ಹಿಮಪಾತದಿಂದ ತನ್ನ ಮದುವೆಗೆ ಹೋಗಲಾಗದೆ ಪರದಾಡಿದ ಸೈನಿಕ; ಹೆಲಿಕಾಪ್ಟರ್​ನಲ್ಲಿ ಏರ್​ಲಿಫ್ಟ್ ಮಾಡಿಸಿದ​ ಬಿಎಸ್​ಎಫ್

| Updated By: ಸುಷ್ಮಾ ಚಕ್ರೆ

Updated on: Apr 30, 2022 | 8:07 PM

ಎಲ್‌ಒಸಿ ಪೋಸ್ಟ್ ಹಿಮದಿಂದ ಆವೃತವಾಗಿರುವುದರಿಂದ ಮತ್ತು ಕಾಶ್ಮೀರ ಕಣಿವೆಯೊಂದಿಗಿನ ಅದರ ರಸ್ತೆ ಸಂಪರ್ಕ ಸರಿಯಾಗಿಲ್ಲ. ಈ ಸ್ಥಳಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಮಿಲಿಟರಿ ಹೆಲಿಕಾಪ್ಟರ್​ ಒಂದೇ ಲಭ್ಯವಿರುವ ಏಕೈಕ ಸಾರಿಗೆ ವ್ಯವಸ್ಥೆಯಾಗಿದೆ.

ಹಿಮಪಾತದಿಂದ ತನ್ನ ಮದುವೆಗೆ ಹೋಗಲಾಗದೆ ಪರದಾಡಿದ ಸೈನಿಕ; ಹೆಲಿಕಾಪ್ಟರ್​ನಲ್ಲಿ ಏರ್​ಲಿಫ್ಟ್ ಮಾಡಿಸಿದ​ ಬಿಎಸ್​ಎಫ್
ಹೆಲಿಕಾಪ್ಟರ್
Follow us on

ಅಂಗುಲ್: ಸೈನಿಕರು ತಮ್ಮ ವೈಯಕ್ತಿಕ ಖುಷಿ, ಪ್ರಾಣವನ್ನು ಕೂಡ ಲೆಕ್ಕಿಸದೆ ತನ್ನ ದೇಶದವರಿಗಾಗಿ ಹೋರಾಡುತ್ತಾರೆ. ಅಂತಹ ಸೈನಿಕನ ಸಂತೋಷದ ಕ್ಷಣಕ್ಕೆ ತನ್ನ ಕೈಲಾದ ಸಹಾಯ ಮಾಡಲು ನಿರ್ಧರಿಸಿದ BSF ಇಂದು ಸೈನಿಕರೊಬ್ಬರು ತಮ್ಮ ಮದುವೆಗೆ ಹೋಗಲು ಅನುಕೂಲವಾಗಲೆಂದು ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ. ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (LoC) ರಿಮೋಟ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ತನ್ನ ಮದುವೆಯ ಸಮಯದೊಳಗೆ ಮನೆ ಸೇರಲು ಸುಮಾರು 2,500 ಕಿಮೀ ದೂರದಲ್ಲಿರುವ ಒಡಿಶಾಗೆ ಹೋಗಬೇಕಿತ್ತು. ಹೀಗಾಗಿ, ಆತ ಸಮಯಕ್ಕೆ ಸರಿಯಾಗಿ ತನ್ನ ಮದುವೆಗೆ ಹಾಜರಾಗಲು ಅನುಕೂಲವಾಗಲೆಂದು ವಿಶೇಷ ಹೆಲಿಕಾಪ್ಟರ್​ ವ್ಯವಸ್ಥೆ ಮಾಡಲಾಗಿತ್ತು.

ಎಲ್‌ಒಸಿಯ (ಗಡಿ ನಿಯಂತ್ರಣ ರೇಖೆ) ಉದ್ದಕ್ಕೂ ಮಚಿಲ್ ಸೆಕ್ಟರ್‌ನ ಎತ್ತರದ ಪೋಸ್ಟ್‌ನಲ್ಲಿ ಸೈನಿಕರನ್ನು ಸೇವೆಗೆ ನಿಯೋಜಿಸಲಾಗಿತ್ತು. 30 ವರ್ಷದ ಕಾನ್‌ಸ್ಟೆಬಲ್ ನಾರಾಯಣ ಬೆಹೆರಾ ಅವರ ವಿವಾಹವು ಮೇ 2ರಂದು ಒಡಿಶಾದಲ್ಲಿರುವ ತಮ್ಮ ಊರಿನಲ್ಲಿ ನಿಗದಿಯಾಗಿತ್ತು ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್‌ಒಸಿ ಪೋಸ್ಟ್ ಹಿಮದಿಂದ ಆವೃತವಾಗಿರುವುದರಿಂದ ಮತ್ತು ಕಾಶ್ಮೀರ ಕಣಿವೆಯೊಂದಿಗಿನ ಅದರ ರಸ್ತೆ ಸಂಪರ್ಕವು ಸರಿಯಾಗಿಲ್ಲ. ಈ ಸ್ಥಳಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಮಿಲಿಟರಿ ಹೆಲಿಕಾಪ್ಟರ್​ ಒಂದೇ ಲಭ್ಯವಿರುವ ಏಕೈಕ ಸಾರಿಗೆ ವ್ಯವಸ್ಥೆಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ನಾರಾಯಣ ಬೆಹೆರಾ ಅವರ ಪೋಷಕರು ಅವರ ಘಟಕದ ಕಮಾಂಡರ್‌ಗಳನ್ನು ಸಂಪರ್ಕಿಸಿ, ಕಾಶ್ಮೀರದಲ್ಲಿ ಹಿಮಪಾತವಾಗಿರುವುದರಿಂದ ತಮ್ಮ ಮಗ ಮದುವೆಗೆ ಬರಲು ಸಾಧ್ಯವಾಗದಿರಬಹುದು, ಆತನ ಮದುವೆ ನಿಂತುಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ವಿಷಯವನ್ನು ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ (ಕಾಶ್ಮೀರ ಗಡಿಭಾಗ) ರಾಜಾ ಬಾಬು ಸಿಂಗ್ ಅವರ ಗಮನಕ್ಕೆ ತರಲಾಯಿತು.

ಶ್ರೀನಗರದಲ್ಲಿ ಬೀಡುಬಿಟ್ಟಿರುವ ಪಡೆಯ ಚೀತಾ ಹೆಲಿಕಾಪ್ಟರ್ ಅನ್ನು ತಕ್ಷಣವೇ ಕರೆಸಿ, ನಾರಾಯಣ ಬೆಹೆರಾ ಅವರನ್ನು ಏರ್‌ಲಿಫ್ಟ್ ಮಾಡಬೇಕು ಎಂದು ರಾಜಾ ಬಾಬು ಸಿಂಗ್ ಆದೇಶಿಸಿದರು. ಹೆಲಿಕಾಪ್ಟರ್ ಇಂದು ಮುಂಜಾನೆ ಬೆಹೆರಾ ಅವರನ್ನು ಶ್ರೀನಗರಕ್ಕೆ ಕರೆತಂದಿತು.

Published On - 8:06 pm, Sat, 30 April 22