ಕಾನ್ಪುರ (ಉತ್ತರ ಪ್ರದೇಶ): ಆಟವಾಡುತ್ತಿದ್ದಲ್ಲಿಗೆ ಬಂದ ಹಾವನ್ನು ಮೂರು ವರ್ಷದ ಬಾಲಕನೊಬ್ಬ ಕಚ್ಚಿ ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದ (Uttara Pradesh) ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ನಂತರ ಮನೆಯವರು ಗಾಬರಿಗೊಂಡು ಬಾಲಕನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕ ಅಕ್ಷಯ್ ಮನೆ ಮುಂದೆ ಆಡುತ್ತಿದ್ದಾಗ ಸಣ್ಣ ಹಾವು ಎದುರಿಗೆ ಬಂದಿದೆ. ಇದನ್ನು ನೋಡಿದ ಅಕ್ಷಯ್, ಕೈಯಲ್ಲಿ ಹಿಡಿದು ಬಾಯಿಗೆ ಹಾಕಿ ಕಚ್ಚಿದ್ದಾನೆ. ನಂತರ ಜೋರಾಗಿ ಅಳ ತೊಡಗಿದ್ದಾನೆ. ಏನಾಯ್ತು ಎಂದು ಅಜ್ಜಿ ಮನೆಯೊಳಗಿಂದ ಬಂದು ನೋಡಿದಾಗ ಅಕ್ಷಯ್ ಬಾಯಲ್ಲಿ ಹಾವು ಕಂಡು ಆಘಾತಗೊಂಡಿದ್ದಾರೆ.
ಕೂಡಲೇ ಎಚ್ಚೆತ್ತ ಅಜ್ಜಿ, ಹಾವನ್ನು ತೆಗೆದು ಎಸೆದ ನಂತರ ಬಾಲಕನ ಬಾಯಿಯನ್ನು ನೀರಿನಿಂದ ಸ್ವಚ್ಛಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬಾಲಕನ ಅಜ್ಜಿ ಸುನೀತಾ, ಅಕ್ಷಯ್ ಬಾಯಿಯಿಂದ ಹಾವನ್ನು ಹೊರತೆಗೆದೆ. ನಂತರ ಆತನ ಬಾಯಿಯನ್ನು ನೀರಿನಿಂದ ತೊಳೆದು ಪೋಷಕರಿಗೆ ತಿಳಿಸಿದೆ. ಗಾಬರಿಗೊಂಡ ಪೋಷಕರು ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದರು.
ಇದನ್ನೂ ಓದಿ: Bizarre news: ವಿಶ್ವದ ಅಪಾಯಕಾರಿ ಬುಡಕಟ್ಟು ಮುರ್ಸಿ, ಅನುಮತಿ ಇಲ್ಲದೆ ಇಲ್ಲಿಗೆ ಹೋದರೆ ಕೊಂದೇ ಬಿಡುತ್ತಾರೆ
ಘಟನೆಯನ್ನು ವಿವರಿಸಲು ಹಾಗೂ ಹಾವಿನ ಬಗ್ಗೆ ತಿಳಿಸಲು ಬ್ಯಾಗ್ನಲ್ಲಿ ಹಾವನ್ನು ಹಾಕಿ ವೈದ್ಯರ ಬಳಿ ತೆಗೆದುಕೊಂಡು ಹೋಗಿದ್ದಾರೆ ಎಂದು ಸುದ್ದಿಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಾಲಕನಿಗೆ ಅಗತ್ಯ ಔಷಧಿ ನೀಡಲಾಗಿದೆ. ಜೀವಕ್ಕೆ ಯಾವುದೇ ಅಪಾಯವಿಲ್ಲ. ಆರೋಗ್ಯವಾಗಿದ್ದಾನೆ. ಹೀಗಾಗಿ ತಪಾಸಣೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯ ಮೊಹಮ್ಮದ್ ಸಲೀಂ ಅನ್ಸಾರಿ ಹೇಳಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