ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಮೇಲೆ ಕೇಳಿಬಂದ 100 ಕೋಟಿ ರೂಪಾಯಿ ವಸೂಲಿ ಆರೋಪದ ಬೆನ್ನಲ್ಲೇ ಬಿಜೆಪಿ ಮತ್ತು ಇತರ ಪ್ರತಿಪಕ್ಷಗಳು ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರನ್ನು ಆಗ್ರಹಿಸಿವೆ. ಬಿಜೆಪಿ ನಾಯಕ ಸುಧೀರ್ ಮುಂಗಂಟಿವಾರ, ರಾಜ್ಯಪಾಲರನ್ನು ಭೇಟಿಯಾಗಿ ರಾಷ್ಟ್ರಪತಿಗಳಿಗೆ ಬಳಿ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸುವಂತೆ ಸಲಹೆ ನೀಡಬೇಕೆಂದು ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಬಿಜೆಪಿ ಸಂಸದ ನಾರಾಯಣ್ ರಾಣೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದು, ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಿ ಮನ್ಸುಖ್ ಹಿರೇನ್ ಅವರ ಹತ್ಯೆ ಮಾಡಲು ಸೂಚನೆ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.
ವಂಚಿತ್ ಬಹುಜನ್ ಅಘಾಡಿಯ ನಾಯಕ ಅವರು ಸಹ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಮ್ದಾಸ್ ಅಠಾವಳೆ, ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸುವಂತೆ ಪತ್ರ ಬರೆದು ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಸರ್ಕಾರದ ಮೇಲೆ ಕೊಂಚವೂ ದುಷ್ಪರಿಣಾಮ ಬೀರಲ್ಲ; ಶರದ್ ಪವಾರ್
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಮೇಲೆ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದಿಂದ ಮಹಾರಾಷ್ಟ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಿನ್ನೆ ಎನ್ಸಿಪಿ ವರಿಷ್ಠ ಶರದ್ ಪವಾರ್ ಸ್ಪಷ್ಟಪಡಿಸಿದ್ದರು. ಸಚಿನ್ ವಾಜೆ ಮೇಲೆ ಪ್ರತಿ ತಿಂಗಳು 100 ಕೋಟಿ ವಸೂಲು ಮಾಡುವಂತೆ ಒತ್ತಡ ಹೇರಿದ್ದರು ಎಂಬ ಆರೋಪದ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯಾವುದೇ ರೀತಿಯ ತನಿಖೆಯನ್ನು ನಡೆಸಲು ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಶರದ್ ಪವಾರ್ ತಿಳಿಸಿದ್ದರು. ಈ ಮೂಲಕ ಶಿವಸೇನೆ- ಎನ್ಸಿಪಿ ದೋಸ್ತಿ ಸರ್ಕಾರವನ್ನು ಈ ಪ್ರಕರಣದಲ್ಲಿ ಬಲಿ ಕೊಡುವುದಿಲ್ಲ ಎಂಬ ಸೂಚನೆ ತಿಳಿಸಿದ್ದರು.
ಇನ್ನೊಂದು ಬೆಳವಣಿಗೆಯಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಗೃಹ ಸಚಿವ ಅನಿಲ್ ದೇಶ್ಮುಖ್ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಇರಿಸಿದವರು ನಿಜವಾಗಿಯೂ ಯಾರು ಎಂಬುದನ್ನು ಕೇಂದ್ರ ಸರ್ಕಾರವೇ ತನಿಖೆ ನಡೆಸಬೇಕು ಎಂದು ರಾಜ್ ಠಾಕ್ರೆ ಆಗ್ರಹಿಸಿದ್ದಾರೆ. ಅಲ್ಲದೇ ಹಲವು ಬಿಜೆಪಿ ನಾಯಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಪತ್ರ ಬರೆದಿದ್ದಾಗಿ ಪರಮ್ವೀರ್ ಸಿಂಗ್ ಖಚಿತಪಡಿಸಿದ್ದಾರೆ. ಅನಿಲ್ ದೇಶ್ಮುಖ್ ಮುಂಬೈನ ಬಾರ್ ಮತ್ತು ರೆಸ್ಟೊರೆಂಟ್ಗಳಿಂದ 100 ಕೋಟಿ ಹಣವನ್ನು ವಸೂಲು ಮಾಡಬೇಕೆಂದು ಸಸ್ಪೆಂಡ್ ಆಗಿರುವ ಪೊಲಿಸ್ ಅಧಿಕಾರಿ ಸಚಿನ್ ವಾಜೆ ಮೇಲೆ ಒತ್ತಡ ಹೇರಿದ್ದರು ಎಂದು ಪರಮ್ವೀರ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದರು. ನಂತರ ತಡರಾತ್ರಿ ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ‘ಅದು ಪರಮ್ವೀರ್ ಸಿಂಗ್ ಬರೆದ ಪತ್ರವಲ್ಲ. ಪತ್ರದ ಮೂಲದ ಕುರಿತು ಅಧಿಕೃತತೆಯಿಲ್ಲ’ ಎಂದು ಹೇಳಿತ್ತು. ಆದರೆ ಇಂದು (ಮಾರ್ಚ್ 21) ಬೆಳಗ್ಗೆ ಪರಮ್ವೀರ್ ಸಿಂಗ್ ಸ್ವತಃ ತಾವೇ ಪತ್ರ ಬರೆದಿದ್ದಾಗಿ ಖಚಿತಪಡಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಚೇರಿಗೆ ಸಹಿ ಮಾಡಿದ ಪತ್ರವನ್ನು ಕಳಿಸಿದ್ದಾಗಿ ಅವರು ತಿಳಿಸಿದ್ದಾರೆ.
ಶಿವಸೇನೆಯ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರೂ ಮೈತ್ರಿಕೂಟದ ಎನ್ಸಿಪಿ ಪಕ್ಷದ ಅನಿಲ್ ದೇಶ್ಮುಖ್ ಗೃಹ ಸಚಿವರಾಗಿದ್ದಾರೆ. ಸರ್ಕಾರದ ಚುಕ್ಕಾಣಿಯಲ್ಲಿ ಕುಳಿತಿರುವ ಇಬ್ಬರ ನಡುವೆ ಅಭಿಪ್ರಾಯ ಬೇಧ, ಸಣ್ಣಪುಟ್ಟ ವೈಮನಸ್ಸು ಉದ್ಭವಿಸಿದ ಉದಾಹರಣೆಗಳಿವೆ. ಗೃಹ ಸಚಿವ ಅನಿಲ್ ದೇಶ್ಮುಖ್ ಮೇಲೆ ಪರಮ್ವೀರ್ ಸಿಂಗ್ ಮಾಡಿರುವ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸುವ ಆರೋಪ ಮಹಾರಾಷ್ಟ್ರ ಸರ್ಕಾರಕ್ಕೆ ಕುತ್ತು ತರುವ ಶಕ್ತಿ ಹೊಂದಿದೆ. ಪರಮ್ವೀರ್ ಸಿಂಗ್ ಗೃಹ ಸಚಿವರ ಮೇಲೇ ಆರೋಪ ಮಾಡಿರುವುದು ಶಿವಸೇನೆ-ಎನ್ಸಿಪಿಯ ದೋಸ್ತಿ ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.
ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಕಳೆದುಕೊಂಡ ಪರಮ್ವೀರ್ ಸಿಂಗ್ ಮೈಮೇಲೆ ಎಳೆದುಕೊಂಡಿದ್ದ ವಿವಾದಗಳು ಒಂದೆರೆಡಲ್ಲ..