ದೆಹಲಿ: ಕೊರೊನಾ.. ಕೊರೊನಾ.. ಕೊರೊನಾ.. ಹೀಗೆ ಕೊರೊನಾ ನಡುಕ ಹುಟ್ಟಿಸಿರುವ ಸಂದರ್ಭದಲ್ಲೇ ಪ್ರಜಾಪ್ರಭುತ್ವದ ತೇರನ್ನೂ ಎಳೆಯಬೇಕಿದೆ. ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, 1066 ಅಭ್ಯರ್ಥಿಗಳ ಭವಿಷ್ಯವನ್ನು ಸುಮಾರು 2 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.
ಕೊರೊನಾ ದೇಶಕ್ಕೆ ಮತ್ತು ದೇಶದ ನಿವಾಸಿಗಳಿಗೆ ದೊಡ್ಡ ಆಘಾತ ಕೊಟ್ಟಿದೆ. ದೇಶದ ಎಲ್ಲೆಡೆ ಕೊರೊನಾ ಅಬ್ಬರಿಸ್ತಿದೆ. ಈ ಹೊತ್ತಲ್ಲೇ ಬಿಹಾರ ಚುನಾವಣೆ ಕೂಡ ಎದುರಾಗಿದ್ದು, ಸಂಚಲನ ಸೃಷ್ಟಿಯಾಗಿದೆ.
ಬಿಹಾರದಲ್ಲಿ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಶುರು
ಬಿಹಾರದಲ್ಲಿ ಪ್ರಜಾಪ್ರಭುತ್ವ ಪರ್ವ ಆರಂಭವಾಗಿದೆ. ಮೋದಿ, ನಿತೀಶ್ ಜೋಡಿ ಒಟ್ಟಾಗಿ ಈ ಬಾರಿ ಚುನಾವಣೆ ಎದುರಿಸುತ್ತಿದ್ರೆ, ಆರ್ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿ ಮೋದಿ, ನಿತೀಶ್ಗೆ ಸೆಡ್ಡುಹೊಡೆದಿವೆ. ಜಿದ್ದಾಜಿದ್ದಿನಿಂದ ಕೂಡಿರುವ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ.
ಮೈತ್ರಿಯ ಮಹಾಪರ್ವ
ಇಂದು ಮೊದಲ ಹಂತದಲ್ಲಿ ಬಿಹಾರದ 71 ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದೆ. 71 ಕ್ಷೇತ್ರಗಳಲ್ಲಿ 1,066 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಮೊದಲ ಹಂತದಲ್ಲಿ 2 ಕೋಟಿ 14ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 1066 ಸ್ಪರ್ಧಾಳುಗಳಲ್ಲಿ 114 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. 35ರಲ್ಲಿ ಜೆಡಿಯು ಹಾಗೂ 29 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸ್ತಿವೆ. ಆರ್ಜೆಡಿ 42 ಮತ್ತು ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿವೆ. 41 ಕ್ಷೇತ್ರಗಳಲ್ಲಿ ಮಾತ್ರ ಎಲ್ಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಜೆಡಿಯು ಸ್ಪರ್ಧಿಸಿರೋ 35 ಕ್ಷೇತ್ರಗಳಲ್ಲೂ ಎಲ್ಜೆಪಿ ಸ್ಪರ್ಧಿಗಳು ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ, ಶೂಟರ್ ಶ್ರೇಯಸಿ ಸಿಂಗ್ ಹಣೆಬರಹವನ್ನ ಇಂದು ಮತದಾರರು ಬರೆಯಲಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಹಿನ್ನೆಲೆ ಮತದಾನ ಪ್ರಕ್ರಿಯೆಯಲ್ಲಿ ಒಂದಷ್ಟು ಬದಲಾವಣೆ ತರಲಾಗಿದ್ದು, ಚುನಾವಣಾ ಆಯೋಗ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಕ್ಸಲ್ ಹಾವಳಿ ಇರುವ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆಡಳಿತಾರೂಢ ಎನ್‍ಡಿಎ ಹಾಗೂ ವಿಪಕ್ಷಗಳ ಒಕ್ಕೂಟ ಮಹಾಘಟಬಂಧನ್ಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಮತದಾರರು ಯಾರಿಗೆ ಜೈ ಅಂತಾರೆ ಅಂತಾ ಫಲಿತಾಂಶ ಬಂದ ಬಳಿಕ ಗೊತ್ತಾಗಲಿದೆ.