
ಕೇರಳದ (Kerala) ಮಲಪ್ಪುರಂ (Malappuram) ಜಿಲ್ಲೆಯಲ್ಲಿ ವೇಗವಾಗಿ ಬಂದ ಕಾರೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದು, ಸ್ಕೂಟರ್ ಚಾಲಕ ಸ್ಥಳದಲ್ಲೇ ಮೃತರಾಗಿದ್ದಾರೆ. ಮೃತರನ್ನು ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಅಬ್ದುಲ್ ಖಾದರ್ ಮತ್ತು ಆತನ ಪತ್ನಿ ರುಕಿಯಾ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ವಿರುದ್ಧ ದಿಶೆಯಿಂದ ಬಂದ ಕಾರು ಗುದ್ದಿದೆ. ಹೀಗೆ ಡಿಕ್ಕಿ ಹೊಡೆದ ರಭಸದಲ್ಲಿ ಸ್ಕೂಟರ್ನಲ್ಲಿ ಹಿಂಬದಿ ಸವಾರರಾಗಿದ್ದ ರುಕಿಯಾ ಮೇಲಕ್ಕೆ ಚಿಮ್ಮಿ ಬಿದ್ದಿದ್ದಾರೆ. ಅಪಘಾತದ ವೇಳೆ ರುಕಿಯಾ ಸೀಟಿನಿಂದ ಜಾರಿ ಗಾಳಿಯಲ್ಲಿ ತೇಲಿದಂತಾಗಿ ದೊಪ್ಪನೆ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರುಕಿಯಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ವಾಹನವನ್ನು ಓವರ್ಟೇಕ್ ಮಾಡುವುದಕ್ಕಾಗಿ ರಭಸವಾಗಿ ನುಗ್ಗಿದ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. ಕಾರು ಗುದ್ದಿದ ಭರಕ್ಕೆ ಖಾದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಯುಎಇಯಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ಖಾದರ್ ಕೆಲವು ದಿನಗಳ ಹಿಂದೆಯಷ್ಟೇ ರಜೆಯಲ್ಲಿ ಊರಿಗೆ ಬಂದಿದ್ದರು. ಇವರು ತಾವನ್ನೂರ್ ನಲ್ಲಿ ಸಂಬಂಧಿಕರ ಮನೆಗೆ ಹೋಗಿ ಮರಳಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಶನಿವಾರ ಸಂಜೆ ಕುಟ್ಟಿಪುರಂ-ತಿರೂರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.
Published On - 5:39 pm, Mon, 22 August 22