‘ಫೋಟೋಗಳು ರಾಜಕೀಯ ನಿಲುವು ಹೊಂದಿದ್ದವು’; ರಹಾನ್ ವಾದ್ರಾ ಪ್ರದರ್ಶನ ವಿವಾದಕ್ಕೆ ಬಿಕಾನೇರ್ ಹೌಸ್ ಸ್ಪಷ್ಟನೆ

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರಹಾನ್ ವಾದ್ರಾ ಅವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನದಿಂದ ಕೆಲವು ಫೋಟೋಗಳನ್ನು ತೆಗೆದುಹಾಕಲು ಸೂಚಿಸಿದ ವಿಚಾರ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೆಹಲಿಯಲ್ಲಿ ನಡೆದ ಇತ್ತೀಚಿನ ಪ್ರತಿಭಟನೆಗಳ ಫೋಟೋಗಳನ್ನು ಪ್ರದರ್ಶನದಿಂದ ತೆಗೆದುಹಾಕಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, "ಸರ್ಕಾರಕ್ಕೆ ಹೆದರಿಕೆಯಾಗಿದೆ" ಎಂದು ಆಪಾದಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, "ಗಾಂಧಿ ಕುಟುಂಬವು ಅಧಿಕಾರ ಹಿಡಿಯಲು ಏನು ಬೇಕಾದರೂ ಮಾಡಲು ಸಿದ್ಧವಾಗಿದೆ" ಎಂದು ಪ್ರತ್ಯಾರೋಪ ಮಾಡಿದೆ.

ಫೋಟೋಗಳು ರಾಜಕೀಯ ನಿಲುವು ಹೊಂದಿದ್ದವು; ರಹಾನ್ ವಾದ್ರಾ ಪ್ರದರ್ಶನ ವಿವಾದಕ್ಕೆ ಬಿಕಾನೇರ್ ಹೌಸ್ ಸ್ಪಷ್ಟನೆ
ರಹಾನ್ ವಾದ್ರಾ
Image Credit source: PTI

Updated on: Oct 22, 2026 | 6:05 PM

ನವದೆಹಲಿ, ಅಕ್ಟೋಬರ್ 22: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರಹಾನ್ ವಾದ್ರಾ ಅವರ ಫೋಟೋ ಪ್ರದರ್ಶನದಲ್ಲಿನ ಫೋಟೋಗಳನ್ನು ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯ ಬಿಕಾನೇರ್ ಹೌಸ್ ಆಡಳಿತ ಮಂಡಳಿಯು ಸ್ಪಷ್ಟನೆ ನೀಡಿದೆ. ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಫೋಟೋಗಳು ವನ್ಯಜೀವಿ ಅಥವಾ ಸಂಸ್ಕೃತಿಗೆ ಸಂಬಂಧಿಸಿದ್ದಲ್ಲ. ಅದು ರಾಜಕೀಯ ಸಂದೇಶಗಳನ್ನು ಹೊಂದಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಸಂಜೆ ಪ್ರದರ್ಶನ ಉದ್ಘಾಟನೆಗೊಳ್ಳುವ ಕೆಲವೇ ಗಂಟೆಗಳ ಮುನ್ನ ರಾಜಸ್ಥಾನ ಸರ್ಕಾರ ನಿರ್ವಹಿಸುತ್ತಿರುವ ಬಿಕಾನೇರ್ ಹೌಸ್‌ನಲ್ಲಿ ತಮ್ಮ ಬಹುತೇಕ ಫೋಟೋಗಳನ್ನು ಬಲವಂತವಾಗಿ ತೆಗೆಯಲಾಗಿದೆ ಎಂದು ರಹಾನ್ ವಾದ್ರಾ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಕಾನೇರ್ ಹೌಸ್ ಅಧಿಕಾರಿಗಳು, “ಇಲ್ಲಿ ನಡೆಯುವ ಪ್ರದರ್ಶನಗಳು ಕೇವಲ ಸಂಸ್ಕೃತಿ ಮತ್ತು ವನ್ಯಜೀವಿಗಳ ಮೇಲೆ ಕೇಂದ್ರೀಕೃತವಾಗಿರಬೇಕು. ಆದರೆ ಈ ಬಾರಿ ರಹಾನ್ ಅವರ ಫೋಟೋಗಳು ಈ ಎರಡೂ ವಿಭಾಗಗಳಿಗೆ ಒಳಪಡದೆ ರಾಜಕೀಯ ಒಳಾರ್ಥವನ್ನು ಹೊಂದಿದ್ದವು” ಎಂದು ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಪುತ್ರನ ಫೋಟೋ ಪ್ರದರ್ಶನಕ್ಕೆ ಕತ್ತರಿ: ವಿದ್ಯಾರ್ಥಿ ಚಳವಳಿಯ 74 ಚಿತ್ರಗಳನ್ನು ತೆರವುಗೊಳಿಸಿದ ಬಿಕಾನೆರ್ ಹೌಸ್

