AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾದ ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶಾಂತಿ ದೇವಿ ನಿಧನ; ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಶಾಂತಿ ದೇವಿ ಅವರು 1934ರ ಏಪ್ರಿಲ್​ 18ರಂದು ಬಾಲಾಸೋರ್​ ಜಿಲ್ಲೆಯ ಜಮೀನುದಾರರ ಮನೆಯಲ್ಲಿ ಜನಿಸಿದ್ದರು. 17ನೇ ವಯಸ್ಸಿನಲ್ಲಿ ವೈದ್ಯ ರಾತಾ ದಾಸ್​ರನ್ನು ವಿವಾಹವಾದರು. ಇವರು ಗಾಂಧಿಯ ಅನುಯಾಯಿಯಾಗಿದ್ದರು.

ಒಡಿಶಾದ ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶಾಂತಿ ದೇವಿ ನಿಧನ; ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಶಾಂತಿ ದೇವಿ
TV9 Web
| Edited By: |

Updated on: Jan 17, 2022 | 12:55 PM

Share

ಒಡಿಶಾದ ಖ್ಯಾತ ಸಾಮಾಜಿಕ ಕಾರ್ಯಕರ್ತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶಾಂತಿ ದೇವಿ ಭಾನುವಾರ ರಾತ್ರಿ,  ರಾಯಗಡಾ ಜಿಲ್ಲೆಯ ಗುನುಪುರದಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಶಾಂತಿದೇವಿಗೆ 88ವರ್ಷ ವಯಸ್ಸಾಗಿತ್ತು. ಭಾನುವಾರ ರಾತ್ರಿ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡು, ಎಚ್ಚರ ತಪ್ಪಿದ್ದಾರೆ. ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ದಾಗಿ ಶಾಂತಿ ದೇವಿ ಕುಟುಂಬಸ್ಥರು ತಿಳಿಸಿದ್ದಾರೆ. ಬುಡಕಟ್ಟು ಜನಾಂಗದ ಹುಡುಗಿಯರು, ಮಹಿಳೆಯರ ಅಭಿವೃದ್ಧಿ, ಸುಸ್ಥಿರ ಜೀವನಕ್ಕಾಗಿ ಶ್ರಮಿಸಿದ್ದ ಶಾಂತಿ ದೇವಿ, 2021ರ ನವೆಂಬರ್​ 9ರಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.  

ಶಾಂತಿ ದೇವಿ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಬಡವರು ಮತ್ತು ಹಿಂದುಳಿದವರ ಧ್ವನಿಯಾಗಿದ್ದ ಶಾಂತಿ ದೇವಿ ಸದಾ ಸ್ಮರಣೀಯರು. ಬಡವರ ಕಷ್ಟವನ್ನು ತೊಡೆದುಹಾಕಿ, ಆರೋಗ್ಯಕರ ಮತ್ತು ಅತ್ಯುತ್ತಮ ಸಮಾಜ ರಚಿಸಲು ಅವರು ನಿಸ್ವಾರ್ಥವಾಗಿ ಕೆಲಸ ಮಾಡಿದರು. ಅವರ ನಿಧನದಿಂದ ನೋವಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್​ ಇತರರು ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಶಾಂತಿ ದೇವಿ ಅವರು 1934ರ ಏಪ್ರಿಲ್​ 18ರಂದು ಬಾಲಾಸೋರ್​ ಜಿಲ್ಲೆಯ ಜಮೀನುದಾರರ ಮನೆಯಲ್ಲಿ ಜನಿಸಿದ್ದರು. 17ನೇ ವಯಸ್ಸಿನಲ್ಲಿ ವೈದ್ಯ ರಾತಾ ದಾಸ್​ರನ್ನು ವಿವಾಹವಾದರು. ಇವರು ಗಾಂಧಿಯ ಅನುಯಾಯಿಯಾಗಿದ್ದರು. ನಂತರ ಅವಿಭಜಿತ ಕೋರಾಪುತ್​ ಜಿಲ್ಲೆಗೆ ಪತಿಯೊಂದಿಗೆ ತೆರಳಿ, ಅಲ್ಲಿನ ಬುಡಕಟ್ಟು ಜನಾಂಗದ ಮಹಿಳೆಯರಿಗಾಗಿ ಶ್ರಮಿಸಿದರು. ಈಗಿನ ರಾಯಗಡಾ ಜಿಲ್ಲೆ (ಆಗಿನ ಅವಿಭಜಿತ ಕೋರಾಪುತ್​ ಜಿಲ್ಲೆ) ಯ ಸಂಕಲ್ಪಧಾರ್ ಗ್ರಾಮದಲ್ಲಿ ಆಶ್ರಮವೊಂದನ್ನು ನಿರ್ಮಿಸಿದ್ದಾರೆ. ಬುಡಕಟ್ಟು ಜನಾಂಗದ ಮಕ್ಕಳಿಗಾಗಿ ಈ ಆಶ್ರಮ ಕಟ್ಟಿದ್ದರೂ, ಅಲ್ಲಿ ಕುಷ್ಠರೋಗಿಗಳ ಆರೈಕೆಯನ್ನೂ ಮಾಡುತ್ತಿದ್ದರು.  ಬಡಮಕ್ಕಳ ಪುನರ್ವಸತಿ, ಶಿಕ್ಷಣಕ್ಕಾಗಿಯೂ ಅವರು ಆಶ್ರಮ ಕಟ್ಟಿದ್ದರು. ಜಮುನಾಲಾಲ್ ಬಜಾಜ್ ಪ್ರಶಸ್ತಿ ಮತ್ತು ರಾಧಾನಾಥ್ ರಥ ಶಾಂತಿ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು.

ಇದನ್ನೂ ಓದಿ: Pandit Birju Maharaj Died: ಖ್ಯಾತ ಕಥಕ್​ ನೃತ್ಯಪಟು, ಪದ್ಮವಿಭೂಷಣ ಪುರಸ್ಕೃತ ಬಿರ್ಜೂ ಮಹಾರಾಜ್​ ನಿಧನ