ಐಪಿಎಸ್​ ಅಧಿಕಾರಿ ಎಂದು ಹೇಳಿ ಜನರಿಗೆ ಕೋಟ್ಯಂತರ ರೂ.ವಂಚಿಸಿದ್ದ ಬಿಎಸ್​ಎಫ್​ ಅಧಿಕಾರಿ ಅರೆಸ್ಟ್; ಸಂಗ್ರಹಿಸಿದ್ದ ಸಂಪತ್ತಿನ ಮೌಲ್ಯ ಎಷ್ಟು ಗೊತ್ತಾ?

| Updated By: Lakshmi Hegde

Updated on: Jan 17, 2022 | 1:28 PM

ಪ್ರವೀಣ್ ಯಾದವ್​ ಸ್ಟಾಕ್​ ಮಾರ್ಕೆಟ್​ನಲ್ಲಿ 60 ಲಕ್ಷ ರೂಪಾಯಿಗಳಷ್ಟು ನಷ್ಟ ಅನುಭವಿಸಿದ್ದ.  ಈ ಹಣವನ್ನು ಮತ್ತೆ ಗಳಿಸಲು ಹೀಗೆ ಜನರಿಗೆ ವಂಚನೆ ಮಾಡುವ ಮಾರ್ಗ ಕಂಡುಕೊಂಡಿದ್ದ ಎಂದು ಗುರ್​ಗಾಂವ್​ ಜಿಲ್ಲಾ ಪೊಲೀಸ್ ಕ್ರೈಂ ವಿಭಾಗದ ಎಸಿಪಿ ಪ್ರೀತ್​ಪಾಲ್​ ಸಿಂಗ್​ ತಿಳಿಸಿದ್ದಾರೆ.

ಐಪಿಎಸ್​ ಅಧಿಕಾರಿ ಎಂದು ಹೇಳಿ ಜನರಿಗೆ ಕೋಟ್ಯಂತರ ರೂ.ವಂಚಿಸಿದ್ದ ಬಿಎಸ್​ಎಫ್​ ಅಧಿಕಾರಿ ಅರೆಸ್ಟ್; ಸಂಗ್ರಹಿಸಿದ್ದ ಸಂಪತ್ತಿನ ಮೌಲ್ಯ ಎಷ್ಟು ಗೊತ್ತಾ?
ವಶಪಡಿಸಿಕೊಂಡ ನಗದು
Follow us on

ಹರ್ಯಾಣದ ಗಡಿ ಭದ್ರತಾ ಪಡೆಯ ಅಧಿಕಾರಿಯೊಬ್ಬರಿಂದ 14 ಕೋಟಿ ರೂಪಾಯಿ ನಗದು, 1 ಕೋಟಿ ರೂ.ಮೌಲ್ಯದ ಚಿನ್ನಾಭರಣಗಳು, ಏಳು ಐಷಾರಾಮಿ ಕಾರುಗಳು (ಬಿಎಂಡಬ್ಲ್ಯೂ, ಜೀಪ್​, ಮರ್ಸಿಡಸ್​ ಒಳಗೊಂಡು) ಸೇರಿ ಅಪಾರಪ್ರಮಾಣದ ಸಂಪತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುರ್​ಗಾಂವ್​ನ ಮನೇಸರ್​ ಎಂಬಲ್ಲಿರುವ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್​ ಪ್ರಧಾನಕಚೇರಿಯಲ್ಲಿ ನಿಯೋಜಿಸಲ್ಪಟ್ಟಿದ್ದ, ಗಡಿ ಭದ್ರತಾ ಪಡೆಯ ಡೆಪ್ಯೂಟಿ ಕಮಾಂಡಂಟ್​ ಪ್ರವೀಣ್​ ಯಾದವ್​ ಎಂಬುವರಿಂದ ಇಷ್ಟೊಂದು ಅಕ್ರಮ ಆಸ್ತಿ ವಶಪಡಿಸಿಕೊಳ್ಳಲಾಗಿದ್ದು, ಈ ಅಧಿಕಾರಿ ತಾನೊಬ್ಬ ಐಪಿಎಸ್ ಅಧಿಕಾರಿ ಎಂಬಂತೆ ಪೋಸ್​ಕೊಟ್ಟು ಜನರಿಗೆ 125 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಹೇಳಲಾಗಿದ್ದು, ಸದ್ಯ ಅವರನ್ನು ಬಂಧಿಸಲಾಗಿದೆ. 

