ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ವೇಳೆಯೇ ರಾಷ್ಟ್ರ ರಾಜಧಾನಿ ದೆಹಲಿಯ ಈಶಾನ್ಯ ಭಾಗ ಹೊತ್ತಿ ಉರಿಯುತ್ತಿದೆ. ಸಿಎಎ ಪರ-ವಿರೋಧಿ ಗುಂಪುಗಳು ಕಲ್ಲೆಸೆತ, ಅಂಗಡಿಗಳು-ಮನೆಗಳಿಗೆ ಬೆಂಕಿ ಹಚ್ಚೋ ಮೂಲಕ ದೆಹಲಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವಂತೆ ಮಾಡಿದ್ದಾರೆ.
ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ, ದೆಹಲಿಯ ಜಾಮಿಯಾ ಮಿಲ್ಲಿಯಾ ವಿವಿಯಲ್ಲಿ ನಡೆದಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಇದರಲ್ಲಿ ಹಲವಾರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ರು. ಈ ಘಟನೆ ಮರೆಯೋ ಮುನ್ನವೇ ಈಶಾನ್ಯ ದೆಹಲಿಯ ಜಫರಾಬಾದ್, ಮೌಜ್ಪುರ, ಸೀಲಾಂಪುರ, ಗೌತಂಪುರಿ, ಭಜನ್ಪುರ, ಚಾಂದ್ಬಾಗ್, ಮುಸ್ತಾಫಾಬಾದ್, ವಜೀರಾಬಾದ್, ಶಿವ್ ವಿಹಾರ್ ಪ್ರದೇಶಗಳಲ್ಲಿ ಸಿಎಎ ಪರ-ವಿರೋಧಿ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿವೆ.
ಭಾರತಕ್ಕೆ ಕೆಟ್ಟ ಹೆಸರು ತರಲು ಕಾಣದ ಕೈಗಳ ಕೈವಾಡ?
ಈಶಾನ್ಯ ದೆಹಲಿಯ ಜಫರಾಬಾದ್ನಲ್ಲಿ, ಸಿಎಎ ವಿರೋಧಿಸಿ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಶನಿವಾರ ಏಕಾಏಕಿ ಪ್ರತಿಭಟನೆ ಆರಂಭಿಸಿದ್ರು. ಇದನ್ನ ವಿರೋಧಿಸಿ ಮೌಜ್ಪುರದಲ್ಲಿ ಸಿಎಎ ಪರ ಇರುವವರು ಭಾನುವಾರ ಪ್ರತಿಭಟನೆಗೆ ಮುಂದಾದ್ರು. ಇದು ಸಿಎಎ ಪರ-ವಿರೋಧಿ ಗುಂಪುಗಳನ ನಡುವೆ ಸಂಘರ್ಷಕ್ಕೆ ಕಾರಣವಾಗಿ, ಭಾನುವಾರವೇ ಕಲ್ಲು ತೂರಾಟ ನಡೆದಿತ್ತು. ಪೊಲೀಸರು ಲಾಠಿಚಾರ್ಜ್ ನಡೆಸಿ ಕಲ್ಲು ತೂರಾಟ ನಡೆಸ್ತಿದ್ದವರನ್ನ ಚದುರಿಸಿ ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದಿದ್ರು. ಆದ್ರೆ, ಸೋಮವಾರ ಮತ್ತೆ ಎರಡು ಗುಂಪುಗಳ ನಡುವೆ ಮತ್ತೆ ಕಲ್ಲು ತೂರಾಟ ನಡೆದಿದೆ.
ದೆಹಲಿಯಲ್ಲಿ ಸಿಎಎ ಪರ-ವಿರೋಧಿ ಹೋರಾಟಕ್ಕೆ 5 ಬಲಿ!
ದೆಹಲಿಯ ಚಾಂದ್ಬಾಗ್, ಮೌಜ್ಪುರ, ಭಜನ್ಪುರ, ವಜೀರಾಬಾದ್, ಜಫರಾಬಾದ್ಗಳಲ್ಲಿ ಸೋಮವಾರ ಸಿಎಎ ಪರ-ವಿರೋಧಿ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ವು. ಇದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರತನ್ಲಾಲ್ ಎಂಬ ಹೆಡ್ ಕಾನ್ಸ್ಟೇಬಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೇ ರೀತಿ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದ ಮೊಹಮ್ಮದ್ ಫುರ್ಖಾನ್ ಅನ್ನೋ ವ್ಯಕ್ತಿಯೂ ಮೃತಪಟ್ಟಿದ್ದಾನೆ.
