ಪಶ್ಚಿಮ ಬಂಗಾಳ: ಮಿಡ್ನಾಪುರದಲ್ಲಿ ಪಟಾಕಿ ತಯಾರಿಸುತ್ತಿದ್ದ ಟಿಎಂಸಿ ನಾಯಕನ ಮನೆ ಸ್ಫೋಟ: ಏಳು ಸಾವು

|

Updated on: May 16, 2023 | 6:11 PM

ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಕೃಷ್ಣಪಾದ್ ಬಾಗ್ ಅಲಿಯಾಸ್ ಭಾನು ಬಾಗ್ ಅವರ ಮನೆಯಲ್ಲಿ ಪಟಾಕಿ ತಯಾರಿಸುವ ಅಕ್ರಮ ಕಾರ್ಖಾನೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ಪಟಾಕಿ ತಯಾರಿಕೆ ಹೆಸರಿನಲ್ಲಿ ಬಾಂಬ್‌ಗಳನ್ನು ತಯಾರಿಸಲಾಗುತ್ತಿತ್ತು ಎಂದು ವರದಿಯಾಗಿದೆ.

ಪಶ್ಚಿಮ ಬಂಗಾಳ: ಮಿಡ್ನಾಪುರದಲ್ಲಿ ಪಟಾಕಿ ತಯಾರಿಸುತ್ತಿದ್ದ ಟಿಎಂಸಿ ನಾಯಕನ ಮನೆ ಸ್ಫೋಟ: ಏಳು ಸಾವು
ಸ್ಫೋಟಗೊಂಡ ಮನೆ
Follow us on

ಪಶ್ಚಿಮ ಬಂಗಾಳದ (West Bengal) ಪೂರ್ವ ಮಿಡ್ನಾಪುರದ (East Midnapore) ಎಗ್ರಾದಲ್ಲಿ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ (firecracker factory) ಸ್ಫೋಟ ಸಂಭವಿಸಿದ್ದು ಏಳು ಮಂದಿ ಸಾವಿಗೀಡಾಗಿದ್ದಾರೆ. ಏಳು ಮಂದಿಗೆ ಗಂಭೀರ ಗಾಯಗಳಾಗಿವೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಕೃಷ್ಣಪಾದ್ ಬಾಗ್ ಅಲಿಯಾಸ್ ಭಾನು ಬಾಗ್ ಅವರ ಮನೆಯಲ್ಲಿ ಪಟಾಕಿ ತಯಾರಿಸುವ ಅಕ್ರಮ ಕಾರ್ಖಾನೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ಪಟಾಕಿ ತಯಾರಿಕೆ ಹೆಸರಿನಲ್ಲಿ ಬಾಂಬ್‌ಗಳನ್ನು ತಯಾರಿಸಲಾಗುತ್ತಿತ್ತು ಎಂದು ವರದಿಯಾಗಿದೆ. ಏತನ್ಮಧ್ಯೆ, ಬಿಜೆಪಿ ಈ ಬಗ್ಗೆ ಎನ್‌ಐಎ ತನಿಖೆಗೆ ಒತ್ತಾಯಿಸಿದೆ. ಎನ್‌ಐಎ ತನಿಖೆಯ ಬೇಡಿಕೆಯನ್ನು ಮುಂದಿಟ್ಟಿರುವ ಬಿಜೆಪಿ ನಾಯಕ ಸುಕಾಂತ ಮಜುಂದಾರ್, ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಇಡೀ ರಾಜ್ಯವನ್ನು ಬಾಂಬ್ ಮತ್ತು ಬಂದೂಕುಗಳ ತಯಾರಿಕಾ ಘಟಕವಾಗಿ ಪರಿವರ್ತಿಸಲಾಗಿದೆ ಭಾರತದಲ್ಲಿ ಬೇರೆಲ್ಲಿಯೂ ಇಂತಹ ಘಟನೆಗಳನ್ನು ನೀವು ನೋಡುವುದಿಲ್ಲ ಎಂದು ಮಜುಂದಾರ್ ಹೇಳಿದ್ದಾರೆ. ಈ ಘಟನೆಯ ನಂತರ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.