ಕೇವಲ ಪ್ರವೀಣ್​ ಯಾದವ್​​ನನ್ನಷ್ಟೇ ಅಲ್ಲ, ಅವರ ಪತ್ನಿ ಮಮತಾ ಯಾದವ್​, ಸಹೋದರಿ ರಿತು ಮತ್ತು ಸಹಚರರನ್ನೂ ಪೊಲೀಸರು ಬಂಧಿಸಿದ್ದಾರೆ. ಯಾದವ್​ ತಾನೊಬ್ಬ ಐಪಿಎಸ್​ ಅಧಿಕಾರಿ ಎಂದು ಜನರನ್ನು ನಂಬಿಸಿದ್ದ. ನ್ಯಾಷನಲ್​ ಸೆಕ್ಯೂರಿಟಿ ಗಾರ್ಡ್​ (NSG)ನಲ್ಲಿ ನಿರ್ಮಾಣ ಗುತ್ತಿಗೆ ಕೊಡಿಸುವುದಾಗಿ ಹೇಳಿ ಅನೇಕರಿಂದ ದುಡ್ಡು ಪಡೆದಿದ್ದ. ಹೀಗೆ ಮಾಡಿಯೇ ಕೋಟ್ಯಂತರ ರೂಪಾಯಿ ಗಳಿಸಿದ್ದ ಯಾದವ್​, ಅದನ್ನೆಲ್ಲ ಎನ್​ಸಿಜಿ ಹೆಸರಲ್ಲಿಯೇ ತೆರೆಯಲಾಗಿದ್ದ ನಕಲಿ ಬ್ಯಾಂಕ್​ ಖಾತೆಗೆ ವರ್ಗಾಯಿಸಿದ್ದ. ಯಾದವ್​ ಸಹೋದರಿ ರಿತು ಯಾದವ್​ ಆ್ಯಕ್ಸಿಸ್​ ಬ್ಯಾಂಕ್​​ನಲ್ಲಿ ಮ್ಯಾನೇಜರ್​ ಆಗಿದ್ದು, ಆಕೆಯೇ ಅಕೌಂಟ್ ತೆರೆದು, ಅವ್ಯವಹಾರಕ್ಕೆ ಸಹಾಯ ಮಾಡಿದ್ದರು ಎಂದು ಪೊಲೀಸ್ ತಿಳಿಸಿದ್ದಾರೆ.

ಪ್ರವೀಣ್ ಯಾದವ್​ ಸ್ಟಾಕ್​ ಮಾರ್ಕೆಟ್​ನಲ್ಲಿ 60 ಲಕ್ಷ ರೂಪಾಯಿಗಳಷ್ಟು ನಷ್ಟ ಅನುಭವಿಸಿದ್ದ.  ಈ ಹಣವನ್ನು ಮತ್ತೆ ಗಳಿಸಲು ಹೀಗೆ ಜನರಿಗೆ ವಂಚನೆ ಮಾಡುವ ಮಾರ್ಗ ಕಂಡುಕೊಂಡಿದ್ದ ಎಂದು ಗುರ್​ಗಾಂವ್​ ಜಿಲ್ಲಾ ಪೊಲೀಸ್ ಕ್ರೈಂ ವಿಭಾಗದ ಎಸಿಪಿ ಪ್ರೀತ್​ಪಾಲ್​ ಸಿಂಗ್​ ತಿಳಿಸಿದ್ದಾರೆ. ಯಾದವ್​ರನ್ನು ಇತ್ತೀಚೆಗಷ್ಟೇ ಅಗರ್ತಲಾಕ್ಕೆ ಪೋಸ್ಟಿಂಗ್ ಮಾಡಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಜನರನ್ನು ವಂಚಿಸಿ ಭರ್ಜರಿ ಹಣ ಮಾಡಿ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಒಡಿಶಾದ ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶಾಂತಿ ದೇವಿ ನಿಧನ; ಸಂತಾಪ ಸೂಚಿಸಿದ ಪ್ರಧಾನಿ ಮೋದಿ

Published On - 1:28 pm, Mon, 17 January 22