ಟಿಎಂಸಿ ವಲಸಿಗರಿಗೆ ಮುಚ್ಚಿತು ಬಿಜೆಪಿ ಬಾಗಿಲು; ತೃಣಮೂಲೀಕರಣ ತಡೆಯಲು ಬಂಗಾಳದ ಬಿಜೆಪಿ ಶಪಥ

ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡುವ ಟಿಎಂಸಿ ನಾಯಕರಿಗೆ ಪಶ್ಚಿಮ ಬಂಗಾಳದ ಬಿಜೆಪಿ ಈ ಬಾರಿ ರೆಡ್ ಸಿಗ್ನಲ್ ತೋರಿಸಿದೆ. "ನಮಗೆ ಸಿದ್ಧಾಂತ ಮುಖ್ಯವೇ ಹೊರತು, ಬೇರೆ ಪಕ್ಷದಿಂದ ಬರುವ ವಲಸಿಗರಲ್ಲ" ಎಂಬ ಸಂದೇಶ ರವಾನಿಸುವ ಮೂಲಕ ಪಶ್ಚಿಮ ಬಂಗಾಳದ ಬಿಜೆಪಿ ತನ್ನ ಆಂತರಿಕ ಶಕ್ತಿಯನ್ನು ಬಲಪಡಿಸಿಕೊಳ್ಳಲು ಮುಂದಾಗಿದೆ. ಬಂಗಾಳದ ಟಿಎಂಸಿಯಲ್ಲಿ ಈಗಾಗಲೇ ಬಿರುಕು ಮೂಡಿದ್ದು, ಇಂದು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಕೂಡ ಬೆರಳೆಣಿಕೆಯಷ್ಟು ನಾಯಕರು ಪಾಲ್ಗೊಂಡು ದೀದಿಗೆ ಮುಖಭಂಗವಾಗುವಂತೆ ಮಾಡಿದ್ದರು.

ಟಿಎಂಸಿ ವಲಸಿಗರಿಗೆ ಮುಚ್ಚಿತು ಬಿಜೆಪಿ ಬಾಗಿಲು; ತೃಣಮೂಲೀಕರಣ ತಡೆಯಲು ಬಂಗಾಳದ ಬಿಜೆಪಿ ಶಪಥ
West Bengal BJP Leaders
Image Credit source: PTI

Updated on: Jun 02, 2026 | 7:48 PM

ಕೊಲ್ಕತ್ತಾ, ಜೂನ್ 2: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಆಡಳಿತಾರೂಢ ಬಿಜೆಪಿ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಬಂಡಾಯ ನಾಯಕರು ಮತ್ತು ಕಾರ್ಯಕರ್ತರಿಗೆ ದೊಡ್ಡ ಶಾಕ್ ನೀಡಿದೆ. ಟಿಎಂಸಿಯಿಂದ ಹೊರಬರಲು ಕಾಯುತ್ತಿರುವ ನಾಯಕರಿಗೆ ತನ್ನ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಿರುವುದಾಗಿ ಘೋಷಿಸಿರುವ ಬಿಜೆಪಿ ಯಾವುದೇ ಕಾರಣಕ್ಕೂ ತನ್ನ ಪಕ್ಷವು ‘ತೃಣಮೂಲೀಕರಣ’ ಆಗಲು ಬಿಡುವುದಿಲ್ಲ ಎಂದು ಶಪಥ ಮಾಡಿದೆ.

ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಗೂ ಮುನ್ನ ಹಾಗೂ ನಂತರ ಟಿಎಂಸಿ ಪಕ್ಷದ ಹಲವು ನಾಯಕರು ಬಿಜೆಪಿಗೆ ಜಿಗಿಯಲು ಸಿದ್ಧವಾಗಿದ್ದರು. ಆದರೆ, ಇದರಿಂದ ಪಕ್ಷದ ಮೂಲ ಸಿದ್ಧಾಂತಕ್ಕೆ ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಧಕ್ಕೆಯಾಗುತ್ತಿದೆ ಎಂಬ ಅಭಿಪ್ರಾಯ ಬಿಜೆಪಿ ವಲಯದಲ್ಲಿ ತೀವ್ರವಾಗಿ ಕೇಳಿಬಂದಿತ್ತು. ಪಶ್ಚಿಮ ಬಂಗಾಳದಲ್ಲಿ ಆರಂಭದಿಂದಲೂ ಬಿಜೆಪಿ ಟಿಎಂಸಿಯ ಭ್ರಷ್ಟಾಚಾರ ಮತ್ತು ಹಿಂಸಾಚಾರದ ಸಂಸ್ಕೃತಿಯನ್ನು ವಿರೋಧಿಸುತ್ತಲೇ ಬಂದಿದೆ. ಈಗ ಅದೇ ಪಕ್ಷದ ನಾಯಕರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಂಡರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ರಾಜ್ಯ ನಾಯಕತ್ವ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಟಿಎಂಸಿ ನಾಯಕರಿಂದಲೇ ಮುಖಭಂಗ; ಪ್ರತಿಭಟನೆಯಲ್ಲಿ ಕೇವಲ 5 ಶಾಸಕರು, 3 ಸಂಸದರು ಭಾಗಿ!