ಅಲ್ದೆ, ದೆಹಲಿಯ ಶಾದರಾ ಡಿಸಿಪಿ ಅಮಿತ್ ಶರ್ಮಾಗೆ ಕಲ್ಲೇಟು ತಗುಲಿ ತೀವ್ರ ಗಾಯಗಳಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಮೆಟ್ರೋ ಜಫರಾಬಾದ್, ಮೌಜ್ಪುರ ಮೆಟ್ರೋ ಸ್ಟೇಷನ್ಗಳನ್ನ ಸೋಮವಾರ ಬೆಳಗ್ಗಿನಿಂದಲೇ ಮುಚ್ಚಿತ್ತು. ಇಷ್ಟಾದ್ರೂ, ಎರಡು ಮೆಟ್ರೋ ಸ್ಟೇಷನ್ಗಳ ಅಕ್ಕಪಕ್ಕದ ಅಂಗಡಿಗಳು, ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಅಲ್ದೆ, ಹಲವು ಅಂಗಡಿಗಳಿಗೆ ಬೆಂಕಿ ಕೂಡ ಹಚ್ಚಲಾಗಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಟ್ವೀಟ್:
ದೆಹಲಿಯಲ್ಲಿ ನಡೆದಿರೋ ಹಿಂಸಾಚಾರದ ಕುರಿತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಅಲ್ದೆ, ಪರಿಸ್ಥಿತಿ ಹತೋಟಿಗೆ ತರುವಂತೆ ಕೇಂದ್ರ ಗೃಹ ಸಚಿವಾಲಯ ಮತ್ತು ಲೆಫ್ಟಿನೆಂಟ್ ಗವರ್ನರ್ಗೆ ಮನವಿ ಮಾಡಿದ್ದಾರೆ. ಇನ್ನು ಪರಿಸ್ಥಿತಿ ಕುರಿತು ಮಾಹಿತಿ ಪಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಸೂಚನೆ ನೀಡಿದ್ದಾರೆ.
Very distressing news regarding disturbance of peace and harmony in parts of Delhi coming in.
I sincerely urge Hon’ble LG n Hon'ble Union Home Minister to restore law and order n ensure that peace and harmony is maintained. Nobody should be allowed to orchestrate flagrations.— Arvind Kejriwal (@ArvindKejriwal) February 24, 2020
ಟ್ರಂಪ್ ಭೇಟಿ ವೇಳೆಯೇ ಶಾಂತಿ ಕದಡಲು ಪ್ರಯತ್ನ?
ಈಶಾನ್ಯ ದೆಹಲಿಯಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಲು ಕಾಣದ ಕೈಗಳು ಕೆಲಸ ಮಾಡ್ತಿವೆ ಅಂತಾ ಕೇಂದ್ರ ಸರ್ಕಾರ ಅನುಮಾನ ವ್ಯಕ್ತಪಡಿಸಿದೆ. ಯಾಕಂದ್ರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆಯೇ ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಕದಡಲು ಕೆಲವರು ಪ್ರಯತ್ನಿಸ್ತಿದ್ದಾರೆ ಅಂತಾ ಗಂಭೀರ ಆರೋಪ ಮಾಡಿದೆ. ಟ್ರಂಪ್ ಭೇಟಿ ವೇಳೆ ಗಲಭೆ ಎಬ್ಬಿಸಿದ್ರೆ, ಸಿಎಎ ವಿರೋಧಿ ಅಲೆ ಎಷ್ಟರ ಮಟ್ಟಿಗಿದೆ ಅಂತಾ ಬಿಂಬಿಸಲು ಸಾಧ್ಯವಾಗುತ್ತದೆ ಅನ್ನೋ ಕಾರಣಕ್ಕೆ ಪ್ರತಿಭಟನೆಯನ್ನ ಹಿಂಸಾಚಾರಕ್ಕೆ ತಿರುಗಿಸಲಾಗಿದೆ ಅಂತಾ ಕೇಂದ್ರ ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಒಟ್ನಲ್ಲಿ ವಿಶ್ವದ ದೊಡ್ಡಣ್ಣ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವೇಳೆ ದೆಹಲಿಯಲ್ಲಿ ಶಾಂತಿ ಕದಡಲು ಯತ್ನಿಸಿ, ಭಾರತಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಗಳು ನಡೆದಿವೆ. ಮಂಗಳವಾರ ಪೊಲೀಸರು ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸ್ತಾರೆ ಅನ್ನೋದ್ರ ಮೇಲೆ ಮತ್ತೆ ಕಲ್ಲು ತೂರಾಟ ನಡೆಯುತ್ತಾ ಇಲ್ವಾ ಅನ್ನೋ ನಿರ್ಧಾರವಾಗಲಿದೆ.
Published On - 7:22 am, Tue, 25 February 20