ಮದುವೆ ನೋಡಬೇಕೆಂಬ ಆಸೆ ಇದೆ. ನಾವು ಆತನಿಗೆ ಮದುವೆ ಮಾಡಬೇಕೆಂದು ಆಸೆಪಡುತ್ತೇವೆ. ಆದರೆ, ಯಾರೂ ಹುಡುಗಿ ಕೊಡುತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಜೀಂ ಸಹೋದರ ಮೊಹಮ್ಮದ್ ನಯೀಂ ಈ ಬಗ್ಗೆ ಮಾತನಾಡಿ, ತನ್ನ ಸಹೋದರ ದೈಹಿಕವಾಗಿ ಸದೃಢನಾಗಿಲ್ಲ. ಆತನ ಕೈಗಳು ಕೂಡ ಬಲವಾಗಿಲ್ಲ. ಹೀಗಾಗಿ ಆತನಿಗೆ ತನ್ನನ್ನು ನೋಡಿಕೊಳ್ಳಲು ಯಾರಾದರೂ ಬೇಕು ಎಂಬ ಭಾವನೆ ಬಂದಿದೆ. ಈಗಾಗಲೇ ನಮಗೆ ಕೆಲವು ಮದುವೆ ಪ್ರಸ್ತಾಪಗಳು ಬಂದಿವೆ. ಹೀಗಾಗಿ ಆದಷ್ಟು ಬೇಗ ವಧು ನೋಡಲು ಹೋಗುತ್ತೇವೆ ಎಂದಿದ್ದಾರೆ. ಇದೇ ವೇಳೆ ಮನೆಯವರ ಬಗ್ಗೆ ಅಸಮಾಧಾನ ಹೊರಹಾಕಿರುವ ಅಜೀಂ ಯಾರಿಗೂ ನನ್ನ ಮದುವೆ ಬಗ್ಗೆ ಯೋಚನೆ ಇಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ: 13ನೇ ವಯಸ್ಸಿಗೆ ಮದುವೆ, 14ಕ್ಕೆ ಮಗು! ಇದು ಬಿಗ್ ಬಾಸ್ ಚಂದ್ರಕಲಾ ರಿಯಲ್ ಲೈಫ್ ಕಷ್ಟದ ಕಥೆ!