ಅಸನ್ಸೋಲ್‌ನ ಬಿಜೆಪಿ ಶಾಸಕ ಅಗ್ನಿಮಿತ್ರ ಪಾಲ್ ಮುಖ್ಯಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ಪೊಲೀಸರು ಎಲ್ಲಾ ಬಾಂಬ್ ತಯಾರಿಕಾ ಕಾರ್ಖಾನೆಗಳನ್ನು ಪಟಾಕಿ ತಯಾರಿಸುವ ಕಾರ್ಖಾನೆಗಳು ಎಂದು ಗುರುತಿಸುತ್ತಾರೆ ಎಂದು ಹೇಳಿದರು. ಬ್ಯಾನರ್ಜಿ ನೇತೃತ್ವದ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಏಕೈಕ ಉದ್ಯಮವೆಂದರೆ ಬಾಂಬ್ ತಯಾರಿಸುವ ಕಾರ್ಖಾನೆಗಳು. ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಲು ಟಿಎಂಸಿಗೆ ಬಾಂಬ್‌ಗಳ ಅಗತ್ಯವಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಪ್ರಾಥಮಿಕ ಶಿಕ್ಷಕರ ಹುದ್ದೆಗಳನ್ನು ರದ್ದುಗೊಳಿಸಿದ ನ್ಯಾಯಾಲಯದ ಆದೇಶ ಬಗ್ಗೆ ಮೇಲ್ಮನವಿ ಸಲ್ಲಿಸುತ್ತೇವೆ: ಮಮತಾ ಬ್ಯಾನರ್ಜಿ

ಸ್ಫೋಟದಿಂದ ತತ್ತರಿಸಿದ ಎಗ್ರಾ ಪ್ರದೇಶ

ಮಂಗಳವಾರ ಮಧ್ಯಾಹ್ನ ಪೂರ್ವ ಮಿಡ್ನಾಪುರದ ಖಾಡಿಕುಲ್ ಗ್ರಾಮದಲ್ಲಿ ಸ್ಫೋಟ ವರದಿಯಾಗಿದೆ. ಗ್ರಾಮಕ್ಕೆ ನುಗ್ಗಲು ಯತ್ನಿಸಿದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಮೂಲಗಳ ಪ್ರಕಾರ ಸ್ಫೋಟದಲ್ಲಿ ಛಿದ್ರಗೊಂಡು ಮೃತದೇಹಗಳು ರಸ್ತೆಯಲ್ಲಿ ಬಿದ್ದಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆ ಕುರಿತು ಎಗ್ರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಫೋಟದಲ್ಲಿ ಕಾರ್ಖಾನೆ ಸಂಪೂರ್ಣ ಧ್ವಂಸಗೊಂಡಿದ್ದು, ಬೆಂಕಿಯಿಂದಾಗಿ ಸಮೀಪದ ಹಲವು ಮನೆಗಳಿಗೂ ಹಾನಿಯಾಗಿದೆ.

ಘಟನೆ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ

ಎಗ್ರಾ ಸ್ಫೋಟವನ್ನು ದುಃಖಕರ ಘಟನೆ ಎಂದು ಕರೆದ ಬ್ಯಾನರ್ಜಿ, ಘಟನೆಯ ಪ್ರಮುಖ ಆರೋಪಿಯನ್ನು ಈ ಹಿಂದೆ ಬಂಧಿಸಲಾಗಿತ್ತು ಎಂದು ಹೇಳಿದರು. ಒಡಿಶಾ ಗಡಿಗೆ ಸಮೀಪವಿರುವ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಪಟಾಕಿಗಳನ್ನು ಒಡಿಶಾ ಮಾರುಕಟ್ಟೆಗಾಗಿ ತಯಾರಿಸಲಾಗಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Tue, 16 May 23