ಅರವಿಂದ ಕೇಜ್ರಿವಾಲ್ ಮನೆ ನವೀಕರಣ ವಿವಾದ: ಸಿಎಜಿ ಲೆಕ್ಕಪರಿಶೋಧನೆಗೆ ಗೃಹ ಸಚಿವಾಲಯ ಒಪ್ಪಿಗೆ

|

Updated on: Jun 27, 2023 | 6:54 PM

ಏಪ್ರಿಲ್‌ನಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ 45 ಕೋಟಿ ರೂಪಾಯಿಗಳ ನವೀಕರಣ ಕಾಮಗಾರಿಯ ಬಗ್ಗೆ ಬಿಜೆಪಿ ಆರೋಪಿಸಿತ್ತು.

ಅರವಿಂದ ಕೇಜ್ರಿವಾಲ್ ಮನೆ ನವೀಕರಣ ವಿವಾದ: ಸಿಎಜಿ ಲೆಕ್ಕಪರಿಶೋಧನೆಗೆ ಗೃಹ ಸಚಿವಾಲಯ ಒಪ್ಪಿಗೆ
ಅರವಿಂದ ಕೇಜ್ರಿವಾಲ್
Follow us on

ದೆಹಲಿ: ದೆಹಲಿ  ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ (Arvind Kejriwal) ಅವರ ಮನೆ ದುರಸ್ತಿಗೆ ಮಾಡಿರುವ ವೆಚ್ಚದ ಕುರಿತು ಸಿಎಜಿ ಆಡಿಟ್‌ ನಡೆಸಲಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್  (Delhi Lieutenant Governor)ಶಿಫಾರಸಿನ ಮೇರೆಗೆ ಸಿಎಜಿ ವಿಶೇಷ ಆಡಿಟ್‌ಗೆ ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ಅನುಮೋದನೆ ನೀಡಿದೆ. ಲೆಫ್ಟಿನೆಂಟ್ ಗವರ್ನರ್ ಸೆಕ್ರೆಟರಿಯೇಟ್ 24 ಮೇ 2023 ರಂದು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದು, ಮುಖ್ಯಮಂತ್ರಿಯವರ ಮನೆಯ ದುರಸ್ತಿಗೆ ಮಾಡಿದ ವೆಚ್ಚದ ಬಗ್ಗೆ ಗಂಭೀರವಾದ ಹಣಕಾಸಿನ ಅಕ್ರಮಗಳು ಮತ್ತು ನಿಯಮಗಳ ಉಲ್ಲಂಘನೆಯನ್ನು ಆರೋಪಿಸಿದ್ದಾರೆ. ಏಪ್ರಿಲ್ 27 ರಂದು, ಎಲ್​​​ಜಿ ಈ ವಿಷಯದ ಬಗ್ಗೆ ತನಿಖೆ ನಡೆಸಿ ವಾಸ್ತವ ವರದಿಯನ್ನು ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಕೇಳಿದ್ದರು. ಏಪ್ರಿಲ್‌ನಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ 45 ಕೋಟಿ ರೂಪಾಯಿಗಳ ನವೀಕರಣ ಕಾಮಗಾರಿಯ ಬಗ್ಗೆ ಬಿಜೆಪಿ (BJP) ಆರೋಪಿಸಿತ್ತು. ಮುಖ್ಯಮಂತ್ರಿಗಳು ಸಾರ್ವಜನಿಕರ ಹಣವನ್ನು ನವೀಕರಣಕ್ಕೆ ಬಳಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಕೇಜ್ರಿವಾಲ್ ಅವರು ತಮ್ಮ ಮನೆಗೆ ಡಯೊರ್ ಪಾಲಿಶ್, ವಿಯೆಟ್ನಾಂ ಮಾರ್ಬಲ್, ದುಬಾರಿ ಪರದೆಗಳು ಮತ್ತು ಅತ್ಯಾಧುನಿಕ ಕಾರ್ಪೆಟ್‌ಗಳಂತಹ ಅತಿರಂಜಿತ ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ನಾಯಕ ಸಂಬಿತ್ ಪಾತ್ರಾ ಅವರು ಸಿಎಂ ತಮ್ಮ ಪ್ರಾಮಾಣಿಕತೆ ಮತ್ತು ಸರಳತೆಯನ್ನು ವ್ಯಾಪಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಈ ವೇಳೆ ಎಎಪಿ ಕೇಜ್ರಿವಾಲ್  ಅವರನ್ನು  ಸಮರ್ಥಿಸಿಕೊಂಡಿತ್ತು. ಲೋಕೋಪಯೋಗಿ ಇಲಾಖೆ (PWD) ಶಿಫಾರಸಿನ ಮೇರೆಗೆ ನವೀಕರಣವನ್ನು ಕೈಗೊಳ್ಳಲಾಗಿದೆ ಎಂದು ಪಕ್ಷದ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಮತ ಬ್ಯಾಂಕ್ ರಾಜಕೀಯ, ತ್ರಿವಳಿ ತಲಾಖ್, ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್, ಡಿಎಂಕೆ ವಾಗ್ದಾಳಿ

ಬಿಜೆಪಿಯು ತಮ್ಮ ನಾಯಕನ ಮೇಲೆ ದಾಳಿ ಮಾಡುವ ಮೂಲಕ ‘ಅದಾನಿ ಸಮಸ್ಯೆ’ ಮತ್ತು ಪುಲ್ವಾಮಾ ಭಯೋತ್ಪಾದನಾ ದಾಳಿಯಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಪಕ್ಷ ಹೇಳಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಸೇರಿಕೊಂಡು ಕೇಜ್ರಿವಾಲ್ ಅವರ ಅಧಿಕಾರದಲ್ಲಿ ಉಳಿಯುವ ಹಕ್ಕನ್ನು ಪ್ರಶ್ನಿಸಿತ್ತು. ತಮ್ಮ ಪಕ್ಷಕ್ಕೆ ‘ಆಮ್ ಆದ್ಮಿ ಪಾರ್ಟಿ’ (ಸಾಮಾನ್ಯ ವ್ಯಕ್ತಿಯ ಪಕ್ಷ) ಎಂದು ಹೆಸರಿದ್ದರೂ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೆಹಲಿಯ ಜನರು ಹತಾಶವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಹುಡುಕುತ್ತಿದ್ದಾಗ ಕೇಜ್ರಿವಾಲ್ ತಮ್ಮ ಬಂಗಲೆಗಾಗಿ ಖರ್ಚು ಮಾಡಿದರು ಎಂದು ಪಕ್ಷದ ಹಿರಿಯ ನಾಯಕ ಅಜಯ್ ಮಾಕನ್ ಟ್ವೀಟ್ ಮಾಡಿದ್ದಾರೆ. ಈ ವಿಚಾರವಾಗಿ ಕೇಜ್ರಿವಾಲ್ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 6:50 pm, Tue, 27 June 23