ಬಿಕಾನೇರ್ ಹೌಸ್ ಆಡಳಿತ ಮಂಡಳಿಯು ಈ ಕುರಿತು ಪ್ರಕಟಣೆ ಹೊರಡಿಸಿದ್ದು, “ಬಿಕಾನೇರ್ ಹೌಸ್ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಮೀಸಲಾಗಿರುವ ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆಯಾಗಿದೆ. ಪ್ರದರ್ಶನಗಳು ಸಂಸ್ಥೆಯ ನಿಯಮಾವಳಿಗಳಿಗೆ ಬದ್ಧವಾಗಿರಬೇಕು. ನಿಯಮಗಳಿಗೆ ಬದ್ಧವಾಗಿರುವ ಇತರ ಫೋಟೋಗಳ ಪ್ರದರ್ಶನ ಮುಂದುವರಿದಿದೆ” ಎಂದು ಸ್ಪಷ್ಟಪಡಿಸಿದೆ.


‘ನೋ ಐಡಿಯಾ ಈಸ್ ಫೈನಲ್’ ಪ್ರದರ್ಶನ:

26 ವರ್ಷದ ರಹಾನ್ ವಾದ್ರಾ ಅವರ ‘ನೋ ಐಡಿಯಾ ಈಸ್ ಫೈನಲ್’ ಶೀರ್ಷಿಕೆಯ ಈ ಪ್ರದರ್ಶನವು ಬುಧವಾರ ಉದ್ಘಾಟನೆಗೊಂಡಿತು. ಉದ್ಘಾಟನೆಗೂ ಕೆಲವೇ ಗಂಟೆಗಳ ಮುನ್ನ ಫೋಟೋಗಳ ರಾಜಕೀಯ ಸ್ವರೂಪವನ್ನು ಪ್ರಶ್ನಿಸಿ ತೆಗೆದುಹಾಕುವಂತೆ ತಿಳಿಸಲಾಯಿತು ಎಂದು ರಹಾನ್ ಆರೋಪಿಸಿದ್ದಾರೆ. 2025ರ ಜೂನ್ 30ರಂದೇ ಈ ಪ್ರದರ್ಶನದ ಯೋಜನೆಗೆ ಅನುಮೋದನೆ ದೊರೆತಿತ್ತು ಎಂದು ತಿಳಿಸಿದ ರಹಾನ್, “ಈ ಫೋಟೋಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ ಜನರು ಮತ್ತು ಭದ್ರತಾ ಪಡೆಯ ಕೇವಲ ದೃಶ್ಯ ದಾಖಲೆಯಾಗಿದ್ದು, ಇದರಲ್ಲಿ ಯಾವುದೇ ನಿಂದನಾತ್ಮಕ ಅಥವಾ ಪ್ರಚೋದನಕಾರಿ ಅಂಶಗಳಿರಲಿಲ್ಲ” ಎಂದು ಹೇಳಿದ್ದಾರೆ. ಆದರೂ ತಮ್ಮ ಶೇ. 50ರಷ್ಟು ಕಲಾಕೃತಿಗಳನ್ನು ತೆಗೆದುಹಾಕಲು ಒತ್ತಾಯಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.


ಇದನ್ನೂ ಓದಿ: ‘ನಾನೇನೂ ಟ್ರಾವೆಲ್ ಏಜೆಂಟ್ ಅಲ್ಲ’; ರಾಹುಲ್ ಗಾಂಧಿಯ ವಿಯೆಟ್ನಾಂ ಪ್ರವಾಸದ ಪ್ರಶ್ನೆಗೆ ಶಶಿ ತರೂರ್ ಖಡಕ್ ಉತ್ತರ

ಬಿಕಾನೇರ್ ಹೌಸ್‌ನ ಪ್ರಧಾನ ಆಯುಕ್ತ ರೋಹಿತ್ ಕುಮಾರ್ ಅವರು ಪ್ರದರ್ಶನ ಕೊಠಡಿಗಳನ್ನು ವೀಕ್ಷಿಸಿದ ನಂತರ ರಾಜಸ್ಥಾನ ಸರ್ಕಾರದ ಉನ್ನತಾಧಿಕಾರಿಗಳಿಗೆ ಕರೆ ಮಾಡಿ, ಮಧ್ಯಾಹ್ನ 3.30ರೊಳಗೆ ರಾಜಕೀಯ ಸ್ವರೂಪದ ಫೋಟೋಗಳನ್ನು ತೆಗೆಯದಿದ್ದರೆ ಇಡೀ ಕಾರ್ಯಕ್ರಮವನ್ನೇ ರದ್ದುಗೊಳಿಸುವುದಾಗಿ ಎಚ್ಚರಿಸಿದ್ದರು ಎಂದು ರಹಾನ್ ದೂರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us