ತಳಮಟ್ಟದಲ್ಲಿ ಟಿಎಂಸಿ ದೌರ್ಜನ್ಯದ ವಿರುದ್ಧ ಹೋರಾಡಿದ ಬಿಜೆಪಿ ಕಾರ್ಯಕರ್ತರು, ಟಿಎಂಸಿ ನಾಯಕರ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಹೀಗಾಗಿ, ಅವರ ಭಾವನೆಗಳಿಗೆ ಗೌರವ ನೀಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬಿಜೆಪಿಯ ಹಿರಿಯ ನಾಯಕರ ಪ್ರಕಾರ, ಬೇರೆ ಪಕ್ಷದ ನಾಯಕರು ಸದಾ ಅಧಿಕಾರಕ್ಕಾಗಿ ವಲಸೆ ಬರುತ್ತಾರೆ. ಅವರು ಬಂದಾಗ ತಮ್ಮ ಹಳೆಯ ಪಕ್ಷದ ಸಂಸ್ಕೃತಿಯನ್ನೂ ಹೊತ್ತು ತರುತ್ತಾರೆ. ಬಿಜೆಪಿ ತನ್ನ ಶಿಸ್ತು ಮತ್ತು ರಾಷ್ಟ್ರೀಯತಾವಾದಿ ಸಿದ್ಧಾಂತಕ್ಕೆ ಹೆಸರಾಗಿದೆಯೇ ಹೊರತು, ಟಿಎಂಸಿಯಂತೆ ಗುಂಪುಗಾರಿಕೆ ರಾಜಕಾರಣಕ್ಕಲ್ಲ. ಹೀಗಾಗಿ, ಪಕ್ಷದೊಳಗೆ ಟಿಎಂಸಿ ಸಂಸ್ಕೃತಿ ಹರಡುವುದನ್ನು ತಡೆಯುವುದೇ ಈ ‘ಮುಚ್ಚಿದ ಬಾಗಿಲು’ ನೀತಿಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಬಂಗಾಳದಲ್ಲಿ ಮಮತಾ ಕಾಲದ ನಿಯಮಕ್ಕೆ ಬಿಜೆಪಿ ಬ್ರೇಕ್!: ಬಕ್ರೀದ್ ರಜೆ 1 ದಿನಕ್ಕೆ ಕಡಿತ, ಪ್ರಾಣಿ ವಧೆಗೂ ಕಠಿಣ ನಿಯಮ 

ಇನ್ಮುಂದೆ ಪಶ್ಚಿಮ ಬಂಗಾಳದಲ್ಲಿ ಬೇರೆ ಪಕ್ಷದ ಪ್ರಭಾವಿ ನಾಯಕರನ್ನು ನಂಬಿ ಚುನಾವಣೆ ಎದುರಿಸುವ ಬದಲು, ಸ್ವಂತ ಬಲದ ಮೇಲೆ ಪಕ್ಷ ಸಂಘಟನೆ ಮಾಡಲು ನಿರ್ಧರಿಸಲಾಗಿದೆ. ಬಿಜೆಪಿಯಲ್ಲಿ ಮೊದಲಿನಿಂದಲೂ ದುಡಿದ ನಿಷ್ಠಾವಂತ ಮತ್ತು ಯುವ ಮುಖಗಳಿಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿ ಹಾಗೂ ಟಿಕೆಟ್ ನೀಡಲು ಪಕ್ಷ ಆದ್ಯತೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us