ಬಿಹಾರದ ಕಾನೂನು ಸಚಿವರ ವಿರುದ್ಧ ಬಂಧನ ವಾರೆಂಟ್; ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ಸಿಎಂ ನಿತೀಶ್ ಕುಮಾರ್

| Updated By: ರಶ್ಮಿ ಕಲ್ಲಕಟ್ಟ

Updated on: Aug 17, 2022 | 8:52 PM

ಬಿಹಾರ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಸಿಂಗ್ ಅವರು 2014ರ ಅಪಹರಣ ಪ್ರಕರಣದಲ್ಲಿ ಇತರ 17 ಮಂದಿಯೊಂದಿಗೆ ಆರೋಪಿಯಾಗಿದ್ದಾರೆ.

ಬಿಹಾರದ ಕಾನೂನು ಸಚಿವರ ವಿರುದ್ಧ ಬಂಧನ ವಾರೆಂಟ್; ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ಸಿಎಂ ನಿತೀಶ್ ಕುಮಾರ್
ಕಾರ್ತಿಕೇಯ ಸಿಂಗ್
Follow us on

ಪಟನಾ:  ನಿತೀಶ್ ಕುಮಾರ್ (Nitish Kumar) ಅವರ ನೂತನ ಕಾನೂನು ಸಚಿವ ಕಾರ್ತಿಕೇಯ ಸಿಂಗ್ (Kartikeya Singh) ಅಪಹರಣ ಪ್ರಕರಣದ ಆರೋಪಿಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲು ವಾರಂಟ್ ಹೊರಡಿಸಲಾಗಿದೆ. ಆದರೆ ಬಿಹಾರ ಮುಖ್ಯಮಂತ್ರಿ ಇಂದು ಸುದ್ದಿಗಾರ ಜತೆ ಮಾತನಾಡುತ್ತಾ, ತಮ್ಮ ಸಚಿವರ ವಿರುದ್ಧ ಅಂತಹ ಯಾವುದೇ ಪ್ರಕರಣದ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಪಕ್ಷಕ್ಕೆ ಸೇರಿದ ಕಾರ್ತಿಕೇಯ ಸಿಂಗ್ ವಿರುದ್ಧ ವಾರೆಂಟ್ ಕುರಿತು ಸುದ್ದಿಗಾರರು ಕೇಳಿದಾಗ, “ನನಗೆ ಅದರ ಬಗ್ಗೆ ತಿಳಿದಿಲ್ಲ” ಎಂದು ನಿತೀಶ್ ಕುಮಾರ್ ಉತ್ತರಿಸಿದ್ದಾರೆ. ಕಾರ್ತಿಕೇಯ ಸಿಂಗ್ ಅವರು ಆಗಸ್ಟ್ 16 ರಂದು ನ್ಯಾಯಾಲಯದ ಮುಂದೆ ಶರಣಾಗಬೇಕಿತ್ತು. ಆದರೆ ಅದೇ ದಿನ ಅವರು ನಿತೀಶ್ ಕುಮಾರ್ ಅವರ ಹೊಸ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಹಾರ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಸಿಂಗ್ ಅವರು 2014ರ ಅಪಹರಣ ಪ್ರಕರಣದಲ್ಲಿ ಇತರ 17 ಮಂದಿಯೊಂದಿಗೆ ಆರೋಪಿಯಾಗಿದ್ದಾರೆ. ಹತ್ಯೆ ಮಾಡುವುದಕ್ಕಾಗಿ ಬಿಲ್ಡರ್ ಅನ್ನು ಅಪಹರಣ ಮಾಡಲು ಸಂಚು ರೂಪಿಸಿದ ಆರೋಪ ಸಿಂಗ್ ಮೇಲಿದೆ. ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಮತ್ತು ತನ್ನ ವಿರುದ್ಧ ಯಾವುದೇ ವಾರಂಟ್ ಇಲ್ಲ ಎಂದು ಸಿಂಗ್ ಹೇಳಿದ್ದಾರೆ. ಪ್ರಕರಣದ ಸಂತ್ರಸ್ತ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯಲ್ಲಿ ಸಿಂಗ್ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಪಾಟ್ನಾ ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಆಗಸ್ಟ್ 12 ರಂದು ನ್ಯಾಯಾಲಯವು ಸೆಪ್ಟೆಂಬರ್ 1 ರವರೆಗೆ ಅವರ ವಿರುದ್ಧ “ಯಾವುದೇ ಒತ್ತಡದ ಕ್ರಮ” ತೆಗೆದುಕೊಳ್ಳುವಂತಿಲ್ಲ ಎಂದು ಆದೇಶಿಸಿತು.

ನಿತೀಶ್ ಕುಮಾರ್ ಈ ತಿಂಗಳ ಆರಂಭದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದು ತೇಜಸ್ವಿ ಯಾದವ್ ಅವರ ಆರ್‌ಜೆಡಿ ಮತ್ತು ಇತರ ಪಕ್ಷಗಳೊಂದಿಗೆ ಸರ್ಕಾರ ರಚಿಸಿದರು. ಮುಖ್ಯಮಂತ್ರಿ ಮತ್ತು ತೇಜಸ್ವಿ ಯಾದವ್ ಅವರು ಆಗಸ್ಟ್ 10 ರಂದು ಪ್ರಮಾಣ ವಚನ ಸ್ವೀಕರಿಸಿದರು. ಐದು ದಿನಗಳ ನಂತರ ನಿತೀಶ್ ಕುಮಾರ್ ಅವರು 31 ಸಚಿವರನ್ನು ಸೇರಿಸಿದರು, ಅವರಲ್ಲಿ ಹೆಚ್ಚಿನವರು ಆರ್‌ಜೆಡಿಯವರಾಗಿದ್ದಾರೆ. ನಿತೀಶ್ ಅವರ ಜೆಡಿಯು 11 ಖಾತೆಗಳನ್ನು ಹೊಂದಿದೆ.